Home ನಂಬಿಕೆ ಸುತ್ತಮುತ್ತ ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ ಇಪ್ಪತ್ತನಾಲ್ಕು ಗುರುಗಳಲ್ಲಿ ಐದನೆಯ ಗುರು: ಅಗ್ನಿ

ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ ಇಪ್ಪತ್ತನಾಲ್ಕು ಗುರುಗಳಲ್ಲಿ ಐದನೆಯ ಗುರು: ಅಗ್ನಿ

2988
0
SHARE

ಅಗ್ನಿ ಅಥವಾ ಬೆಂಕಿಯು ತೇಜಸ್ಸನ್ನು ಹೊಂದಿರುವಂತದ್ದೂ ಜ್ಯೋತಿಯೂ ಆಗಿರುತ್ತದೆ. ಅಗ್ನಿಗೆ ಇಂತಹದೇ ಎಂಬ ರೂಪವಿಲ್ಲ. ಎಲ್ಲವನ್ನೂ ತನ್ನೊಡಲಿಗೆ ಹಾಕಿಕೊಂಡರೂ ಅದಕ್ಕೆ ಒಡಲಿಲ್ಲ. ಸರ್ವವನ್ನೂ ಭಕ್ಷಮಾಡುತ್ತದಾದರೂ ಗುಣದೋಷಗಳಿಂದ ಲಿಪ್ತವಾಗುದಿಲ್ಲ. ಅಂದರೆ ಅದಕ್ಕೆ ಇವು ಅಂಟಿಕೊಳ್ಳುವುದಿಲ್ಲ. ಮುನಿಯಾದವನೂ ಅಗ್ನಿಯಂತೆ ಸಂಗ್ರಹ ಪರಿಗ್ರಹಗಳಿಂದ ದೂರವಿದ್ದು, ತೇಜಸ್ವಿಯೂ ಗುಣದೋಷಗಳಿಂದ ದೂರವುಳಿದವನೂ ಆಗಿರುತ್ತಾನೆ ಎನ್ನುತ್ತದೆ ಮದ್ಭಾಗವತ. ಇದು ನಮ್ಮ ಜೀವನಕ್ಕೂ ಹೊಂದುವಂತಹ ನಿಯಮವನ್ನು ಹೇಳುತ್ತದೆ. ಅಗ್ನಿ ಅಥವಾ ಬೆಂಕಿಯಿಂದಲೂ ನಾನು ಜ್ಞಾನವನ್ನು ಪಡೆಯಬಹುದ್ದಾದರಿಂದ ಅಗ್ನಿಯೂ ಗುರುವೇ.

ಅಗ್ನಿ ಎಂದರೆ ಬೆಳಕು, ದೀಪ. ಉರಿಯನ್ನು ಹೊಂದಿರುವ ಜ್ವಾಲೆ. ಇದರ ಅಸ್ಥಿತ್ವವೇ ವಿಶೇಷವಾಗಿದೆ. ಕಡ್ಡಿಗೀರಿದಾಗ ಕಾಣಿಸುತ್ತದೆ. ಆರಿಸಿದಾಗ ಮಾಯವಾಗುತ್ತದೆ. ಎಷ್ಟು ಅಗತ್ಯವಿದೆಯೋ ಅಷ್ಟು ಹೊತ್ತು ಅದರ ಕೆಲಸ ಮಾಡುತ್ತಲೇ ಇರುತ್ತದೆ. ಅದು ವಸ್ತುವನ್ನು ಸುಡುತ್ತದೆ ಎಂಬುದು ಕಣ್ಣಿಗೆ ಕಾಣುವ ಸಂಗತಿ. ಅದು ಆ ವಸ್ತುವನ್ನು ಸೇವಿಸಿಯೂ ಇರಬಹುದು. ಅಗ್ನಿಯನ್ನು ಅಗ್ನಿದೇವ ಎಂದು ಪೂಜಿಸುತ್ತೇವೆ. ಹೋಮ ಹವನಗಳಲ್ಲಿ ದೇವರಿಗೆ ಅರ್ಪಿಸುವ ಹವಿಸ್ಸನ್ನು ನಮ್ಮಿಂದ ದೇವರಿಗೆ ಮುಟ್ಟಿಸುವ ಕಾರ್ಯವನ್ನು ಮಾಡುವವನೇ ಈ ಅಗ್ನಿದೇವ.

ಹಾಗಾಗಿ ಅಗ್ನಿ ಅಂದರೆ ಬೆಂಕಿಯ ಮೂಲಕವೇ ಯಜ್ಞಕುಂಡದಲ್ಲಿ ಹವಿಸ್ಸನ್ನು ಸಮರ್ಪಿಸಲಾಗುತ್ತದೆ. ಹಾಗಾಗಿ ಅಗ್ನಿ ಜನರ ಮತ್ತು ದೇವರ ನಡುವಿನ ಮಾಧ್ಯಮ. ಕತ್ತಲಿಗೆ ಬೆಳಕಾಗಿಯೂ ಕಾರ್ಯನಿರ್ವಹಿಸುವ ಅಗ್ನಿ ನಮ್ಮ ಜೀವನಕ್ಕೆ ಅಗತ್ಯವಾದುದು. ಇಂತಹ ಅಗ್ನಿಯು ಕಲಿಸುವ ಪಾಠವಾದರೂ ಯಾವುದು?

ಅಗ್ನಿಯು ತೇಜಸ್ಸಿನ ಪ್ರತಿರೂಪ. ಅಂತಹ ತೇಜಸ್ಸನ್ನು ನಾವು ಕೂಡ ಹೊಂದಬಹುದು. ಆದರೆ ಅಗ್ನಿಯಂತೆಯೇ ಎಲ್ಲವನ್ನೂ ನುಂಗಿಬಿಡುವ ಅದರ ಗುಣಕ್ಕೆ ವಶವಾಗದೇ ಹಾಗೆಯೇ ಇರಬೇಕು. ದುರ್ಗುಣಗಳು ಧಾರಾಳವಾಗಿರುವ ಭೂಮಿಯಲ್ಲಿ ಅದನ್ನು ಸುಡಬೇಕು. ನಾವು ಅಂತಹ ದುರ್ಗುಣಗಳಿಂದ ದೋಷಿಯಾಗಿದ್ದರೆ ಮೊದಲು ಆ ದುರ್ಗುಣಗಳನ್ನು ಸುಡಬೇಕು. ಇಲ್ಲಿ ಸುಡುವುದು ಎಂದರೆ ಅದರ ಅಸ್ಥಿತ್ವವನ್ನೇ ಇಲ್ಲವಾಗಿಸುವುದು. ಮತ್ತೆಂದೂ ಹುಟ್ಟದಂತೆ. ಇದರಿಂದ ನಾವು ಅಂತಹ ದೋಷಗಳಿಂದ ಪಾರಾಗಬಹುದು. ಅಗ್ನಿಯು ಯಾವಾಗಲೂ ಪ್ರಕಟವಾಗುವುದಿಲ್ಲ. ಅಪ್ರಕಟವಾಗಿರುವ ಬೆಂಕಿ ಬೇಕೆಂದಾಗ ಕಾಣಿಸಿಕೊಳ್ಳುತ್ತದೆ. ಅಂತೆಯೇ ನಾವು ಕೂಡ ಎಲ್ಲಿ ನಮ್ಮ ಪ್ರಕಟ ಅಂದರೆ ನಮ್ಮ ಹಾಜರಾತಿ ಅನಗತ್ಯವೋ ಅಲ್ಲಿಗೆ ಹೋಗಬಾರದು. ಎಲ್ಲಿ ಅಗತ್ಯವು ಅಲ್ಲಿ ಅಗತ್ಯವಿರುವಷ್ಟು ಹೊತ್ತು ಮಾತ್ರ ಅಲ್ಲಿರಬೇಕು. ಇದು ಅಗ್ನಿಯಿಂದ ಅರಿಯಬೇಕಾದ ಜ್ಞಾನ.

ದೀಪಕ್ಕೆ ವಿಶೇಷ ಸ್ಥಾನವಿರುವುದು ನಮಗೆಲ್ಲರಿಗೂ ಗೊತ್ತು. ದೀಪ ಬೆಳಗುವುದೆಂದರೆ ಅದು ಬೆಳವಣಿಗೆಯ ಸಂಕೇತ. ಶಾಂತಿಯ ಸಂಕೇತ. ಅಜ್ಞಾನದ ನಾಶದ ಸಂಕೇತ. ಇಂತಹ ದೀಪದಂತಹ ಮನಸ್ಸು ನಮ್ಮದಾಗಬೇಕು. ದೀಪವು ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಹರಿಸಿ ಸತ್ಯದರ್ಶನವನ್ನು ಮಾಡಿಸುತ್ತದೆ. ಅಂತೆಯೇ ಸನ್ಮಾರ್ಗವನ್ನು ತೋರುವ ದೀಪವೊಂದು ನಮ್ಮೊಳಗೆ ಉರಿಯುತ್ತಿರಬೇಕು. ಅಂದರೆ ಪ್ರತಿಯೊಂದು ಹೆಜ್ಜೆಯನ್ನಿಡುವಾಗ, ಪ್ರತಿಯೊಂದು ಮಾತನ್ನಾಡುವಾಗ, ಮಹತ್ತ್ವದ ನಿರ್ಧಾರಕ್ಕೆ ಬರುವಾಗ ಪರಿಣಾಮದ ಅರಿವು ನಮಗಿರಬೇಕು. ಅಗ್ನಿ ಒಂದು ವಸ್ತುವನ್ನು ಸುಟ್ಟರೂ ಆ ವಸ್ತುವಿನ ಗುಣಗಳನ್ನು ತಾನು ಹೊಂದದೆ ಅಗ್ನಿಯಾಗಿಯೇ ಉಳಿದುಕೊಳ್ಳುವುದೋ ಹಾಗೇ ಈ ಪ್ರಪಂಚದಲ್ಲಿ ಕೆಡುಕೆಂಬುದು ನಮ್ಮಿಂದ ಸುಡಲ್ಪಡಬೇಕೇ ಹೊರತು ನಾವೇ ಅದರೊಳಗೆ ಸಿಲುಕಿಕೊಳ್ಳಬಾರದು; ಅದರ ಗುಣ ನಮಗಂಟಬಾರದು. ಇದು ಅಗ್ನಿಯಿಂದ ಸೂಚಿತ ಸಂದೇಶ.

ಆತ್ಮವನ್ನು ಅಗ್ನಿಯ ರೂಪದಂತೆಯೇ ಇದೆ ಎಂಬುದನ್ನೂ ಅರಿತುಕೊಳ್ಳಬೇಕು. ಎಲ್ಲವನ್ನೂ ಸುಡುವ ಅಗ್ನಿಯು ಆ ಸುಡಲ್ಪಪಡುತ್ತಿರುವ ವಸ್ತುವಿನ ರೂಪದಂತೆ ಕಂಡು ಬರುತ್ತದೆ. ಅಂತೆಯೇ ಎಲ್ಲಾ ಚರಾಚರ ಪ್ರಾಣಿಗಳಲ್ಲಿ ಒಂದೇ ಆತ್ಮವು ಆಯಾಯ ಪ್ರಾಣಿಗಳ ರೂಪದಲ್ಲಿ ಕಂಡುಬರುತ್ತದೆ. ಹಾಗಾಗಿ ನಮ್ಮ ಆತ್ಮದಂತೆ ಎಲ್ಲ ಜೀವಿಗಳಲ್ಲಿನ ಆತ್ಮವನ್ನು ಗೌರವಿಸಬೇಕು ಮತ್ತು ನಮ್ಮ ಆತ್ಮವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇದು ಅಗ್ನಿಯ ಬೆಳಕಿನ ಸತ್ಯ.

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here