Home ಧಾರ್ಮಿಕ ಸುದ್ದಿ ಭಕ್ತ ಜನ ಸಾಗರವಾದ ಉಜಿರೆ-ಧರ್ಮಸ್ತಳ ರಾಜಮಾರ್ಗ

ಭಕ್ತ ಜನ ಸಾಗರವಾದ ಉಜಿರೆ-ಧರ್ಮಸ್ತಳ ರಾಜಮಾರ್ಗ

1277
0
SHARE

ಬೆಳ್ತಂಗಡಿ: ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಲಕ್ಷದೀಪೋತ್ಸವದ ಮೊದಲ ದಿನವಾದ ರವಿವಾರ ಭಕ್ತರಿಂದ ಉಜಿರೆ-ಧರ್ಮಸ್ಥಳ ದವರೆಗೆ ಬೃಹತ್‌ ಪಾದಯಾತ್ರೆ ನಡೆಯಿತು.

ಪಾದಯಾತ್ರೆ ಸಮಿತಿಯು 6ನೇ ವರ್ಷದಲ್ಲಿ ಆಯೋಜಿಸಿದ ಪಾದಯಾತ್ರೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವ ಸ್ಥಾನದಿಂದ ಹೊರಟು, ಸುಮಾರು 8 ಕಿ.ಮೀ. ದೂರದ ಧರ್ಮಸ್ಥಳಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ಭಕ್ತರು ಭಜನೆ ಸಹಿತ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಗುಣಗಾನ ಮಾಡುತ್ತಾ ಸಾಗಿದರು.

ಭಕ್ತರ ಬಾಯಾರಿಕೆಯನ್ನು ತಣಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಸಾಗಿದ ಭಕ್ತಸಮೂಹ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ನೀಡದೆ ಅತ್ಯಂತ ಶಿಸ್ತಿನಿಂದ ಕ್ಷೇತ್ರವನ್ನು ತಲುಪಿತು.

ಪಾದಯಾತ್ರೆಗೆ ಚಾಲನೆ ಉಜಿರೆ ದೇವಸ್ಥಾನದಲ್ಲಿ ಅಲ್ಲಿನ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಬಿ. ಯಶೋವರ್ಮ, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರ ಜತೆಗೂಡಿ ಪಾದಯಾತ್ರೆಗೆ ಚಾಲನೆ ನೀಡಿದರು.

ಚಾಲನೆಯ ಸಂದರ್ಭ ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ….ಎಚ್‌. ಮಂಜುನಾಥ್‌, ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಎಪಿಎಂಸಿ ಅಧ್ಯಕ್ಷ ಕೇಶವ ಬೆಳಾಲು, ಜಿ.ಪಂ. ಸದಸ್ಯರಾದ ಧರಣೇಂದ್ರಕುಮಾರ್‌, ಸೌಮ್ಯಲತಾ, ಪ್ರಮುಖರಾದ ಪ್ರತಾಪಸಿಂಹ ನಾಯಕ್‌, ವಸಂತ ಸಾಲ್ಯಾನ್‌, ಪೀತಾಂಬರ ಹೇರಾಜೆ, ಇಚ್ಚಿಲ ಸುಂದರ ಗೌಡ, ರಾಜಶೇಖರ ಅಜ್ರಿ, ಜಯಂತ ಕೋಟ್ಯಾನ್‌, ಪಿ.ಕೆ. ರಾಜು ಪೂಜಾರಿ, ರಾಜೇಶ್‌ ಪೈ, ಮೋಹನ್‌, ಪ್ರಭಾಕರ ಗೌಡ, ಶರತ್‌ ಕೃಷ್ಣ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ಸ್ತಬ್ಧಚಿತ್ರ, ಸ್ವಾಮಿಯ ಭಾವಚಿತ್ರ ಪಾದಯಾತ್ರೆಯಲ್ಲಿ ಭಕ್ತರ ಜತೆಗೆ ಶಿವನ ಮೂರ್ತಿಯನ್ನೊಳಗೊಂಡ ಸ್ತಬ್ಧಚಿತ್ರ, ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಗಳು, ಡಾ| ಹೆಗ್ಗಡೆ ದಂಪತಿಯ ಭಾವಚಿತ್ರದ ವಾಹನಗಳು ಸಾಗಿದವು. ಪಾನೀಯ ಕುಡಿದು ಲೋಟವನ್ನು ಹಾಕುವುದಕ್ಕಾಗಿ ಸೂಕ್ತ ಬುಟ್ಟಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಪಾದಯಾತ್ರೆಯ ಸಂದರ್ಭದಲ್ಲಿ ಪಾದಯಾತ್ರಿಗಳಿಗೆ ತೊಂದರೆಯಾದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ, ವಾಹನ-ಭಕ್ತರ ನಿಯಂತ್ರಣಕ್ಕೆ ಪೊಲೀಸ್‌ ಭದ್ರತೆ, ಅಚ್ಚುಕಟ್ಟಿನ ಸ್ವಯಂಸೇವಕ ತಂಡಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.

ಹೆಚ್ಚಿನ ಸಂಖ್ಯೆಯ ಭಕ್ತರು ಲಕ್ಷದೀಪೋತ್ಸವದ ಮೊದಲ ದಿನವಾದ ರವಿವಾರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಕ್ಷೇತ್ರವನ್ನು ಪೂರ್ತಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಬೀದಿಗಳಲ್ಲಿ ಸಾಕಷ್ಟು ಸಂಖ್ಯೆಯ ಸಂತೆ-ಅಂಗಡಿ ಮುಂಗಟ್ಟುಗಳು ಕಂಡುಬಂದವು. ಜತೆಗೆ ಡಿ. 3ರಂದು ಕಾರ್ತಿಕ ಸೋಮವಾರ ಪುಣ್ಯದಿನವಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here