Home ಧಾರ್ಮಿಕ ಸುದ್ದಿ ಸುಗ್ಗಿ ಮಾರಿಪೂಜೆಗೆ ಶೃಂಗಾರಗೊಂಡ ಕಾಪು

ಸುಗ್ಗಿ ಮಾರಿಪೂಜೆಗೆ ಶೃಂಗಾರಗೊಂಡ ಕಾಪು

ವಿದ್ಯುತ್‌, ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದೆ ಮಾರಿಯಮ್ಮ ದೇವಿ ಸನ್ನಿಧಾನ

925
0
SHARE

ಕಾಪು: ತುಳುನಾಡಿನ ಪ್ರಸಿದ್ಧ ಏಳುಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಸುಗ್ಗಿ ಮಾರಿಪೂಜಾ ಮಹೋತ್ಸವಕ್ಕೆ ಕಾಪು ಶೃಂಗಾರಗೊಂಡಿದೆ. ಪುರಾಣ ಪ್ರಸಿದ್ಧವಾಗಿರುವ 3 ಮಾರಿಗುಡಿಗಳೂ ವಿದ್ಯುತ್‌ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿವೆ.

ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿ (ಕಲ್ಯ)ಗೆ ವಿವಿಧೆಡೆಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮಾತ್ರವಲ್ಲದೇ ದೂರದ ಮುಂಬಯಿಯಿಂದಲೂ ಲಕ್ಷಾಂತರ ಭಕ್ತಾದಿಗಳು ಭಾಗವಹಿಸುತ್ತಾರೆ.

ಮಾರಿಪೂಜಾ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಬೆಳಗ್ಗಿನಿಂದಲೇ ವಿವಿಧ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ನೂರಾರು ಅಂಗಡಿಗಳು ಸಾರ್ವಜನಿಕರ ಉಪಯೋಗಕ್ಕಾಗಿ ತೆರೆದುಕೊಂಡಿವೆ. ಕಾಪುವಿನ ಮಾರಿಯಮ್ಮ ದೇವಿಗೆ ಅತ್ಯಂತ ಪ್ರಿಯವಾಗಿರುವ ರಕ್ತಾಹಾರ ಸಮರ್ಪಣೆಗೆ ಪೂರ್ವಭಾವಿಯಾಗಿ ಮಾರಿಗುಡಿಯ ಬಳಿ ಹಾಗೂ ಕಾಪು ಮಾರುಕಟ್ಟೆಯ ಬಳಿಯಲ್ಲಿ ಕುರಿ, ಆಡು, ಕೋಳಿ ಮಾರಾಟದ ಅಂಗಡಿಗಳೂ ತೆರೆದುಕೊಂಡಿವೆ.

100ಕ್ಕೂ ಅಧಿಕ ಮಂದಿ ಪೊಲೀಸರು ಸುಗ್ಗಿ ಮಾರಿಪೂಜೆಗೆ ಬರುವ ಭಕ್ತಾದಿಗಳ ರಕ್ಷಣೆಗಾಗಿ ಕಾಪುವಿನಲ್ಲಿ ಠಿಕಾಣಿ ಹೂಡಿದ್ದಾರೆ. ಕಾಪುವಿನ ಮೂರು ಮಾರಿಗುಡಿಗಳ ಪರಿಸರದಲ್ಲಿ ಮತ್ತು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾಪು ಪುರಸಭೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದೆ.

LEAVE A REPLY

Please enter your comment!
Please enter your name here