ಬೆಳ್ತಂಗಡಿ : “ಧರ್ಮಸ್ಥಳ ಮಹಾ ಮಸ್ತಕಾಭಿಷೇಕದಲ್ಲಿ ಜೈನಧರ್ಮದ ಸಾರವು ಸಾಕಾರಗೊಂಡಿದೆ. ನಾನು ಆತ್ಮದಿಂದ ಏನು ನೋಡಿದ್ದೇನೋ, ಶಾಸ್ತ್ರದಿಂದ ಏನು ಓದಿ ದ್ದೇನೋ ಅದು ಧರ್ಮಸ್ಥಳ ಕ್ಷೇತ್ರದಲ್ಲಿ ಸಾಕ್ಷಾತ್ಕಾರ ವಾಗಿದೆ’ ಎಂದು ಆಚಾರ್ಯ 108 ಪುಷ್ಪ ದಂತ ಮುನಿ ಮಹಾರಾಜರು ನುಡಿದರು.
ಮಸ್ತಕಾಭಿಷೇಕದ ಅಂಗವಾಗಿ ಗುರುವಾರ ಪಂಚಮಹಾವೈಭವದ ಕಾರ್ಯಕ್ರಮದಲ್ಲಿ ಬಾಹುಬಲಿ ಗೀತಾಂಜಲಿ ಭಾಗ-2 ಕೃತಿ ಬಿಡು ಗಡೆಗೊಳಿಸಿ ಅವರು ಪ್ರವಚನ ನೀಡಿದರು.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸೇವೆ ಅಪೂರ್ವ. ಜನರ ಕಲ್ಯಾಣಕ್ಕಾಗಿ ಜೀವದುದ್ದಕ್ಕೂ ಶ್ರಮಿಸುತ್ತಿದ್ದಾರೆ. ಅಂದಿನ ಆದಿನಾಥ ತೀರ್ಥಂಕರರ ಗುಣಗಳನ್ನು ಇಂದು ಹೆಗ್ಗಡೆ ಅವರಲ್ಲಿ ಕಾಣುತ್ತಿದ್ದೇವೆ ಎಂದರು.
ಕರ್ಮ ಎಂದು ಬಂದಾಗ ಸೋಲನ್ನು ಮೊದಲೇ ಒಪ್ಪಿಕೊಳ್ಳಬಾರದು. ಕರ್ಮ ಮಾಡಲು ಮೊದಲು ಕಾರ್ಯಪ್ರವೃತ್ತ ರಾಗಬೇಕು, ಅಂಹಿಸಾ ತತ್ತ್ವಾದರ್ಶದ ಮನೋಭಾವ ಪಾಲಿಸಬೇಕು ಎಂದು ಭರತಯುದ್ಧ ಸಂದರ್ಭದಲ್ಲಿ ಭಗವಾನ್ ಬಾಹುಬಲಿ ಸಂದೇಶ ಸಾರಿದ್ದಾರೆ ಎಂದರು.
ಮಹಾಮಸ್ತಕಾಭಿಷೇಕದ ಕಾರ್ಯ ಕ್ರಮದಲ್ಲಿ ಭರತ ಬಾಹುಬಲಿಯ ಜೀವನ ರಹಸ್ಯದ ರೂಪಕ ಪ್ರದರ್ಶನ ಅತ್ಯಮೋಘ. ಈ ರೂಪಕವನ್ನು ಕಣ್ತುಂಬಿಕೊಳ್ಳುವುದು ಜೀವನದಲ್ಲಿ ದೊರೆತ ಸುಯೋಗ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಗೀತಾಂಜಲಿ ಭಾಗ-2 ಕೃತಿ ಸಂಪಾದಿಸಿದ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತಿತರರಿದ್ದರು.