Home ನಂಬಿಕೆ ಸುತ್ತಮುತ್ತ ಶ್ರೀಕೃಷ್ಣ ದೇಹತ್ಯಾಗ ಮಾಡಿದ ನಿಜಧಾಮ ಭಾಲ್ಕಾ ಬಗ್ಗೆ ನಿಮಗೆಷ್ಟು ಗೊತ್ತು?

ಶ್ರೀಕೃಷ್ಣ ದೇಹತ್ಯಾಗ ಮಾಡಿದ ನಿಜಧಾಮ ಭಾಲ್ಕಾ ಬಗ್ಗೆ ನಿಮಗೆಷ್ಟು ಗೊತ್ತು?

5642
0
SHARE

ಶ್ರೀಕೃಷ್ಣನ ಬಾಲಲೀಲೆಯ ಬೃಂದಾವನ, ರಾಜಕಾರಣದಲ್ಲಿ ಪಳಗಿದ ಮಥುರೆ, ರಾಜನಾಗಿ ಆಳಿದ ದ್ವಾರಕೆಯ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಶ್ರೀ ಕೃಷ್ಣ ಅವತಾರ ಸಮಾಪ್ತಿ ಮಾಡಿ ತನ್ನ ನಿಜಧಾಮಕ್ಕೆ ನಿರ್ಗಮಿಸಿದ ಪ್ರಭಾಸ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೂ ಸಿಗುವುದಿಲ್ಲ. ಇಲ್ಲಿಗೆ ಸ್ವತಃ ಭೇಟಿ ನೀಡಿ ಹೆಚ್ಚಿನ ಮಾಹಿತಿ ಎಲ್ಲೂ ಸಿಗುವುದಿಲ್ಲ. ಇಲ್ಲಿಗೆ ಸ್ವತಃ ಭೇಟಿ ನೀಡಿ ಬಂದ ಲೇಖಕರ ಅನುಭವ ಕಥನ ಇದು.

ಕೆಲವು ವರ್ಷಗಳ ಕೆಳಗೆ ದ್ವಾರಕೆಗೆ ಹೋಗಿದ್ದಾಗ ಅಲ್ಲಿನ ಪಲಿಮಾರು ಮಠದಲ್ಲಿ ವಾಸ್ತವ್ಯ ಹೂಡಿದ್ದೆ. ಬೆಂಗಳೂರಿಗೆ ಮರಳಿ ಬಂದಾಗ ಪಲಿಮಾರು ಪಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಶ್ರೀಗಳೊಡನೆ “ದ್ವಾರಕೆಯ ಪಲಿಮಾರು ಮಠದಲ್ಲಿ ತಾವು ಪ್ರತಿಷ್ಠಾಪಿಸಿದ ಉಡುಪಿ ಕೃಷ್ಣನನ್ನು ಕಂಡೆ. ದ್ವಾರಕೆಯಿಂದ ಉಡುಪಿಗೆ ಬಂದು ಶ್ರೀ ಮಧ್ವಾಚಾರ್ಯರ ಕೈ ಸೇರಿದ ಕೃಷ್ಣ ಈಗ ಉಡುಪಿ ಶ್ರೀಗಳ ಮೂಲಕ ಇನ್ನೊಂದು ಪ್ರತಿರೂಪದಲ್ಲಿ ದ್ವಾರಕೆಗೆ ತಲಪಿದ” ಎಂದಾಗ ಶ್ರೀಗಳು “ದ್ವಾರಕಾ ದರ್ಶನ ಮಾಡಿದಿರಿ. ಆದರೆ ನೀವು ಪ್ರಭಾಸಕ್ಕೆ ಹೋಗಲಿಲ್ಲವೆ? ಅಲ್ಲಿಗೆ ಅವಶ್ಯವಾಗಿ ಹೋಗಬೇಕಿತ್ತು” ಎಂದಿದ್ದರು.

ಇನ್ನೊಮ್ಮೆ ದ್ವಾರಕೆಗೆ ಹೋಗುವ ಅವಕಾಶ ಬಂದಾಗ ಪ್ರಭಾಸಕ್ಕೆ ಹೋಗಲೇಬೇಕೆಂದು ಆ ಕ್ಷಣದಲ್ಲಿ ಸಂಕಲ್ಪಿಸಿದ್ದೆ. ಈ ಸಂಕಲ್ಪ ಈಡೇರಲು ಕೆಲವು ವರ್ಷಗಳೇ ಹಿಡಿದಿದ್ದವು. ಪ್ರಭಾಸ ಪಟ್ಟಣ ಒಂದು ದೊಡ್ಡ ಊರು. ಸುಪ್ರಸಿದ್ಧ ಸೋಮನಾಥ ದೇವಾಲಯ ಇರುವುದು ಇಲ್ಲಿ. ಇಲ್ಲಿ ಶ್ರೀಕೃಷ್ಣನ ನಿರ್ವಾಣಧಾಮಕ್ಕೆ ಭಾಲ್ಕಾ ತೀರ್ಥ ಎಂದು ಹೆಸರು. ಸೋಮನಾಥ ದೇವಾಲಯದಿಂದ ಅಲ್ಲಿಗೆ ಸುಮಾರು ಐದು ಕಿಲೋಮೀಟರ್ ದೂರ.

ನಾನು ಸ್ವರ್ಗ ಸುಂದರ ದ್ವಾರಕೆಯನ್ನು ನೋಡಿದ್ದೆ. ಶ್ರೀ ಕೃಷ್ಣನ ನಿರ್ವಾಣ ಕ್ಷೇತ್ರ ಕೂಡ ಅಷ್ಟೇ ಸುಂದರವಾಗಿರಬಹುದು ಎಂದು ಮನಸ್ಸಿನಲ್ಲಿ ಭಾವನೆ ಇತ್ತು. ಆದರೆ ಈ ಧಾಮ ತಲುಪುತ್ತಲೇ ಅಲ್ಲಿನ ಅವ್ಯವಸ್ಥೆ, ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ನೋಡಿ ನನಗೆ ಅಪಾರ ನೋವಾಯಿತು.

ಆದರೆ ಶ್ರೀ ಕೃಷ್ಣ ದೇಹತ್ಯಾಗ ಮಾಡಿದ ಸ್ಥಳದಲ್ಲಿರುವ ಭಾಲ್ಕಾ ಮಂದಿರದೊಳಗೆ ಕಾಲಿರಿಸುತ್ತಲೇ ನನ್ನ ಮನಸ್ಸಿನ ಕಹಿ ದೂರವಾಯಿತು. ದೇವಸ್ಥಾನದಲ್ಲಿ ಕಾಲು ಚಾಚಿ ಕುಳಿತಿರುವ ಸುಂದರ ಮನಮೋಹಕ ಮೂರ್ತಿಯನ್ನು ನೋಡಿದಾಕ್ಷಣ ಭಾವ್ರೋದ್ರೇಕಕ್ಕೆ ಒಳಗಾಗಿ ನನ್ನ ಕಣ್ಣಂಚಿನಲ್ಲಿ ನೀರು ಬಂತು. ಶ್ರೀಕೃಷ್ಣನ ಜನನದಿಂದ ಅವನು ದ್ವಾರಕೆಗೆ ಬರುವ ತನಕ ಮಾಡಿದ್ದ ಅದ್ಬುತ ಪವಾಡಗಳು ನನ್ನ ನೆನಪಿನ ಪಟಲದಲ್ಲಿ ಒಮ್ಮೇಗೇ ಮೂಡಿ ಬಂದು, ದುಃಖ ಉಮ್ಮಳಿಸಿ ಬಂತು. ದುಷ್ಟರ ಸಂಹಾರ, ಶಿಷ್ಯರ ರಕ್ಷಣೆಗಾಗಿಯೇ ಅವತರಿಸಿದ ಈ ಮಾಹಾನ್ ಅವತಾರ ಪುರುಷ ಆದೆಷ್ಟೋ ದುಷ್ಟ ರಾಜರನ್ನು ಸಂಹಾರ ಮಾಡಿದ್ದರೂ ಯಾವ ರಾಜ್ಯದಲ್ಲೂ ತನ್ನ ಹಕ್ಕನ್ನು ಸ್ಥಾಪಿಸದೆ ಅವರವರ ಕುಟುಂಬದ ಸಂತಾನವನ್ನೇ ಪಟ್ಟದಲ್ಲಿ ಕೂರಿಸಿ ಪಟ್ಟಾಭಿಷೇಕ ಮಾಡಿಸಿದ್ದ. ಭಗವದ್ಗೀತೆಯಲ್ಲಿ ಹೇಳಿದ್ದ ನಿಷ್ಕಾಮಕರ್ಮಿಯ ಮೂರ್ತ ಸ್ವರೂಪ ಇವನು.

ತನ್ನ ಅವತಾರ ಕಾರ್ಯ ಪೂರ್ಣವಾಯಿತು ಎಂದು ಪ್ರಭಾಸದ ಮರದಡಿಯಲ್ಲಿ ಒರಗಿ ಕುಳಿತಿರುವ ಪ್ರಭಾಸದ ಶ್ರೀಕೃಷ್ಣನ ಮೂರ್ತಿ ಚೇತೋಹಾರಿ. ಕಣ್ತುಂಬ ನೋಡಿದಷ್ಟೂ ಸಾಲದು. ಇನ್ನೂ ನೋಡುತ್ತಾ ಇರೋಣ ಎಂಬ ಭಾವನೆ ಮೂಡಿಸುತ್ತದೆ. ಶ್ರೀ ಕೃಷ್ಣನ ಜೀವನ ಚರಿತ್ರೆಯಂತೆ ಅವನ ಅವತಾರ ಸಮಾಪ್ತಿಯ ಕಥೆಯೂ ರೋಚಕ.

ಆದಿಶೇಷ ಸ್ವರ್ಗಕ್ಕೆ ತೆರಳಿದ ದಾವುಜಿ ನಿ ಗುಫಾ
ಸ್ಥಳಪುರಾಣದ ಪ್ರಕಾರ ಬಲರಾಮ ಶ್ರೀಕೃಷ್ಣನ ಅಂತಿಮ ಯಾತ್ರೆಯಲ್ಲಿ ಜೊತೆಗೇ ಸಾಗಿದ್ದ. ಶ್ರೀಕೃಷ್ಣನ ನಿರ್ಯಾಣವನ್ನು ವೀಕ್ಷಿಸಿದ ಬಳಿಕ ಬಲರಾಮ ತನ್ನ ಮಾನವ ದೇಹವನ್ನು ತ್ಯಜಿಸಿ ಮೂಲ ಆದಿಶೇಷನ ರೂಪದಲ್ಲಿ ವೈಕುಂಠಕ್ಕೆ ಸಾಗಿದ. ದೇಹೋತ್ಸರ್ಗದ ಸಮೀಪದಲ್ಲಿರುವ ಒಂದು ಗುಹೆಯ ಗೋಡೆಯ ಮೇಲೆ ಆದಿಶೇಷನ ಭಿತ್ತಿಶಿಲ್ಪ ಇದೆ. ಆದಿಶೇಷ ಸ್ವರ್ಗಕ್ಕೆ ತೆರಳಿದ ಜಾಗ ಇದೆಂದು ಹೇಳುತ್ತಾರೆ. ಈ ಗುಹೆಗೆ ದಾವುಜಿ ನಿ ಗುಫಾ (ಹಿರಿಯಣ್ಣ ಅರ್ಥಾತ್ ಬಲರಾಮನ ಗುಹೆ) ಎಂದು ಹೆಸರಿದೆ.

ಪಿತೃ ತರ್ಪಣಕ್ಕೆ ಪ್ರಶಸ್ತ ಮೋಕ್ಷ ತೀರ್ಥ

ಲಕ್ಷ್ಮೀ ನಾರಾಯಣ ದೇವಾಲಯದ ಬಳಿ ಇರುವ ಹಿರಣ್ (ಹಿರಣ್ಯ), ಕಪಿಲಾ ಮತ್ತು ಗುಪ್ತಗಾಮಿ ಸರಸ್ವತಿಯ ಸಂಗಮ ಕ್ಷೇತ್ರಕ್ಕೆ ಮೋಕ್ಷತೀರ್ಥ ಎಂದು ಹೆಸರು.ಇಲ್ಲಿನ ಸುಂದರ ಪ್ರಶಾಂತ ಜಾಗದಲ್ಲಿ ಕುಳಿತವರು ಗಂಟೆಗಟ್ಟಲೆ ಮೈಮತೆರು ಇಲ್ಲೇ ಇರುತ್ತಾರೆ.
ಇಲ್ಲಿನ ಸ್ನಾನದ ಕುಂಡಕ್ಕೆ ತ್ರೀವೇಣಿ ಸಂಗಮ ಸ್ನಾನ ಘಾಟ್ ಎಂದು ಹೆಸರು. ಪಿತೃ ತರ್ಪಣ ಕೊಡಲು ಇದು ಪ್ರಶಸ್ತ ಜಾಗ ಎಂದು ನಂಬಿಕೆ.

ಶ್ರೀ ಕೃಷ್ಣನ ಅಗ್ನಿ ಸಂಸ್ಕಾರ ತಾಣ ದೇಹೋತ್ಸರ್ಗದ
ಭಾಲ್ಕಾ ತೀರ್ಥದ ಬಳಿ ಬಾಣದ ಏಟು ತಿಂದ ಶ್ರೀ ಕೃಷ್ಣ ಕುಂಟುತ್ತ ಪೂರ್ವಕ್ಕೆ ನಡೆದು, ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಹಿರಣ್ಯ ನದಿಯ ದಡ ಸೇರಿದ್ದ. ಅಲ್ಲಿ ತ್ರಿವೇಣಿ ಸಂಗಮದ ಬಳಿ ಒಂದು ಪುಟ್ಟ ಗುಹೆಯಲ್ಲಿ ಕುಳಿತು, ಕೊನೆಯುಸಿರು ಎಳೆದಿದ್ದ. ಅವನು ದೇಹವನ್ನುತ್ರಿವೇಣಿ ಸಂಗಮಕ್ಕೆ ಒಯ್ದು ಅಗ್ನಿ ಸಂಸ್ಕಾರ ಮಾಡಲಾಗಿತ್ತು.

ಶ್ರೀಕೃಷ್ಣನ ಪಾರ್ಥಿವ ಶರೀರದ ಅಗ್ನಿ ಸಂಸ್ಕಾರ ಮಾಡಿದ ಜಾಗಕ್ಕೆ ದೇಹೋತ್ಸರ್ಗ ಎಂದು ಹೆಸರು. ಇದರ ಪಕ್ಕದಲ್ಲೇ ಮಹಾಕಾಳಿ ದೇವಾಲಯ ಇದೆ. ಶ್ರೀ ಕೃಷ್ಣ ಇಲ್ಲಿಂದ ವೈಕುಂಠಕ್ಕೆ ತೆರಳಿದ್ದ ಕಾರಣ ಈ ಜಾಗಕ್ಕೆ ಶ್ರೀ ಕೃಷ್ಣ ನಿಜಧಾಮ ಪ್ರಸ್ಥಾನ ತೀರ್ಥ ಎಂಬ ಹೆಸರಿದೆ. ಒಂದು ಅಮೃತಶಿಲೆಯ ಮೇಲೆ ಅಚ್ಚೊತ್ತಿರುವ ಶ್ರೀ ಕೃಷ್ಣನ ಪಾದಪದ್ಮಗಳ ಗುರುತು ಇಲ್ಲಿನ ಪೂಜಾಸ್ಥಾನದಲ್ಲಿರುವ ಕಾರಣ ಈ ಕ್ಷೇತ್ರಕ್ಕೆ ಗೋಲಕ್ ಧಾಮ ಅಥವಾ
ಗೋಲಕ್ ತೀರ್ಥ ಎಂದೂ ಹೆಸರಿದೆ.
ದೇಹೋತ್ಸರ್ಗ ಇರುವುದು ಹಿರಣ್ಯ ನದಿಯ ತೀರದಲ್ಲಿ,ಸೋಮನಾಥ ದೇವಾಲಯದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ. ಈ ಪ್ರದೇಶದ ಅಹೀರ್ (ಗೋಪಾಲಕ) ಮಹಿಳೆಯರು ಇಂದಿಗೂ ಶ್ರೀ ಕೃಷ್ಣನ ದೇಹಾವಸಾನದ ಶೋಕಾಸೂಚಕವಾಗಿ ಕಪ್ಪು ಬಟ್ಟೆ ಉಡುತ್ತಾರೆ.
ಸ್ವಾಮಿ ಶ್ರೀ ಗಜಾನನಂದ ಸರಸ್ವತಿಯವರು ಪುರಾಣಗಳನ್ನು ಕೂಲಂಕಷವಾಗಿ ಅಭ್ಯಸಿಸಿ, ಶ್ರೀಕೃಷ್ಣನ ನಿಜಧಾಮ ಪ್ರಸ್ಥಾನವನ್ನು ಚೈತ್ರ ಹುಣ್ಣಿಮೆ ಎಂದು ನಿರ್ಧರಿಸಿದ್ದಾರೆ. ಅವರ ಲೆಕ್ಕದ ಪ್ರಕಾರ ಶ್ರೀಕೃಷ್ಣ ಪೂರ್ವ 3102ರ ಫೆಬ್ರವರಿ 18ರಂದು ಮುಂಜಾನೆ 2.27ಕ್ಕೆ ವೈಕುಂಠಧಾಮ ಯಾತ್ರೆ ಮಾಡಿದ್ದ ಎಂದು ದೇಹೋತ್ಸರ್ಗ ದೇವಾಲಯದ ಭಿತ್ತಿಫಲಕ ಹೇಳುತ್ತದೆ. ಇದೇ ದಿನ ದ್ವಾಪರಯುಗ ಮುಕ್ತಾಯವಾಗಿ ಕಲಿಯುಗ ಆರಂಭವಾಗಿತ್ತು.

ಶ್ರೀಕೃಷ್ಣ ಮಿರಮಿಸಿದ್ದ ಗೀತಾ ಮಂದಿರ

ದೇಹೋತ್ಸರ್ಗ ಕ್ಷೇತ್ರದಿಂದ ತುಸು ದೂರದಲ್ಲಿ, ಹಿರಣ್ಯ ನದೀ ತೀರದಲ್ಲಿ ಸುಂದರ ಗೀತಾ ಮಂದಿರ ಇದೆ. ದೇಹೋತ್ಸರ್ಗಕ್ಕೆ ತಲುಪುವ ಮೊದಲು ಶ್ರೀ ಕೃಷ್ಣ ಇಲ್ಲಿ ಕುಳಿತು ವಿಶ್ರಮಿಸಿದ ಎನ್ನುತ್ತಾರೆ. ಶ್ವೇತ ಅಮೃತ ಶಿಲೆಯ ಈ ದಿವ್ಯ ಸುಂದರ ದೇವಾಲಯವನ್ನು 1970ರಲ್ಲಿ ಬಿರ್ಲಾ ಕುಟುಂಬದವರು ನಿರ್ಮಿಸಿದ್ದ ಕಾರಣ ಇದಕ್ಕೆ ಬಿರ್ಲಾ ಮಂದಿರ ಎಂದ ಹೆಸರಿದೆ. ಇಲ್ಲಿನ ಗರ್ಭಗುಡಿಯಲ್ಲಿ ಮುರಲೀಧರ ಶ್ರೀಕೃಷ್ಣ ಮೂರ್ತಿ ಇದ್ದು, ಅವನ ಇಕ್ಕೆಲಗಳಲ್ಲಿ ಲಕ್ಷೀ ನಾರಾಯಣ ಮತ್ತು ಶ್ರೀ ರಾಮನ ಮೂರ್ತಿಗಳಿವೆ.
ಗೀತಾಮಂದಿರದ ಶ್ವೇತ ಅಮೃತಶಿಲೆಯ 18 ಸ್ತಂಭಗಳ ಮೇಲೆ ಭಗವದ್ಗೀತೆಯ 18 ಅಧ್ಯಾಯಗಳನ್ನು ಕೊರೆಯಲಾಗಿದೆ. ಈ ಮಂದಿರದಲ್ಲಿ ಪ್ರತಿಯೊಂದು ಶಬ್ದವೂ ಪ್ರತಿಧ್ವನಿ ಕೊಡುತ್ತದೆ. ಇಲ್ಲಿ ಗೀತಾಪಾಠ ನಡೆದಾಗ ಮಂದಿರದ ಸುತ್ತ ಪ್ರತಿಧ್ವನಿಯಾಗುತ್ತ ತಿರುಗುವ ಶ್ಲೋಕಗಳು ಅಪೂರ್ವ ದಿವ್ಯಾನುಭವ ಕೊಡುತ್ತವೆ. ಗೀತಾ ಮಂದಿರದ ಬಲಭಾಗದಲ್ಲಿ ಅನಂತಶೇಷನ ರೂಪದಲ್ಲಿ ಬಲಭದ್ರನ ಮೂರ್ತಿ ಇರುವ ಗುಡಿ ಇದೆ

ಉದ್ಧವ ಗೀತೆ ಎಂಬ ಹಂಸಗೀತೆ

ಭಾಗವತ ಪುರಾಣದ ಪ್ರಕಾರ ಶ್ರೀ ಕೃಷ್ಣ ದ್ವಾರಕೆಯನ್ನು ಬಿಟ್ಟು ಹೊರಟಾಗ ತನ್ನ ರಾಣಿಯರಿಗೂ ತಿಳಿಸಿರಲಿಲ್ಲ. ತನ್ನ ಪ್ರಾಣಮಿತ್ರ ಅರ್ಜನನಿಗೂ ಈ ಬಗ್ಗೆ ಹೇಳಿರಲಿಲ್ಲ. ಭಗವಂತನ ಮಹಾನಿರ್ವಾಣ ಯಾತ್ರೆಯಲ್ಲಿ ಆಪ್ತ ಗೆಳೆಯ ಮತ್ತು ಸಲಹೆಗಾರ ಹಾಗೂ ಹತ್ತಿರದ ಬಂಧು (ವಾಸುದೇವನ ಸೋದರ ದೇವಭಾಗನ ಮಗ) ಉದ್ಧವ ಮಾತ್ರ ಜೊತೆಗೆ ಹೋಗಿದ್ದ.

ಶ್ರೀ ಕೃಷ್ಣನನ್ನು ಭಗವಂತನೆಂದು ಅರಿತುಕೊಂಡಿದ್ದ ಜ್ಞಾನಿ ಉದ್ಧವ. ಯಾದವಕುಲದ ಪರಿಸಮಾಪ್ತಿಯ ಬಗೆಗೆ ತಿಳಿದು ಅವನಿಗೆ ದುಃಖವಾಗಿತ್ತು.“ನೀನು ದ್ವಾರಕೆಗೆ ಯಾಕೆ ಮರಳುವುದಿಲ್ಲ? ನಿನ್ನ ಕುಲದವರನ್ನು ಯಾಕೆ ಸರ್ವನಾಶದಿಂದ ಕಾಪಾಡುವುದಿಲ್ಲ?” ಎಂದು ಭಗವಂತನನ್ನು ಪ್ರಶ್ನಿಸಿದ್ದ.

“ಯಾದವರು ಅಧಿಕಾರ, ಶೌರ್ಯ ಮತ್ತು ಅದೃಷ್ಟದ ಅಹಂಕಾರದಿಂದ ಮತ್ತರಾಗಿದ್ದಾರೆ. ಇವರು ಜಗತ್ತನ್ನೇ ಗೆಲ್ಲುವ ಆಕಾಂಕ್ಷೆ ಹೊಂದಿದ್ದಾರೆ. ಸಮುದ್ರ ತನ್ನ ತೀರಗಳ ಮಿತಿಯಲ್ಲಿರುವಂತೆ ಯದುಕುಲ ನನ್ನಿಂದಾಗಿ ಮಿತಿಯಲ್ಲಿದ್ದಾನೆ. ನಾನು ತೆರಳಿದ ಬಳಿಕ ಇವರು ಮದಮತ್ತರಾಗಿ ಲೋಕದ ವಿನಾಶಕ್ಕೆ ಕಾರಣರಾಗುತ್ತಾರೆ. ಹೀಗಾಗಿ ನಾನು ಇಹಲೋಕ ತ್ಯಾಗ ಮಾಡುವ ಮೊದಲು ಯದುವಂಶವನ್ನು ನಾಶಮಾಡುವುದು ಅಗತ್ಯವಾಗಿದೆ” ಎಂದು ಶ್ರೀಕೃಷ್ಣ ಉದ್ಧವನಿಗೆ ಹೇಳಿ ಅವನಿಗೆ ವೇದಾಂತ ದರ್ಶನ ಮಾಡಿದ್ದ. ಶ್ರೀಕೃಷ್ಣ ಉದ್ಧವನಿಗೆ ಬೋಧಿಸಿದ ಗೀತೆಗೆ ಉದ್ಧವ ಗೀತೆ ಎಂದು ಹೆಸರು. ಇದು ಅವಧೂಥ ಅಥವಾ ಪರಮಹಂಸರ ಬಗ್ಗೆ ತಿಳಿಸುವ ಕಾರಣ ಹಂಸಗೀತೆ ಎಂದೂ ಹೆಸರಿದೆ. ಶ್ರೀಕೃಷ್ಣ ಪ್ರಭಾಸದಲ್ಲಿ ರಥದಿಂದ ಇಳಿದ ಬಳಿಕ ಶ್ರೀಕೃಷ್ಣ ಆದೇಶದಂತೆ ಉದ್ಧವ ಬದರಿಕಾಶ್ರಮಕ್ಕೆ ತೆರಳಿ ತಪಸ್ಸಿಗೆ ಕುಳಿತಿದ್ದ.

ಲಕ್ಷ್ಮಿ ನಾರಾಯಣ ದೇವಾಲಯ

ಬಲರಾಮನ ಗುಡಿಯ ಪಕ್ಕದಲ್ಲಿರುವ ಸುಂದರ ಲಕ್ಷ್ಮಿ ದೇವಾಲಯ ಬದ್ರೀನಾಥದ ಪ್ರತಿಕೃತಿ ಎನ್ನುತ್ತಾರೆ. ಇದರ ಅಂಗಣದಲ್ಲಿ ಪುಷ್ಟಿ ಮಾರ್ಗದ ಸ್ಥಾಪಕ ಶ್ರೀ ವಲ್ಲಭಾಚಾರ್ಯರು ನೆಲೆಸಿದ್ದರು.

ವಾಲಿಯ ಅವತಾರ
ಶ್ರೀಕೃಷ್ಣನ ಸಾವಿಗೆ ಕಾರಣನಾದ ವ್ಯಾಧ ರಾಮಾಯಣದ ವಾನರ ವೀರ ವಾಲಿಯ ಅವತಾರ ಎಂದು ಒಂದು ಪುರಾಣ ಕಥೆ ಹೇಳುತ್ತದೆ.

ರಾಮಾಯಣದಲ್ಲಿ ಶ್ರೀರಾಮ ಪೊದೆಗಳ ಮರೆಯಿಂದ ವಾಲಿಯ ಮೇಲೆ ಬಾಣ ಎಸೆದು ಅವನ ಸಾವಿಗೆ ಕಾರಣನಾಗಿದ್ದ. ವಾಲಿ ಕೊನೆಯುಸಿರು ಎಳೆಯುತ್ತಿರುವಾಗ ಶ್ರೀರಾಮ ಅವನನ್ನು ಹರಸಿ, “ನಿನಗೆ ಮುಂದಿನ ಜನ್ಮದಲ್ಲಿ ಈ ಹತ್ಯೆಗೆ ಪ್ರತೀಕಾರ ಮಾಡುವ ಅವಕಾಶ ಕೊಡುತ್ತೇನೆ” ಎಂದು ವಾಗ್ದಾನ ಮಾಡಿದ್ದ.

ಮಹಾಭಾರತದ ಕೊನೆಯಲ್ಲಿ ಜರಾ ಶ್ರೀಕೃಷ್ಣನ ಪಾದವನ್ನು ಮೃಗವೆಂದು ತಿಳಿದು ಬಾಣ ಎಸೆದಿದ್ದ. ತನ್ನಿಂದಾದ ಪ್ರಮಾಣಕ್ಕೆ ಮರುಗುತ್ತ ಕುಳಿತಿದ್ದ ಜರಾನನ್ನು ಶ್ರೀಕೃಷ್ಣ ಸಂತೈಸಿದ್ದ. “ಜರಾ, ನೀನು ತ್ರೇತಾಯುಗದಲ್ಲಿ ವಾಲಿಯಾಗಿದ್ದೆ. ನಾನು ರಾಮನಾಗಿ ನಿನ್ನ ಹತ್ಯೆ ಮಾಡಿದ್ದೆ. ಈ ಜನ್ನದಲ್ಲಿ ನಿನಗೆ ಪ್ರತೀಕಾರ ಮಾಡುವ ಅವಕಾಶ ಸಿಕ್ಕಿತು. ಇದರಲ್ಲಿ ನಿನ್ನ ತಪ್ಪು ಏನೂ ಇಲ್ಲ. ಎಲ್ಲವೂ ನನ್ನದೇ ಸಂಕಲ್ಪ. ನೀನು ನಿಮಿತ್ತ ಮಾತ್ರ” ಎಂದು ಹೇಳಿದ್ದ.

ಶ್ರೀಕೃಷ್ಣ ನಿರ್ವಾಣದ ಏಳು ದಿನಗಳ ಬಳಿಕ ದ್ವಾರಕೆಯನ್ನು ಸಮುದ್ರ ನುಂಗಿ ಹಾಕಿತ್ತು.

ಮಹಾಭಾರತ ಯುದ್ದದಲ್ಲಿ ಕುರುಕ್ಷೇತ್ರದ ಯುದ್ಧ ಭೂಮಿಯಲ್ಲಿ ಗಾಂಧಾರಿಯ ನೂರು ಮಕ್ಕಳೂ ಅಸುನೀಗಿದ್ದರು. ದುರ್ಯೋಧನನ ಮೃತ್ಯುವಿನ ಬಳಿಕ ಶ್ರೀಕೃಷ್ಣ ಗಾಂಧಾರಿಯನ್ನು ಭೇಟಿ ಮಾಡಲು ಹೋಗಿದ್ದ. ಗಾಂಧಾರಿ ಪುತ್ರಶೋಕದಲ್ಲಿ ಮುಳುಗಿದ್ದಳು. ಶ್ರೀಕೃಷ್ಣನಿಗೆ ಯುದ್ಧ ನಿಲ್ಲಿಸಲು ಸಾಧ್ಯವಿತ್ತು. ಆದರೆ ಬೇಕೇಂದೇ ಅವನು ಯುದ್ಧ ನಿಲ್ಲಿಸಲಿಲ್ಲ ಎಂದು ಗಾಂಧಾರಿ ಅವನನ್ನು ದೂಷಿಸಿದಳು.“ನನ್ನ ಕುಲ ಅಂತ್ಯವಾದಂತೆ ನಿನ್ನ ಯಾದವ ಕುಲವೂ ಇಂದಿಗೆ ಮೂವತ್ತಾರು ವರ್ಷಗಳಲ್ಲಿ ನಾಶವಾಗಲಿ” ಎಂದು ಆಕೆ ಶಾಪ ನೀಡಿದ್ದಳು. ಯಾದವರು ಅಹಂಕಾರದಿಂದ ಸೊಕ್ಕಿದ್ದಾರೆ, ಅಧರ್ಮಿಗಳಾಗಿದ್ದಾರೆ ಎಂದು ಯೋಚಿಸುತ್ತಿದ್ದ ಶ್ರೀಕೃಷ್ಣ, ಗಾಂಧಾರಿಯ ಮಾತಿಗೆ ‘ತಥಾಸ್ತು’ ಎಂದಿದ್ದ.

ಶ್ರೀಕೃಷ್ಣ-ಜಾಂಬವತಿಯರ ಮಗ ಸಾಂಬ ಸದಾಶಿವ ವರದಾನದಿಂದ ಹುಟ್ಟಿದವನು. ಇವನು ತಂದೆಯಂತೆ ಸುಂದರಾಂಗ ಮಾತ್ರವೇ ಅಲ್ಲ, ಕಿಡಿಗೇಡಿಯೂ ಆಗಿದ್ದ. ಇವನು ಗರ್ಭಿಣಿ ಹೆಣ್ಣಿನ ವೇಷಧರಿಸಿ, ತನ್ನ ಗೆಳೆಯರೊಡನೆ ಋಷಿಗಳ ಬಳಿಗೆ ಹೋಗಿ ತನ್ನ ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ಕೇಳಿದ್ದ. ನಿಜ ಅರಿತಿದ್ದ ಋಷಿಗಳು ಸಿಟ್ಟಿಗೆದ್ದಿದ್ದರು. “ನಿನಗೆ ಕಬ್ಬಿಣದ ಮುಸಲ (ಒನಕೆ) ಹುಟ್ಟುತ್ತದೆ. ಅದು ನಿನ್ನ ಕುಲದ ನಾಶಕ್ಕೆ ಕಾರಣವಾಗಲಿದೆ” ಎಂದು ಶಪಿಸಿದ್ದರು.

ಸಾಂಬ ಮರುದಿನವೇ ಪ್ರಸವ ವೇದನೆ ಅನುಭವಿಸಿ ಕಬ್ಬಿಣದ ಒನಕೆಯನ್ನು ಹೆತ್ತಿದ್ದ.ದೂತರಿಂದ ಸುದ್ದಿ ತಿಳಿದ ಉಗ್ರಸೇನ ಒನಕೆಯನ್ನು ಅರೆದು ಸಮುದ್ರಕ್ಕೆ ಎಸೆಯಲು ಆದೇಶ ನೀಡಿದ್ದ, ಸಮುದ್ರದ ಅಲೆಗಳು ಒನಕೆಯ ಚಿಕ್ಕ ತುಂಡುಗಳನ್ನು ದ್ವಾರಕೆಯ ತೀರಕ್ಕೆ ತಂದು ಹಾಕಿದವು. ಅದರ ಅಂಶದಿಂದ ಬಿದಿರು ಹುಕ್ಕುಗಳು ಬೆಳೆದಿದ್ದವು. ಈ ಬಿದಿರುಗಳಿಂದ ತಯಾರದ ಬಾಣಗಳು ಯಾದವರ ಬತ್ತಳಿಕೆ ಸೇರಿದ್ದವು.

ಮಹಾಭಾರತ ಯುದ್ಧದ ಮೂವತ್ತಾರು ವರ್ಷಗಳ ಬಳಿಕ ಒಂದು ಹಬ್ಬದಲ್ಲಿ ಕುಡಿದು ಮತ್ತೇರಿದ್ದ ಯಾದವರ ನಡುವೆ ಕಲಹ ಹುಟ್ಟಿತು. ಅವರು ಒಬ್ಬರನ್ನೊಬ್ಬರು ಬಾಣಗಳಿಂದ ಹೊಡೆದು ಕೊಂದಿದ್ದರು. ಗಾಂಧಾರಿಯ ಶಾಪದಂತೆ ಯಾದವಕುಲ ನಾಶವಾಗಿತ್ತು. ಯಾದವರ ಹತ್ಯಾಕಾಂಡ ಆರಂಭವಾಗುವ ಮೊದಲೇ ಶ್ರೀಕೃಷ್ಣನಿಗೆ ಅದು ತಿಳಿದಿತ್ತು ಅವನು ಈ ಅನಾಹುತವನ್ನು ನೋಡಲಾಗದೆ, ಯಾರಿಗೂ ಹೇಳದೆ ದ್ವಾರಕೆಯಿಂದ ಹೊರಟಿದ್ದ. ಸಾರಥಿ ದಾರುಕ ಅವನನ್ನು ರಥದಲ್ಲಿ ಪ್ರಭಾಸ ಪಟ್ಟಣದ ಬಳಿ ಬಿಟ್ಟಿದ್ದ.

ಅಲ್ಲೊಂದು ಅರಣ್ಯದಲ್ಲಿ ಶ್ರೀಕೃಷ್ಣ ಒಂದು ಆಲದಮರದ ಕೆಳಗೆ ಧ್ಯಾನ್ಯಮಗ್ನನಾಗಿ ಕುಳಿತಿದ್ದ. ಆಗಲೇ ಜರಾ ಎಂಬ ವ್ಯಾಧ ಅಲ್ಲಿಗೆ ಬೇಟೆಯಾಡಲು ಬಂದಿದ್ದ.ಅವನ ಬತ್ತಳಿಕೆಯಲ್ಲಿ ಒಂದು ವಿಶೇಷ ಬಾಣ ಇತ್ತು. ಯಾದವರು ಸಮುದ್ರಕ್ಕೆ ಎಸೆದಿದ್ದ ಒನಕೆಯ ಒಂದು ತುಂಡು ಈ ಬಾಣದ ತುದಿಯಲ್ಲಿತ್ತು! ಶ್ರೀ ಕೃಷ್ಣ ಕಾಲು ನೀಡಿ ಹೆಬ್ಬೆರಳು ಆಡಿಸುತ್ತಿದ್ದ. ಕೆಂಪಗಿನ ಬೆರಳನ್ನು ನೋಡಿ ವ್ಯಾಧ ಇದಾವುದೋ ಪ್ರಾಣಿ ಎಂದು ತಿಳಿದು ದೂರದಿಂದ ಬಾಣ ಎಸೆದಿದ್ದ. ಬಾಣ ಶ್ರೀಕೃಷ್ಣನ ಹೆಬ್ಬೆರಳನ್ನು ಇರಿಯಿತು. ಗಾಯದಿಂದ ಧಾರಾಕಾರವಾಗಿ ರಕ್ತ ಸುರಿಯಿತು.

ತನ್ನ ಆಚಾತುರ್ಯ ಅರಿವಾದಾಗ ವ್ಯಾಧ ಓಡೋಡಿ ಬಂದು ಶ್ರೀಕೃಷ್ಣನ ಮೊರೆ ಹೋಗಿ ಕ್ಷಮೆಯಾಚಿಸಿದ. ಶ್ರೀಕೃಷ್ಣ ಅವನನ್ನು ಸಂತ್ಯೆಸಿ, ಇದು ನಿನ್ನ ತಪ್ಪಲ್ಲ, ನನ್ನದೇ ಸಂಕಲ್ಪ. ನನ್ನ ಅವತಾರ ಸಮಾಪ್ತಿಯ ಕಾಲ ಬಂದಿದೆ. ನೀನು ಬಿಟ್ಟ ಬಾಣ ನೆಪ ಮಾತ್ರವಷ್ಟೇ. ನಿನಗೆ ಸದ್ಗತಿ ಸಿಗುತ್ತದೆ’ ಎಂದು ಸಮಾಧಾನ ಮಾಡಿದ. ಶ್ರೀಕೃಷ್ಣನಿಗೆ ವ್ಯಾಧ ಬಾಣ ಎಸೆದ ಜಾಗಕ್ಕೆ ಇಂದು ಭಾಲ್ಕಾತೀರ್ಥ ಎಂದು ಹೆಸರು. ಆಲದ ಮರದ ಕೆಳಗೆ ಕುಳಿತ ಶ್ರೀ ಕೃಷ್ಣನ ಸುಂದರ ಮೂರ್ತಿ, ಅವನ ಮುಂದೆ ಕೈಮುಗಿದು ಕುಳಿತು ಕ್ಷಮೆ ಕೇಳುತ್ತಿರುವ ವ್ಯಾಧನ ಮೂರ್ತಿ ಇಲ್ಲಿನ ಗರ್ಭಗುಡಿಯಲ್ಲಿದೆ.

ಕಾಲಿಗೆ ಏಟು ತಿಂದರೂ ಮುಗುಳ್ನಗು ಬೀರುತ್ತಿರುವ ಶ್ರೀಕೃಷ್ಣನ ದಿವ್ಯ ಸುಂದರ ಮೂರ್ತಿಯನ್ನು ನೋಡಿ ಉಂಟಾದ ಧನ್ಯತಾಭಾವ, ರೋಮಾಂಚನ ವರ್ಣಿಸಲು ಅಸಾಧ್ಯ.ಶ್ರೀಕೃಷ್ಣ ಹುಟ್ಟಿದ ಮಥುರೆ,ಬೆಳೆದ ಗೋಕುಲ,ವೃಂದಾವನಗಳು ಹಿಂದೆಯೇ ನೋಡಿದ್ದ ನನಗೆ ಅವನ ಅವತಾರ ಸಮಾಪ್ತಿಯ ಶ್ರೀಕ್ಷೇತ್ರ ನೋಡಿ ಹೃದಯ ತುಂಬಿ ಬಂತು. ಆ ಕೃಷ್ಣನ ಮೂರ್ತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

ಕೃಪೆ:ತರಂಗ

LEAVE A REPLY

Please enter your comment!
Please enter your name here