ವಿಟ್ಲ : ವಿಟ್ಲಪಟ್ನೂರು ಗ್ರಾಮದ ಕಡಂಬು ಧರ್ಮ ಚಾವಡಿಯ ಶ್ರೀ ಶಾಸ್ತಾರ, ರಕ್ತೇಶ್ವರೀ, ಉಳ್ಳಾಲ್ತಿ, ಮಲರಾಯಿ, ಗುಳಿಗ ಮತ್ತು ಕೊರತಿ ದೈವಗಳ ಸಾನ್ನಿಧ್ಯಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ನರ್ತನ ಸೇವೆಯು ಎ. 25ರಂದು ಆರಂಭಗೊಂಡಿದ್ದು, 27ರ ವರೆಗೆ ನಡೆಯಲಿದೆ.
25ರಂದು ಸಂಜೆ 5ಕ್ಕೆ ತಂತ್ರಿಗಳ ಆಗಮನ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ, ಧ್ಯಾನಾಧಿವಾಸ ಕ್ರಿಯೆಗಳು ನಡೆದವು. 26ರಂದು ಮಹಾಗಣಪತಿ ಹೋಮ, ಕಲಶ ಪ್ರತಿಷ್ಠೆ, ಚಂಡಿಕಾ ಹೋಮ, ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ವನಶಾಸ್ತಾರನಿಗೆ ಕಲ್ಪೋಕ್ತ ಪೂಜೆ, ನಡಾವಳಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ದೈವಗಳ ಭಂಡಾರಕ್ಕೆ ಪೂಜೆ, ತಂಬಿಲ, ಸಂಜೆ ರಕ್ತೇಶ್ವರೀ ದೈವದ ಭಂಡಾರ ಇಳಿಯುವುದು, ರಾತ್ರಿ ದೈವಗಳ ನರ್ತನ ಸೇವೆ, 27ರಂದು ಬೆಳಗ್ಗೆ ಗುಳಿಗ ದೈವದ ನರ್ತನ ಸೇವೆ ನಡೆಯಲಿದೆ.
73 ದಿನಗಳಲ್ಲಿ ಪೂರ್ತಿ
ವಿಟ್ಲಪಟ್ನೂರು ಗ್ರಾಮದ ಕಡಂಬು ಧರ್ಮ ಚಾವಡಿಯ ಶ್ರೀ ಶಾಸ್ತಾರ, ರಕ್ತೇಶ್ವರೀ, ಉಳ್ಳಾಲ್ತಿ, ಮಲರಾಯಿ, ಗುಳಿಗ ಮತ್ತು ಕೊರತಿ ದೈವಗಳ ಸಾನ್ನಿಧ್ಯಗಳ ಕುರುಹು ಮತ್ತು ಕಾರಣಿಕ ಮಾತ್ರವೇ ಊರವರಿಗೆ ತಿಳಿದಿತ್ತು. ಪ್ರಶ್ನೆ ಚಿಂತನೆ ನಡೆಸಿ, ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ನೇತೃತ್ವದಲ್ಲಿ ಜ. 7ರಂದು ಕಾಮಗಾರಿ ಆರಂಭಿಸಿ 73 ದಿನಗಳಲ್ಲಿ ಪೂರ್ತಿಯಾಗಿಸಿದ್ದಾರೆ. ಎಲ್ಲ ಗುಡಿಗಳು ಸಂಪ್ರದಾಯಬದ್ಧವಾಗಿ, ಸರಳವಾಗಿ, ವಿಶಾಲವಾಗಿ ನಿರ್ಮಿಸಲ್ಪಟ್ಟಿವೆೆ. ಉತ್ತಮ ಮರದ ಬಾಗಿಲು, ಪಕ್ಕಾಸು, ಹಂಚುಗಳನ್ನೇ ಬಳಸಲಾಗಿದೆ. ಪಾಕಶಾಲೆ, ಭಂಡಾರದ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ ಕಾಮಗಾರಿ ಪೂರ್ತಿಯಾಗಿದೆ. ಕಲಶಾಭಿಷೇಕ ಕಾರ್ಯಕ್ಕೆ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ. ಸುತ್ತಮುತ್ತಲ ಭಕ್ತರು ತೊಡಗಿಸಿಕೊಂಡಿದ್ದಾರೆ.