ಬೈಂದೂರು : ಐತಿಹಾಸಿಕ ಹಿನ್ನೆಲೆಯ ವಿರಳ ಹಾಗೂ ವಿಶಿಷ್ಟವಾದ ಖಂಬದಕೋಣೆಯ ಗೋವಿಂದ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಕಾರ್ಯ ಭರದಿಂದ ಸಾಗುತ್ತಿದೆ. ಕುಂದಾಪುರ ತಾಲೂಕಿನ ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಖಂಬದಕೋಣೆ ಕ್ರಾಸ್ನಿಂದ ಅನತಿ ದೂರದಲ್ಲಿರುವ ಈ ದೇವಸ್ಥಾನ ಅವಿಭಜಿತ ದ.ಕ. ಜಿಲ್ಲೆಯಲ್ಲಿಯೇ ಅತ್ಯಂತ ಅಪರೂಪದ ಪುರಾತನ ಶಿಲಾಮಯ ದೇವಸ್ಥಾನವಾಗಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿದ ದೇವಾಲಯ: ದಕ್ಷಿಣದ ತಿರುಪತಿ ಎಂದು ಕರೆಯುವ ಈ ಪ್ರಾಚೀನ ದೇವಸ್ಥಾನ ಚಾಲುಕ್ಯ ಶೈಲಿಯಿಂದ ಕೂಡಿದೆ.8ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದೆ ಎನ್ನುವುದು ಇತಿಹಾಸದ ಸಂಶೋಧಕ ಡಾ.ಪಿ ಗುರುರಾಜ್ ಭಟ್ ಅವರ ಅಭಿಪ್ರಾಯವಾಗಿದೆ. ಅನಾದಿ ಕಾಲದಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಶಿಲಾಮಯ ದೇವಸ್ಥಾನದಲ್ಲಿ ಚಾಲುಕ್ಯರ ಶಿಲ್ಪಕಲಾ ನೈಪುಣ್ಯವನ್ನು ಸಾರುತ್ತದೆ.ಮೂರು ಅಡಿ ಎತ್ತರದ ದೇವರ ಶಿಲಾ ವಿಗ್ರಹ, ಗೋಡೆಯಲ್ಲಿನ ಗಣೇಶನ ಉಬ್ಬು ಶಿಲ್ಪ, ದಕ್ಷಿಣದಲ್ಲಿ ಆಂಜನೇಯನ ಕಲಾಕೃತಿ, ಕೆರೆ, ನಾಗನ ಸಾನಿದ್ಯ, ಅಶ್ವತ ಕಟ್ಟೆಗಳಿವೆ. ದೇವಸ್ಥಾನದಲ್ಲಿನ ಮುಖ ಮಂಟಪದಲ್ಲಿ ಕ್ರಿ.ಶ. 1924ರ ಗರುಡನ ವಿಗ್ರಹವಿದೆ. ಇದು ಭಿನ್ನವಾದ ಕಾರಣ ಜಲಸ್ತಂಭನ ಮಾಡಲಾಗಿದೆ.ಪ್ರಾಚೀನ ಕಾಲದ ದೀಪಾರತಿ, ಹಳೆಯ ದೊಡ್ಡ ಕಂಬಗಳು ವಿಶೇಷ ಆಕರ್ಷಣೆಯಾಗಿದೆ.ಹರಿವಾಣ ನೈವೇದ್ಯ, ತುಲಾಭಾರ, ರಂಗ ಪೂಜೆ, ನಿತ್ಯ ನೈವೇದ್ಯ, ಕಾರ್ತಿಕ ಪೂಜೆ,ಸೋಣೆ ಆರತಿ ಮೊದಲಾದ ಸೇವೆಗಳು ನಡೆಯುತ್ತವೆ.
1984ರಲ್ಲಿ ಅಷ್ಟಬಂದ ಸಹಿತ ಪುನರ್ಪ್ರತಿಷ್ಟೆ ನಡೆದಿತ್ತು. ದೇವಸ್ಥಾನಕ್ಕೆ ಸಂಬಂಧಿಸಿದ ಶಾಸನಗಳು ಇಂದಿಗೂ ಕಾಣಸಿಗುತ್ತದೆ.ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತರು ಗೋವಿಂದ ದೇವಸ್ಥಾನ ಬೇಟಿ ನೀಡುತ್ತಿದ್ದರು ಎನ್ನುವ ಪ್ರತೀತಿಯಿದೆ.ಈ ದೇವಸ್ಥಾನದಲ್ಲಿ 1917ರಲ್ಲಿ ನಿರ್ಮಿಸಿದ ಪ್ರಭಾವಳಿಯಿದ್ದು ನೂರು ವರ್ಷದ ಇತಿಹಾಸ ಹೊಂದಿದೆ. ಪ್ರಭಾವಳಿಗೆ ಶತಮಾನವಾದ ಬಳಿಕ ಜೀರ್ಣೋದ್ಧಾರಗೊಳ್ಳುತ್ತಿರುವುದು ಕಾಕತಳೀಯ ಎಂಬಂತಿದೆ. ದೇವಸ್ಥಾನದಲ್ಲಿ ಸಾರ್ವಜನಿಕರು ಹಾಗೂ ಜೀರ್ಣೋದ್ದಾರ ಸಮಿತಿ ಮುಂದಾಳತ್ವದಲ್ಲಿ ಹೊರಪೌಳಿ ಸೇರಿದಂತೆ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ.
ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ. ಧನ ಸಹಾಯ ಮಾಡುವವರು ಜೀರ್ಣೋದ್ದಾರ ಸಮಿತಿ, ಗೋವಿಂದ ದೇವಸ್ಥಾನ, ವಿಜಯ ಬ್ಯಾಂಕ್ ಖಂಬದಕೋಣೆ ಶಾಖೆ ಖಾತೆ ಸಂಖ್ಯೆ:110601010010473 ಸಂಖ್ಯೆಗೆ ಧನ ಸಹಾಯ ನೀಡಬಹುದಾಗಿದೆ ಎಂದು ಸಮಿತಿ ಅಧ್ಯಕ್ಷ ಗೋವಿಂದ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.