ಹೆಬ್ರಿ: ಗ್ರಾಮೀಣ ಪ್ರದೇಶದಲ್ಲಿ ಪ್ರಾಕೃತಿಕ ಪ್ರಶಾಂತ ಪರಿಸರದಲ್ಲಿ ನೆಲೆನಿಂತ ಬೆಳ್ಳರ್ಪಾಡಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಪುಣ್ಯವಂತರು ಎಂದು ಉಡುಪಿ ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಹೇಳಿದರು.
ಅವರು ಬೆಳ್ಳರ್ಪಾಡಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗೃಹ ತೀರ್ಥ ಮಂಟಪ ಸಮರ್ಪಣೆ, ಬಿಂಬ ಪುನಃ ಪ್ರತಿಷ್ಠಾಪನಾ ಅಂಗವಾಗಿ ಫೆ.14 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅವಧಾನಿ ಗುಂಡಿಬೈಲು ವಿದ್ವಾನ್ ಸುಬ್ರಹ್ಮಣ್ಯ ಭಟ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಉದಯ ಕೃಷ್ಣಯ್ಯ ಚಾರಿಟೆಬಲ್ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಡುಪಿ ತಾ.ಪಂ. ಸದಸ್ಯೆ ಸುಗಂಧಿ ಜಿಯಾನಂದ ಹೆಗ್ಡೆ, ಬೈರಂಪಳ್ಳಿ ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಸಹಕರಿಸಿದವರನ್ನು ಸಮ್ಮಾನಿಸಲಾಯಿತು. ಬೆಳ್ಳರ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪಕ ಬಿ.ರಾಮಕೃಷ್ಣ ಭಟ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ, ಲಕ್ಷ್ಮಿನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜೇತ್ ಕುಮಾರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಗಸ್ವರ ವಾದನ, ಸಂಜೆ ಸಾಂಸ್ಕೃತಿಕ ಕಲರವ, ನೃತ್ಯ ವೈವಿಧ್ಯ ನಡೆಯಿತು.
ಫೆ. 17: ಬ್ರಹ್ಮಕಲಶ ದೇವಸ್ಥಾನದಲ್ಲಿ ಫೆ.17ರಂದು ಪಂಚವಿಂಶತಿ ದ್ರವ್ಯಮಿಳಿತ (501) ಬ್ರಹ್ಮಕಲಶಾಭಿಷೇಕ ಬ್ರಹ್ಮಕಲಶ ಮಹೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ 5 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಉಡುಪಿ ಶ್ರೀ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.