ಏಳಿಂಜೆ: ಕಲ್ಮಶ ಸ್ವಾರ್ಥ ರಹಿತವಾದ ಭಕ್ತಿಗೆ ಭಗವಂತ ಒಲಿಯುತ್ತಾನೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರು ಹೇಳಿದರು.
ಫೆ. 15ರಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದ್ವೇಷ ಮತ್ತು ದುಷ್ಟ ಚಿಂತನೆಯನ್ನು ದೂರ ಮಾಡಿದಾಗ ಮನಸ್ಸು ಪರಿಶುದ್ಧವಾಗುತ್ತದೆ. ನಿಷ್ಕಲ್ಮಶ ಭಕ್ತಿಗೆ ಭಗವಂತ ಅನುಗ್ರಹ ನೀಡುತ್ತಾನೆ ಎಂದು ಶ್ರೀಗಳು ಹೇಳಿದರು.
ಸಮ್ಮಾನ
ಈ ಸಂದರ್ಭ ರಥ ನಿರ್ಮಾಣ ಮಾಡಿದ ಶಿಲ್ಪಿ ಶಿವಪ್ರಸಾದ್ ಆಚಾರ್ಯ ಮತ್ತು ಸಹಕರಿಸಿದ ಏಳಿಂಜೆ ಯೋಗೀಶ್ ರಾವ್, ವತ್ಸಲಾ ರಾವ್ ಅವರನ್ನು ಸಮ್ಮಾನಿಸಲಾಯಿತು. ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು. ದೇಗುಲದ ಮೊಕ್ತೇಸರ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಅಭಯಚಂದ್ರ ಜೈನ್, ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ವೈ.ವಿ. ಗಣೇಶ್ ಭಟ್ ಏಳಿಂಜೆ, ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು. ಅನಿಲ್ ಶೆಟ್ಟಿ ಕೋಜಾಲ ಗುತ್ತು ಸ್ವಾಗತಿಸಿ, ಸಾಯಿನಾಥ ಶೆಟ್ಟಿ ನಿರೂಪಿಸಿದರು. ಸುಧಾಕರ ಸಾಲ್ಯಾನ್ ಸಂಕಲಕರಿಯ ಸಮ್ಮಾನ ಪತ್ರ ವಾಚಿಸಿದರು.
ರಥ ಸಂರಕ್ಷಣೆ ಮುಖ್ಯ
ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡಿ, ರಥದಲ್ಲಿ ದೇವರ ಉತ್ಸವ ಕಂಡರೆ ಮನಸ್ಸಿನ ಅಭಿಲಾಷೆಗಳು ಈಡೇರುತ್ತವೆ. ದೇವಸ್ಥಾನಗಳಲ್ಲಿ ನಾಲ್ಕು ವಿಧದ ರಥದ ಪರಿಕಲ್ಪನೆ ಇದೆ. ಅದರ ಮೂಲಕ ಆಯಾಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ರಥ ನಿರ್ಮಾಣ ಮಾಡಲಾಗುತ್ತದೆ. ರಥ ನಿರ್ಮಾಣಕ್ಕಿಂತ ರಥ ಸಂರಕ್ಷಿಸಿ ಇಡುವ ಕೆಲಸ ದೊಡ್ಡದು ಎಂದರು.