Home Uncategorized ದೈವಾರಾಧನೆಯ ಮೂಲ ಸ್ವರೂಪಕ್ಕೆ ಧಕ್ಕೆ ಸಲ್ಲದು: ಕತ್ತಲ್‌ಸಾರ್‌

ದೈವಾರಾಧನೆಯ ಮೂಲ ಸ್ವರೂಪಕ್ಕೆ ಧಕ್ಕೆ ಸಲ್ಲದು: ಕತ್ತಲ್‌ಸಾರ್‌

1443
0
SHARE

ಕಡಬ : ತುಳುನಾಡಿನ ದೈವಾ ರಾಧನೆ ಹಾಗೂ ನಾಗಾರಾಧನೆ ಪ್ರಕೃತಿಯ ನಡುವೆಯೇ ನಡೆಯಬೇಕಾದ ಶ್ರದ್ಧೆಯ ಕಾರ್ಯಗಳು. ಪ್ರಕೃತಿಯಿಂದ ದೂರವಾಗಿ ಕಾಂಕ್ರೀಟ್‌ ರಚನೆಗಳಲ್ಲಿ ನಾಗಾರಾಧನೆ ಮತ್ತು ದೈವಾರಾಧನೆ ನಡೆಸುವ ಮೂಲಕ ನಮ್ಮ ಸಂಸ್ಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತರುವುದು ಸಲ್ಲದು ಎಂದು ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಗ್ಮಿ ದಯಾನಂದ ಕತ್ತಲ್‌ಸಾರ್‌ ನುಡಿದರು.

ನವೀಕರಣಗೊಂಡಿರುವ ಬಲ್ಯ ಪಟ್ನೂರು ಗ್ರಾಮದ ಕೂಡುಕಟ್ಟಿನ ಶ್ರೀ ರಾಜನ್‌ ದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನರ್‌ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ದೈವಗಳ ನೇಮದ ಪ್ರಯಕ್ತ ಬುಧವಾರ ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.

ಉತ್ಸಾಹದಿಂದ ಏಳಿಗೆಯಾಗಲಿ
ಮುಖ್ಯ ಅತಿಥಿಯಾಗಿದ್ದ ಆಲಂಕಾರು ಬುಡೇರಿಯಾ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಪ್ರಮುಖ ಈಶ್ವರ ಗೌಡ ಪಜ್ಜಡ್ಕ ಮಾತನಾಡಿ, ಇಲ್ಲಿನ ದೈವಸ್ಥಾನವು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಪ್ರತಿಷ್ಠೆ ಹಾಗೂ ಕಲಶಾಭಿಷೇಕದ ಕಾರ್ಯಗಳೂ ವಿಜೃಂಭಣೆಯಿಂದ ನಡೆದಿವೆ. ಆದರೆ ಈ ಉತ್ಸಾಹ ಇಲ್ಲಿಗೇ ಕೊನೆಯಾಗಬಾರದು. ಪ್ರತಿವರ್ಷ ವರ್ಷಾವಧಿ ಉತ್ಸವವು ಇನ್ನಷ್ಟು ವಿಜೃಂಭಣೆಯಿಂದ ಜರಗಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಮುತುವರ್ಜಿ ವಹಿಸಬೇಕು ಎಂದರು.

ಬಲ್ಯ ಪಟ್ನೂರು ಶ್ರೀ ರಾಜನ್‌ ದೈವ ಸೇವಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಗೌಡ ಪನ್ಯಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಚಕ್ರೇಶ್ವರ ಆರಿಗ, ಬಲ್ಯ ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‌ ನ ಅಧ್ಯಕ್ಷ ಚಿತ್ತರಂಜನ ರೈ ಮಾಣಿಗ ವಿಶೇಷ ಆಹ್ವಾನಿತರಾಗಿದ್ದರು.

ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ಡಿ.ಬಿ. ಮೋಹನ ಗೌಡ ದೇರಾಜೆ ಸ್ವಾಗತಿಸಿ, ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರ ಆರಿಗ ಪಟ್ನೂರು ಪ್ರಸ್ತಾವನೆಗೈದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿಮಾರು ಜೀರ್ಣೋದ್ಧಾರ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ಶೇಖರ ಗೌಡ ಪನ್ಯಾಡಿ ನಿರೂಪಿಸಿ, ಸೇವಾ ಸಮಿತಿಯ ಕಾರ್ಯದರ್ಶಿ ಪೂರ್ಣೇಶ್‌ ಗೌಡ ಬಾಬುಬೆಟ್ಟು ವಂದಿಸಿದರು.

ಸಮ್ಮಾನ
ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ಶ್ರೀ ರಾಜನ್‌ ದೈವ ಸೇವಾ ಸಮಿತಿಯ ಕೋಶಾಧಿಕಾರಿ ದೇವದಾಸ್‌ ಭಟ್‌ ಪಟ್ನೂರು ಹಾಗೂ ನಾಗವೇಣಿ ಭಟ್‌ ದಂಪತಿಯನ್ನು ಗ್ರಾಮಸ್ಥರ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಜಮೀನನ್ನು ಸಮಿತಿಗೆ ನೋಂದಣಿ ಮಾಡಿ ಸಿದ ದಾಖಲೆಪತ್ರಗಳನ್ನು ಸಮಿತಿಯ ಪದಾಧಿಕಾರಿಗಳಿಗೆ ದೇವದಾಸ್‌ ಭಟ್‌ ಹಸ್ತಾಂತರಿಸಿದರು.
ಬಳಿಕ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ,ಶ್ರೀ ರಾಜನ್‌ ದೈವದ ನೇಮ ನಡೆಯಿತು.’

ಧಾರ್ಮಿಕ ಚಿಂತನೆಯೊಂದಿಗೆ ಪ್ರಕೃತಿಯ ಸಂರಕ್ಷಣೆ
ನಮ್ಮ ಆಚರಣೆಗಳು ಮತ್ತು ಸಂಪ್ರದಾಯಗಳು ಪ್ರಕೃತಿಯೊಂದಿಗೆ ಮಿಳಿತವಾದ ಪ್ರಕ್ರಿಯೆಗಳು. ಧಾರ್ಮಿಕ ಚಿಂತನೆಯೊಂದಿಗೆ ಪ್ರಕೃತಿಯ ಸಂರಕ್ಷಣೆಯ ಉದ್ದೇಶವೂ ಅದರಲ್ಲಿದೆ. ಆದರೆ ಇಂದು ಜನರು ಪ್ರಕೃತಿಯಿಂದ ದೂರವಾಗಿ ವಿಕೃತಿಯೆಡೆಗೆ ಸಾಗುತ್ತಿರುವುದು ವಿಷಾದದ ಸಂಗತಿ. ಪ್ರಕೃತಿಯ ನಡುವೆ ಇರಬೇಕಾದ ದೈವ ಹಾಗೂ ನಾಗ ಸನ್ನಿಧಿಗಳು ಕಾಂಕ್ರೀಟ್‌ಮಯವಾಗಿದೆ. ಭಕ್ತಿಗಿಂತ ಹೆಚ್ಚಾಗಿ ಆಡಂಭರವೇ ಮೇಳೈಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವರ್ಷಕ್ಕೆ ಕನಿಷ್ಠ 2 ಬಾರಿಯಾದರೂ ಕುಟುಂಬ ಸಮೇತರಾಗಿ ನಾಗ ಸನ್ನಿಧಿ ಹಾಗೂ ದೈವಸ್ಥಾನಗಳಿಗೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here