Home Uncategorized ಕಾರ್ತಿಕ ಮಾಸದಲ್ಲಿ ನಾಮ ಸಂಕೀರ್ತನೆ ವೈಭವ

ಕಾರ್ತಿಕ ಮಾಸದಲ್ಲಿ ನಾಮ ಸಂಕೀರ್ತನೆ ವೈಭವ

380
0
SHARE

ಪಡುಬಿದ್ರಿ: ದೀಪೋತ್ಸವಗಳ ಮಾಸ ಕಾರ್ತಿಕ ದೀಪಾವಳಿಯೊಂದಿಗೆ ಆರಂಭಾಗುತ್ತದೆ. ಈ ದಿನಗಳಲ್ಲಿ ತುಳಸೀ ಪೂಜೆಯೊಂದಿಗೆ ನಡೆಸಲಾಗುವ ತುಳಸೀ ಸಂಕೀರ್ತನೆ ಕರಾವಳಿಯ ಮಠ, ಮಂದಿರಗಳು, ಮನೆ ಮನೆಗಳಲ್ಲಿ ಒಂದು ನೃತ್ಯ ಪ್ರಕಾರವಾಗಿ ಇಂದಿಗೂ ಕಾಣಸಿಗುತ್ತದೆ. ಕೈಯಲ್ಲಿ ತಾಳ ಹಿಡಿದು ಕ್ರಮಬದ್ಧವಾಗಿ ಹೆಜ್ಜೆ ಹಾಕುತ್ತ ಉಡುಪಿ ಶ್ರೀ ಸೋದೆ ಮಠದ ಪ್ರಸಿದ್ಧ ಯತಿ, ತಪಸ್ವಿಗಳಾದ ವಾದಿರಾಜರು ಬರೆದ ದೇವರ ನಾಮ ಸಂಕೀರ್ತನೆ ಮಾಡುತ್ತ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಹಾಕುವುದು ಇದರ ಮುಖ್ಯಾಂಶ.

ತುಳಸೀ ನಾಮ ಸಂಕೀರ್ತನೆಯ ಪ್ರಾರಂಭ ಶ್ರೀ ವಾದಿರಾಜರ ಕಾಲಘಟ್ಟದಿಂದಲೇ ಆಗಿದ್ದಿರಬೇಕು. ಕಾರ್ತಿಕ ದಾಮೋದರಾತ್ಮಕ ಮಧ್ವಪತಿ ಶ್ರೀ ಗೋಪಾಲಕೃಷ್ಣ ಅಂತರ್ಗತ ಕೇಶವಾದಿ ದ್ವಾದಶ ಮೂರ್ತಿಗಳನ್ನು ಆವಾಹಿಸಿ ನಡೆಸಲಾಗುವ ಈ ಪೂಜಾ ಪ್ರಧಾನ ನೃತ್ಯ ಪ್ರಕಾರಕ್ಕೆ ತನ್ನದೇ ಆದ ಹಿರಿಮೆಯಿದೆ.

ತುಳಸೀ ವನ ಮತ್ತು ಧಾತ್ರೀ ಮೂಲದಲ್ಲಿ ಕಾರ್ತಿಕ ಮಾಸದಲ್ಲಿ ಈ ಎಲ್ಲ ದೇವತೆಗಳ ಸಾನ್ನಿಧ್ಯ ಇರುತ್ತದೆ ಎಂಬುದು ನಂಬಿಕೆ. ಇದನ್ನೇ ಆಧರಿಸಿ ನಡೆದು ಬಂದಿರುವ ಈ ನೃತ್ಯ ಪ್ರಕಾರಕ್ಕೆ ಕೆಲವು ಮಠ, ಮಂದಿರಗಳು ಪ್ರೋತ್ಸಾಹ, ಉತ್ತೇಜನ ನೀಡಿ ಕಾಪಾಡಿಕೊಂಡು ಬಂದಿವೆ.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ನಡೆದ ತುಳಸೀ ಸಂಕೀರ್ತನೆಯನ್ನು ಬೆಂಗಳೂರು ದೂರದರ್ಶನ ಕೇಂದ್ರ ಹಲವು ವರ್ಷಗಳ ಹಿಂದೆ ದಾಖಲೀಕರಣ ಗೊಳಿಸಿದೆ. ಅದು ಬಿಟ್ಟರೆ ಈ ಪ್ರಕಾರ ವನ್ನು ಗುರುತಿಸಿ ಕಾಪಿಡುವ ಕ್ರಮಗಳು ಮಾತ್ರ ಆಗಿಲ್ಲ.

ಹೀಗೆ ನಡೆಯುತ್ತದೆ ಸಂಕೀರ್ತನೆ ತುಳಸೀ ಸಂಕೀರ್ತನೆಗಾಗಿ ಯಜಮಾನ ತನ್ನ ಮನೆಯ ತುಳಸೀ ಕಟ್ಟೆಯನ್ನು ಬಾಳೆ ದಿಂಡು, ಹೂವುಗಳು ಇತ್ಯಾದಿಗಳಿಂದ ಅಲಂಕರಿಸಿ ಮಂಟಪ
ವನ್ನು ರಚಿಸಿಕೊಳ್ಳುತ್ತಾರೆ. ಬಳಿಕ ರಾತ್ರಿ ಪುರೋಹಿತರ ಮೂಲಕ ಸಪತ್ನಿಕರಾಗಿ ತುಳಸೀ ಪೂಜೆ, ದೀಪ ಸ್ಥಾಪನೆಯೊಂದಿಗೆ ಸಂಕೀರ್ತನೆ ನಡೆಯುತ್ತದೆ. ಗ್ರಾಮಸ್ಥರೂ ಕೂಡಿಕೊಳ್ಳುತ್ತಾರೆ. ಸದ್ಯ ಅವಿಭಜಿತ ಜಿಲ್ಲೆಯ ಕಟಪಾಡಿ – ಮಟ್ಟು, ಕುಂಜಾರು, ಪಡುಬಿದ್ರಿ, ಎಲ್ಲೂರು, ಬೆಳಪು, ಆರೂರು, ಕಡಂದಲೆ, ಪಾವಂಜೆ ಗಳಲ್ಲಿ ಸಂಕೀರ್ತನ ತಂಡಗಳಿವೆ.

ಉತ್ಥಾನ ದ್ವಾದಶಿಯು ಮಲಗಿದ್ದ ದೇವರನ್ನು ಎಬ್ಬಿಸುವ (ಉತ್ಥಾನ) ಹಬ್ಬ, ಇದನ್ನೇ ತುಳಸೀ ಹಬ್ಬವೆಂದು ಆಚರಿಸಲಾಗುತ್ತದೆ. ನರಕಾಸುರನ ವಧೆಗೈದು ಬಂದು ಎಣ್ಣೆ ಹಚ್ಚಿ ಮಲಗುವ ಶ್ರೀಕೃಷ್ಣ ಪರಮಾತ್ಮನನ್ನು ಎಬ್ಬಿಸುವ ಕ್ರಮವಾಗಿ ಆಚರಿಸುವ ಉತ್ಥಾನ ದ್ವಾದಶಿಗೂ ಸಂಕೀರ್ತನೆಗೂ ಈ ಸಂದರ್ಭದಲ್ಲಿ ಮಹತ್ವವನ್ನು ಕಲ್ಪಿಸಲಾಗಿದೆ.

ಇದರ ಒಂದು ಹಂತವು ಉತ್ಥಾನ ದ್ವಾದಶಿಗೆ ಮುಗಿದರೂ ಮುಂದೆ ಮಾಸ ಪೂರ್ತಿ ಸಂಕೀರ್ತನೆ ನಡೆಯುತ್ತದೆ ಎಂದು ಜಾನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಅವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here