ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಥಮ ಚೆಂಡು ರವಿವಾರ ಕ್ಷೇತ್ರದ ಚೆಂಡಿನ ಗದ್ದೆಯಲ್ಲಿ ಆರಂಭಗೊಂಡಿತು. ಗದ್ದೆಗೆ ಚೆಂಡು ಹಾಕುವ ಮೊದಲು ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಚೆಂಡಿನಕಟ್ಟೆಗೆ ತೆರಳಿದ ಗುತ್ತಿನವರು ಚೆಂಡನ್ನು ಗಾಳಿಯಲ್ಲಿ ಸಾಂಕೇತಿಕ ಹಾರಿ ಬಿಡುವ ಮೂಲಕ ಕಟ್ಟುಕಟ್ಟಳೆಯ ಚೆಂಡಾಟಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಪ್ರಕಿಯೆ ನಡೆಯುವುದರಿಂದ ಈ ಬಾರಿ ಸಾಂಕೇತಿಕವಾಗಿ ಮೂರು ಸಲ ಚೆಂಡನ್ನು ಹಾರಿಸಿ ತೆಗೆಯಲಾಯಿತು.
ಇಲ್ಲಿ ಐದು ದಿನಗಳ ಚೆಂಡು ಉತ್ಸವ ನಡೆಯಲಿದೆ. ಕಡೇ ಚೆಂಡು ಎ. 11ರಂದು ನಡೆಯಲಿದೆ. ದೇಗುಲದ ತಂತ್ರಿ ಸುಬ್ರಹ್ಮಣ್ಯ, ದೇಗುಲದ ಪ್ರಧಾನ ಅರ್ಚಕ ಮಾಧವ ಭಟ್, ನಾರಾಯಣ ಭಟ್, ವಿಷ್ಣುಮೂರ್ತಿ ನಟ್ಟೋಜ, ಅಮ್ಮುಂಜೆ ಗುತ್ತು ಡಾ| ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ, ಮೊಗರುಗುತ್ತು ವಸಂತ ಶೆಟ್ಟಿ, ರಮೇಶ್ ರಾವ್, ಪರ್ದಕಂಡ ವಾಸುದೇವ ಭಟ್, ಕೃಷ್ಣ ಕುಮಾರ್ ಪೂಂಜ, ಕೃಷ್ಣರಾಜ್ ಮಾರ್ಲ, ಶಿವಪ್ರಸಾದ್ ಶೆಟ್ಟಿ, ಜೀವರಾಜ್ ಶೆಟ್ಟಿ, ಕೃಷ್ಣಪ್ಪ ಸಪಲಿಗ, ಮಟ್ಟಿ ಗಂಗಾಧರ ಜೋಗಿ ಮೊದಲಾದವರು ಉಪಸ್ಥಿತರಿದ್ದರು. ಸಾಮಾನ್ಯವಾಗಿ ಪೊಳಲಿ ಚೆಂಡಿನ ದಿನ ಊರಿಗೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅದರಂತೆ ತಾಲೂಕಿನಲ್ಲಿ ರವಿವಾರ ಪ್ರಥಮ ಚೆಂಡಿನ ದಿನ ಮಳೆ ಸುರಿದಿದೆ.