Home ಧಾರ್ಮಿಕ ಸುದ್ದಿ ಮೌಲ್ಯಾಧಾರಿತ ಶಿಕ್ಷಣ ಕ್ರೈಸ್ತ ವಿದ್ಯಾ ಸಂಸ್ಥೆಗಳ ಗುರಿ: ಬಿಷಪ್‌

ಮೌಲ್ಯಾಧಾರಿತ ಶಿಕ್ಷಣ ಕ್ರೈಸ್ತ ವಿದ್ಯಾ ಸಂಸ್ಥೆಗಳ ಗುರಿ: ಬಿಷಪ್‌

326
0
SHARE

ಮಹಾನಗರ: ಗುಣ ಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಿ ವ್ಯಕ್ತಿಯನ್ನು ಉತ್ತಮ ಮಾನವರ ನ್ನಾಗಿಸುವುದೇ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಗುರಿ ಎಂದು ಮಂಗಳೂರಿನ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಹೇಳಿದರು.

ನಗರದ ಸ್ಟೇಟ್‌ ಬ್ಯಾಂಕ್‌ ಸಮೀಪ ಇರುವ ಸೈಂಟ್‌ ಆ್ಯನ್ಸ್‌ ಶಿಕ್ಷಣ ಮಹಾ ವಿದ್ಯಾಲಯದ ಅಮೃತೋತ್ಸವದ ಪ್ರಯುಕ್ತ ಶುಕ್ರವಾರ ಸೈಂಟ್‌ ಆ್ಯನ್ಸ್‌ ಕಾನ್ವೆಂಟ್‌ ಚಾಪೆಲ್‌ನಲ್ಲಿ ನಡೆದ ಕೃತಜ್ಞತಾರ್ಪಣೆಯ ಬಲಿ ಪೂಜೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಪ್ರವಚನ ನೀಡಿದರು.

ಸೈಂಟ್‌ ಆ್ಯನ್ಸ್‌ ಶಿಕ್ಷಣ ಮಹಾ ವಿದ್ಯಾಲಯವು 75 ವರ್ಷಗಳಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ಶಿಕ್ಷಕರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದೆ; ಈ ಮೂಲಕ ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸಿದೆ. ತನ್ನ ಗುಣ ಮಟ್ಟದ ಶಿಕ್ಷಣದ ಮೂಲಕ ಸಂಸ್ಥೆಯು ದ್ರುವ ತಾರೆಯಂತೆ ಕಂಗೊಳಿಸುತ್ತದೆ ಎಂದವರು ಅಭಿನಂದಿಸಿದರು.

ಬಲಿಪೂಜೆಯಲ್ಲಿ ರೊಜಾರಿಯೊ ಕೆಥೆಡ್ರಲ್‌ನ ರೆಕ್ಟರ್‌ ವಂ| ಜೆ.ಬಿ. ಕ್ರಾಸ್ತಾ, ಕುಲಶೇಖರ ಚರ್ಚ್‌ನ ಧರ್ಮಗುರು ವಂ| ವಿಕ್ಟರ್‌ ಮಚಾದೊ, ವಂ| ಪಿಯುಸ್‌ ಜೇಮ್ಸ್‌ ಡಿ’ಸೋಜಾ, ವಂ| ಪ್ರಕಾಶ್‌ ಡಿ’ ಕುನ್ಹಾ, ವಂ| ಆಲ್ವಿನ್‌ ಸೆರಾವೊ, ವಂ| ಜೋಕಿಂ ಫೆರ್ನಾಂಡಿಸ್‌ ಅವರು ಸಹಭಾಗಿತ್ವ ನೀಡಿದರು.

ಅಪೋಸ್ತಲಿಕ್‌ ಕಾರ್ಮೆಲ್‌ ಸಂಸ್ಥೆಯ ಸುಪೀರಿಯರ್‌ ಜನರಲ್‌ ಸಿ| ಎಂ. ಸುಶೀಲಾ, ಪ್ರಾಂತೀಯ ಮುಖ್ಯಸ್ಥರಾದ ಸಿ| ಕಾರ್ಮೆಲ್‌ ರೀಟಾ ಉಪಸ್ಥಿತರಿದ್ದರು. ಶಿಕ್ಷಣ ವಿಭಾಗದ ಜನರಲ್‌ ಕೌನ್ಸೆಲರ್‌ ಸಿ| ಲಿಡಿಯಾ ಫೆರ್ನಾಂಡಿಸ್‌, ಕಾರ್ಯದರ್ಶಿ ಸಿ| ಐಡಾ ಬರ್ಬೋಜಾ, ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಸಿ| ಕ್ಲೇರ್‌ ಮುಂತಾದವರು ಉಪಸ್ಥಿತರಿದ್ದರು.

ಬಲಿ ಪೂಜೆಯ ಪ್ರಾರಂಭದಲ್ಲಿ ಸಂಸ್ಥೆಯು 75 ವರ್ಷಗಳ ಸೇವೆಯನ್ನು ಪೂರ್ತಿಗೊಳಿಸಿದ ಸಂಕೇತವಾಗಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಸಹಿತ 75 ಮಂದಿ ಹಣತೆಯನ್ನು ಬೆಳಗಿಸಿ ಮೆರವಣಿಗೆಯಲ್ಲಿ ಚಾಪೆಲ್‌ನ ವೇದಿಕೆಗೆ ತೆರಳಿದರು. ಸೈಂಟ್‌ ಆ್ಯನ್ಸ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ 75 ವರ್ಷಗಳಲ್ಲಿ 5,553 ಮಂದಿ ಬಿಎಡ್‌, 573 ಎಂಎಡ್‌ ,
138 ಪಿಜಿಸಿಡಿಎ, 373 ಪೂರ್ವ ಪ್ರಾಥಮಿಕ ಶಿಕ್ಷಕ ಶಿಕ್ಷಣ ತರಬೇತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here