Home ನಂಬಿಕೆ ಸುತ್ತಮುತ್ತ ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ 24 ಗುರುಗಳಲ್ಲಿ ನಾಲ್ಕನೆಯ ಗುರು: ಜಲ

ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ 24 ಗುರುಗಳಲ್ಲಿ ನಾಲ್ಕನೆಯ ಗುರು: ಜಲ

1755
0
SHARE

ಭೂಮಿಯು ಮುಕ್ಕಾಲು ಭಾಗವು ಜಲದಿಂದಾವೃತವಾಗಿದ್ದು ಕೇವಲ ಕಾಲು ಭಾಗ ಮಾತ್ರ ಮಣ್ಣಿನಿಂದ ಕೂಡಿದೆ. ಪಂಚಭೂತಗಳಲ್ಲಿ ಒಂದಾದ ಜಲದ ಸಾಮರ್ಥ್ಯ, ಅವಶ್ಯಕತೆಯನ್ನು ನಾವು ತಿಳಿದಿದ್ದೇವೆ. ಜೀವನಕ್ಕೆ ಅವಶ್ಯಕವಾದ ಅತ್ಯಮೂಲ್ಯ ವಸ್ತುಗಳಲ್ಲೊಂದು ನೀರು. ಈ ನೀರೂ ಕೂಡ ಬದುಕಿನ ಪಾಠವನ್ನು ಹೇಳುತ್ತದೆ. ಅದನ್ನು ಸೂಕ್ಷ್ಮವಾಗಿ ಅರಿತುಕೊಂಡು ಅಳವಡಿಸಿಕೊಳ್ಳುವ ಮನಸ್ಸು ಬೇಕು. ಅರಿವೇ ದೇವರು ಎಂಬ ಮಾತಿದೆ. ಹಾಗಾಗಿ ನಮ್ಮ ಸುತ್ತಲಿನ ವಸ್ತುಗಳಿಂದಲೂ ಬದುಕಿಗೆ ಬೇಕಾದ ಜ್ಞಾನ ದೊರೆಯುತ್ತದೆಂಬುದನ್ನು ಅರಿತುಕೊಳ್ಳಬೇಕು ಮತ್ತು ಅದನ್ನು ಗ್ರಹಿಸುವ ಗುಣವನ್ನು ಬೆಳಸಿಕೊಳ್ಳಬೇಕು. ಅಂತಹ ಅರಿವಿನಿಂದ ನಮ್ಮ ಬದುಕು ಹಸನಾಗುವುದಂತೂ ಖಂಡಿತ.

ಒಂದು ಸರೋವರವನ್ನು ನೋಡಿ. ಬದುಕಿನ ಆನಂದವೇ ಅಲ್ಲಿದೆಯೆನೋ ಅನ್ನಿಸುತ್ತದೆ. ಒಂದು ಕಲ್ಲೆಸೆಯಿರಿ. ಆ ಕಲ್ಲು ಬಿದ್ದ ಶಬ್ದದಿಂದ ಹಿಡಿದು ಅಲೆಗಳೂ ಕೂಡ ಆನಂದವನ್ನೇ ಉಂಟುಮಾಡುತ್ತದೆ. ಆ ಕಲ್ಲಿನಿಂದ ನೀರು ಕೆಸರಾದರೆ ನಿಧಾನವಾಗಿ ತಿಳಿಯಾಗುತ್ತ ಹೋಗಿ, ಮತ್ತೆ ಮೊದಲಿನ ರೂಪಕ್ಕೇ ಬಂದು ಬಿಡುತ್ತದೆ. ಅಂದರೆ ಜಲವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತದೆ. ಮತ್ತು ಅವುಗಳಿಂದ ವಿಚಲಿತವಾದರೂ ಮತ್ತೆ ಮೊದಲಿನಂತೆ ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತದೆ. ಇಂತಹ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.

ಸೋಲು ದುಃಖಗಳು ಎಂದಿಗೂ ಬದುಕಿನ ಅಂತ್ಯವಲ್ಲ. ಬಿದ್ದ ಕಲ್ಲಿನಿಂದ ಒಂದು ತಲ್ಲಣವುಂಟಾಗಿದೆ ಅಷ್ಟೆ. ಆ ತಲ್ಲಣವನ್ನು ನಾವು ನೋವಿನ ರೂಪದಲ್ಲಿ ನೋಡುವುದಾಗಲೀ ಪ್ರತಿಕ್ರಿಯೆಯಾಗಿ ಸಿಟ್ಟಿನಿಂದ ನಿರ್ಣಯ ಕೈಗೊಳ್ಳುವುದಾಗಲೀ ಮಾಡದೆ ನೀರು ತಿಳಿಯಾಗುವಂತೆ ಮನಸ್ಸನ್ನು ತಿಳಿಗೊಳಿಸಿಕೊಳ್ಳಬೇಕು. ಅಂತಹ ಅಚಲವಾದ ವ್ಯಕ್ತಿತ್ತ್ವ ಇದ್ದಾಗ ಬದುಕು ಆತಂಕಗಳಿಗೆ ಹೆದರುವುದಿಲ್ಲ. ನಮ್ಮೊಳಗಿನ ಪರಿಶುದ್ಧತೆಯೂ ನೀರಿನಂತೆ ಇರಬೇಕು. ದೇವರ ಅಭಿಷೇಕದಿಂದ ಹಿಡಿದು, ನಮ್ಮ ಸ್ನಾನ, ಶುದ್ಧ, ಅರ್ಘ್ಯ, ತೀರ್ಥ ಎಲ್ಲವದಕ್ಕೂ ನೀರು ಬೇಕು. ಅಂದರೆ ಯಾವ ವಸ್ತುವಿನ ಮೇಲೆ ನೀರು ಬೀಳುತ್ತದೆಯೋ ಅದು ಸ್ವಚ್ಛವಾಗುತ್ತದೆ; ಶುದ್ಧವಾಗುತ್ತದೆ.

ನಾವೂ ಶುದ್ಧವಾದ ಮನಸ್ಸನ್ನು ಹೊಂದುತ್ತ ನಮ್ಮೊಡನೆ ಸೇರುವ ಎಲ್ಲರ ಮನಸ್ಸೂ ಶುದ್ಧಿಯಾಗುವ ರೀತಿಯಲ್ಲಿ ಬದುಕಬೇಕು. ಇನ್ನು, ಕಡಲು ಅಥವಾ ಸಮುದ್ರ ಎಷ್ಟೇ ದೊಡ್ಡ ಒಡಲಿದ್ದರೂ ತುಂಡು ಕಸವನ್ನೂ ಇರಿಸಿಕೊಳ್ಳದು ಈ ಕಡಲು. ಕಸವನ್ನು ದಂಡೆಯತ್ತ ತಂದು ಬಿಸಾಡುತ್ತಲೇ ಇರುತ್ತದೆ. ನಾವೂ ಕೂಡ ಕೆಡುಕುಗಳನ್ನು ಮನದಿಂದ ಹೊರಗಿಡಬೇಕು. ನೀರು ತಾನು ಹರಿದಲ್ಲೆಲ್ಲಾ ಹಸಿರನ್ನು ಹುಟ್ಟಿಸುತ್ತದೆ. ಕಲ್ಲು, ಮುಳ್ಳು, ಪ್ರಪಾತ, ಕಾಡು, ಮೇಡು, ಊರು ಕೇರಿ ಯಾವುದರಲ್ಲೂ ಭೇದವೆಣಿಸದೆ ಹರಿಯುವ ನೀರಿನಂತೆ ನಾವು ಬದುಕಬೇಕು. ಆವಿಯಾಗಿ ಆಗಸವನ್ನು ಸೇರುವ ನೀರು ತನ್ನನ್ನು ಪರರಿಗಾಗಿಯೇ ದಂಡಿಸಿಕೊಳ್ಳುತ್ತದೆ. ಅಂತಹ ಗಟ್ಟಿತನವು ನಮ್ಮಲ್ಲಿದ್ದಾಗ ಬದುಕಿನ ಎಲ್ಲ ಕಷ್ಟಗಳನ್ನು ಮೀರಿ ನಿಲ್ಲಲು ಸಾಧ್ಯ.

ಮದ್ಭಾಗವತದಲ್ಲಿ ಒಂದು ಶ್ಲೋಕವಿದೆ. ಅದರ ಪ್ರಕಾರ ನೀರು ಸ್ವಭಾವತಃ ಸ್ವಚ್ಛವಾಗಿದೆ, ಪ್ರಿಯವಾಗಿದೆ. ತೀರ್ಥವಾಗುದರಿಂದ ಮನುಷ್ಯರನ್ನು ಪವಿತ್ರವಾಗಿಸುತ್ತದೆ. ಋಷಿಮುನಿಯ ಸ್ವಭಾವವೂ ಇದೇ ರೀತಿ ಇದ್ದು ಸ್ವಚ್ಛ ಸ್ವಭಾವದಿಂದ ಎಲ್ಲರಿಗೂ ಪ್ರಿಯನಾಗಿ ತನ್ನ ದೃಷ್ಟಿಯ ಮೂಲಕ ಮತ್ತ ಮಧರವಾಣಿಯಿಂದ ಜನರನ್ನು ಪವಿತ್ರವಾಗಿಸುತ್ತಾನೆ. ನಾವು ಕೂಡ ಈ ಜಲದಂತೆ ಶುದ್ಧ, ಸ್ನಿಗ್ದ ಮಧುರಸ್ವಭಾವವನ್ನು ಹೊಂದುವುದರಿಂದ ಬದುಕು ಸುಂದರವಾಗುತ್ತದೆ.

..ಮುಂದುವರಿಯುವುದು.
||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here