SHARE

ಉಡುಪಿ: ಶ್ರೀಕೃಷ್ಣಮಠದ ರಥಬೀದಿಯಲ್ಲಿ ರಾತ್ರಿ ಹಗಲೆನ್ನದೆ ನಿರಂತರವಾಗಿ ನಡೆಯುತ್ತಿರುವ ಅಖಂಡ ಭಜನೆ-ಹರಿನಾಮ ಸಂಕೀರ್ತನೆ ರವಿವಾರಕ್ಕೆ 150 ದಿನ ಪೂರೈಸಿದೆ. ಈಗಾಗಲೇ ಹಲವಾರು ತಂಡಗಳು ಇಲ್ಲಿನ ಅಖಂಡ ಭಜನೆಯಲ್ಲಿ ಪಾಲ್ಗೊಂಡಿದ್ದು, ಭಜನೆ ಸೇವೆಯ ಅವಕಾಶಕ್ಕಾಗಿ ದೇಶಾದ್ಯಂತ ಮತ್ತಷ್ಟು ತಂಡಗಳು ಹೆಸರು ನೋಂದಾಯಿಸಿ
ಭಜನೆಯ ದಿನ ನಿರೀಕ್ಷೆಯಲ್ಲಿವೆ.

ಪರ್ಯಾಯ ಪೀಠವೇರಿದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮುಖ್ಯ ಸಂಕಲ್ಪಗಳಲ್ಲಿ ಅಖಂಡ ಭಜನೆ ಕೂಡ ಒಂದು. ಪೀಠವೇರುವ ದಿನದಂದು ಶ್ರೀಗಳು ‘ಭಜನಾ ಯಜ್ಞ’ಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಭಜನೆ ನಡೆದುಕೊಂಡು ಬಂದಿದೆ. ಈ ಭಜನಾ ಸೇವೆ ಪಲಿಮಾರು ಶ್ರೀಗಳ ಪೀಠಾವರೋಹಣದ ದಿನದವರೆಗೂ (2020ರ ಜ.17) ನಡೆಯಲಿದೆ.

6,750 ಮಂದಿ ಹಾಡಿದರು !
ಎರಡು ದಿನಕ್ಕೆ 6 ತಂಡಗಳು ಭಜನೆ ಮಾಡುತ್ತವೆ. ಎರಡು ದಿನದಲ್ಲಿ ಒಂದು ತಂಡಕ್ಕೆ ದಿನಕ್ಕೆ 8 ತಾಸು ಅವಕಾಶ. ದಿನವೊಂದಕ್ಕೆ ಬೆಳಗ್ಗೆ 2 ಹಾಗೂ ರಾತ್ರಿ 2 ಗಂಟೆ ಹಾಡಬಹುದು. ಒಂದೊಂದು ತಂಡದಲ್ಲಿ ಸುಮಾರು ಸರಾಸರಿ 15 ಮಂದಿ ಸದಸ್ಯರಿರುತ್ತಾರೆ. ಇದುವರೆಗೆ ಸರಿಸುಮಾರು 6,750 ಮಂದಿ ಹಾಡಿದ್ದಾರೆ. ಇದರಲ್ಲಿ ಮಹಿಳೆಯರದ್ದೇ ಸಿಂಹಪಾಲು.

ಕೇಳುವವರ ಸಂಖ್ಯೆಯೂ ವೃದ್ಧಿ
ಭಜನೆ ಹಾಡುವವರಿಗೆ ಸುವ್ಯವಸ್ಥಿತವಾದ ಮಂಟಪ ನಿರ್ಮಿಸಲಾಗಿದೆ. ಇದರೊಳಗೆ ಫ್ಯಾನ್‌, ಎಸಿ ವ್ಯವಸ್ಥೆಗಳೂ ಇವೆ. ಮಳೆಗಾಲಕ್ಕೂ ಸುರಕ್ಷಿತವಾಗಿದೆ. ಅಂತೆಯೇ ನಿತ್ಯ ಭಜನೆ ಕೇಳಲೆಂದೇ ಬರುವವರಿದ್ದಾರೆ. ಅದರಲ್ಲೂ ತಡರಾತ್ರಿ ಭಜನೆ ಕೇಳಲು ಬರುವವರು ಅನೇಕರು. ಭಜನೆ ಕೇಳುತ್ತ ತಲ್ಲೀನರಾಗುವ ಯಾತ್ರಾರ್ಥಿಗಳಿಗೂ ಕಡಿಮೆ ಏನಿಲ್ಲ. ಭಜನೆ ಕೇಳುಗರಿಗೂ ಸುರಕ್ಷಿತ ಪೆಂಡಾಲ್‌, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಆರಂಭದ ಎರಡು ತಿಂಗಳುಗಳ ಕಾಲ ಮಂತ್ರಾಲಯದ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನ ತಂಡಗಳು ಭಜನೆ ನಡೆಸಿಕೊಟ್ಟವು. ಅನಂತರ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಬೆಂಗಳೂರು, ಕಾಸರಗೋಡು ಮತ್ತು ಸುತ್ತಲಿನ ಹತ್ತಾರು ತಂಡಗಳು ಹಾಡಿವೆ. ಪ್ರಸ್ತುತ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಗೋಕಾಕ, ಬಾಗಲಕೋಟೆ, ಗದಗ ಮೊದಲಾದೆಡೆಯ ತಂಡಗಳು ಹಾಡುತ್ತಿವೆ. ಮುಂದೆ ಮೈಸೂರಿನ ತಂಡಗಳು ಪಾಲ್ಗೊಳ್ಳಲಿವೆ. ಕರಾವಳಿಯ ಭಜನಾ ತಂಡಗಳು ಕೂಡ ತಮ್ಮದೇ ಭಜನಾ ಶೈಲಿಯಿಂದ ಇಲ್ಲಿ ಭಾವಪರವಶರನ್ನಾಗಿಸಿವೆ.

ಮತ್ತೆ ಭಜನೆ ಹೇಳಲು ಉತ್ಸಾಹ
ಸೆಪ್ಟೆಂಬರ್‌ ಅನಂತರ ಸ್ಥಳೀಯ ತಂಡಗಳಿಗೆ ಹೆಚ್ಚು ಅವಕಾಶ ನೀಡಲು ಮಠದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೇರಳ, ಕೊಲ್ಲಾಪುರ, ಮುಂಬೈ ಹೀಗೆ ದೇಶದ ನಾನಾ ಕಡೆಯಿಂದ ಭಜನೆ ಹಾಡಲು ಅವಕಾಶಕ್ಕಾಗಿ ತಂಡಗಳು ಕೋರಿಕೆ ಕಳುಹಿಸುತ್ತಲೇ ಇವೆ. ಒಮ್ಮೆ ಹಾಡಿದ ಕೆಲವು ತಂಡಗಳು ಇನ್ನೊಮ್ಮೆ ಅವಕಾಶ ನೀಡುವಂತೆಯೂ ಬೇಡಿಕೆ ಸಲ್ಲಿಸುತ್ತಿವೆ. ತಂಡಗಳಿಗೆ ವಸತಿ, ಊಟ, ತಿಂಡಿಯ ವ್ಯವಸ್ಥೆಯನ್ನು ಮಠದಿಂದಲೇ ಮಾಡಲಾಗಿದೆ.

ಹಾಡುವುದು ದೊಡ್ಡ ಯೋಗ
ಶ್ರೀಕೃಷ್ಣನೆದುರು ಹಾಡುವುದು ನಮಗೆ ದೊರೆತ ದೊಡ್ಡ ಯೋಗ. ಇಲ್ಲಿ ಹಾಡಿವರ ಅನೇಕ ಸಂಕಷ್ಟಗಳು ದೂರವಾಗಿರುವ ದೃಷ್ಟಾಂತವಿದೆ. ಮತ್ತೆ ಮತ್ತೆ ಹಾಡಬೇಕು ಅನಿಸುತ್ತಿದೆ.
– ಲಕ್ಷ್ಮೀ ಬೆಂಗಳೂರು
ಭಜನಾ ತಂಡದ ಸದಸ್ಯೆ

ಭಜನೆಗೆ ನೋಂದಣಿ
ಶ್ರೀಗಳ ಸಂಕಲ್ಪಕ್ಕೆ ಅದ್ಭುತವಾದ ಸ್ಪಂದನೆ ದೊರೆಯುತ್ತಿದೆ. ಈ ಸ್ಥಳದಲ್ಲಿ ವಿಶೇಷ ಶಕ್ತಿಯ ಅನುಭವ ಹಲವರಿಗೆ ಆಗುತ್ತಿದೆ. ಭಜನೆ ಹಾಡುವುದಕ್ಕಾಗಿ ನೋಂದಣಿ ಮೊದಲೇ ಮಾಡಿಕೊಳ್ಳುತ್ತೇವೆ. ತಂಡಗಳ ಸಂಖ್ಯೆ ಹೆಚ್ಚಿರುವುದರಿಂದ ಒಮ್ಮೆ ಹಾಡಿದವರಿಗೆ ಈಗ ಅವಕಾಶ ನೀಡುವುದು ಕಷ್ಟಸಾಧ್ಯ. ಮುಂದೆ ಅವಕಾಶ ನೀಡಬಹುದು.
– ಡಾ| ವಂಶಿ ಕೃಷ್ಣಾಚಾರ್ಯ
ಕೋ-ಆರ್ಡಿನೇಟರ್‌ ಅಖಂಡ ಭಜನೆ

ವಿಶೇಷ ವರದಿ

LEAVE A REPLY

Please enter your comment!
Please enter your name here