ಒಮ್ಮೆ ಕೃಷ್ಣನ ಮಕ್ಕಳು (ಯಾದವರು) ಆಟವಾಡುತ್ತಿದ್ದಾಗ. ಸಾಂಬನಿಗೆ ಗರ್ಭಿಣಿಯ ವೇಷ ತೊಡಿಸಿರುತ್ತಾರೆ, ಆ ವೇಷಧಾರಿ ಗರ್ಭಿಣಿಯಂತೆ ನಟಿಸುವ ನಿಟ್ಟಿನಲ್ಲಿ ವಸ್ತ್ರದೊಳಗೆ ಜೊಂಡು ಹುಲ್ಲನ್ನು ಇಟ್ಟುಕೊಂಡಿರುತ್ತಾನೆ . ಅದೇ ಸಮಯಕ್ಕೆ ಅಲ್ಲಿಗೆ ವಿಶ್ವಾಮಿತ್ರರು , ಕಣ್ವ ಹಾಗೂ ನಾರದ ಮಹರ್ಷಿಗಳು ಬರುತ್ತಾರೆ. ಈ ಮಕ್ಕಳು ವಿನೋದಕ್ಕಾಗಿ ಅವರ ಬಳಿಗೆ ಹೋಗಿ, ” ಇವಳು ಗರ್ಭಿಣಿಯಾಗಿದ್ದಾಳೆ ಯಾವ ಮಗುವಿಗೆ ಜನ್ಮ ನೀಡುತ್ತಾಳೆ” ಹೇಳಿ ಎಂದು ಕುತೂಹಲದಿಂದ ಕೇಳುತ್ತಾರೆ.
ಸತ್ಯ ತಿಳಿದ ಮುನಿಗಳು ಅವಮಾನವಾಯಿತೆಂದು ಕುಪಿತಗೊಂಡು, ಯಾವುದನ್ನೂ ಇಟ್ಟುಕೊಂಡು ಬಂದಿರುವೆಯೋ ಅದಕ್ಕೆ ಜನ್ಮ ನೀಡು ಅದರಿಂದಾಗಿ ನಿಮ್ಮ ಸಂತತಿಯೇ ಸರ್ವನಾಶವಾಗುತ್ತದೆ ಎಂದು ಶಪಿಸುತ್ತಾರೆ. ಮಕ್ಕಳು ನಕ್ಕು ಹಿಂದಿರುಗುತ್ತಾರೆ.
ಆಶ್ಚರ್ಯ ಎಂಬಂತೆ ಮರುದಿನ ಸಾಂಬನಿಗೆ ವೇದನೆಯೊಂದಿಗೆ ಪ್ರಸವವಾಗುತ್ತದೆ, ಆಗ ಯಾದವರು ಗಾಬರಿಯಿಂದ ಕೃಷ್ಣ, ಅಕ್ರೂರ ಉಗ್ರಸೇನರ ಬಳಿ ಬಂದು ನಡೆದದ್ದನ್ನು ವಿವರಿಸುತ್ತಾರೆ. ಅಕ್ರೂರ ತಕ್ಷಣವೇ, ಆ ಜೊಂಡನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಸಮುದ್ರಕ್ಕೆ ಹಾಕಿ” ಎಂದು ಹೇಳುತ್ತಾನೆ.
ಅದರಂತೆ ಯಾದವರು ಆ ಜೊಂಡನ್ನು ಚೆನ್ನಾಗಿ ಪುಡಿ ಮಾಡುತ್ತಾರೆ. ಆದರೆ ಅದರ ಚೂಪಾದ ತುದಿಯು ಮಾತ್ರ ಪುಡಿಯಾಗಲೇ ಇಲ್ಲ. ಅದನ್ನು ಹಾಗೆಯೇ ಸಮುದ್ರಕ್ಕೆ ಎಸೆದು ಹಿಂದಿರುಗುತ್ತಾರೆ. ಅಲ್ಲಿ ಕೃಷ್ಣ ಮುಗುಳ್ನಗುತ್ತ ಸಾಂಬ ಅವನ ಕರ್ತವ್ಯವನ್ನು ಚೆನ್ನಾಗಿ ಮಾಡಿದ್ದಾನೆ ಎನ್ನುತ್ತಾನೆ. ಇದೆಲ್ಲವವು ಮುಂದೆ ನಡೆಯುವ ಸಂಗತಿಗಳಿಗೆ ನಾಂದಿಯಾಗಿತ್ತು.
ಸಮುದ್ರಕ್ಕೆ ಎಸೆದ ಜೊಂಡು ಹುಲ್ಲಿನ ಪುಡಿ ಮತ್ತು ಅದರ ತುದಿಯಿಂದಾಗಿ ಯೆಥೇಚ್ಛವಾಗಿ ಜೊಂಡು ಹುಲ್ಲು ಬೆಳೆದುನಿಲ್ಲುತ್ತದೆ.
ಕುರುಕ್ಷೇತ್ರ ಯುದ್ಧದ ನಂತರ ಗಾಂಧಾರಿ ತನ್ನ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ತನ್ನ ವಂಶವೇ ನಿರ್ವಂಶವಾಯಿತು ಎಂದು ರೋಧಿಸುತ್ತಾ ಇದಕ್ಕೆಲ್ಲ ಕೃಷ್ಣ ನೀನೇ ಕಾರಣ ನಿನ್ನಿಂದಲೇ ನಾನು ನನ್ನ ಮಕ್ಕಳನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದೇನೆ, ಆ ನೋವು ಏನೆಂದು ನಿನಗೂ ತಿಳಿಯಲಿ ಆಗ ನಿನಗೆ ಅರ್ಥವಾಗುತ್ತದೆ ಎಂದು ಶಪಿಸುತ್ತಾಳೆ. ಕೃಷ್ಣ ಅದನ್ನು ಸಂತೋಷದಿಂದಲೇ ಸ್ವೀಕರಿಸುತ್ತಾನೆ.
ಕಾಲ ಉರುಳಿದಂತೆ ಕೃಷ್ಣನಿಗೆ ಅವತಾರ ಸಮಾಪ್ತಿಯ ಕಾಲ ಬಂದಿದೆ ಎಂದು ಅರ್ಥವಾಗಿತ್ತು ಹಾಗೆ ಮುನಿಗಳ ಶಾಪ ಮತ್ತು ಗಾಂಧಾರಿಯ ಶಾಪವು ಫಲಿಸುವ ಸಮಯ ಬಂದಿದೆ ಎಂದು, ಆಗ ಯಾದವರನ್ನು ವಿಹಾರಕ್ಕೆಂದು ಸಮುದ್ರದ ಬಳಿಗೆ ಕರೆತರುತ್ತಾನೇ. ಅಲ್ಲಿ ಮದ್ಯಪಾನ ಮಾಡಿ ಇಂದ್ರಿಯಗಳ ಸ್ಥಿಮಿತವನ್ನು ಕಳೆದುಕೊಂಡ ಯಾದವರು ಒಬ್ಬರನ್ನೊಬ್ಬರು ಹೀಯಾಳಿಸುತ್ತ, ಗೇಲಿ ಮಾಡಿಕೊಳ್ಳುತ್ತಿರುವ ವೇಳೆ ಸಾತ್ಯಕಿ ಮತ್ತು ಕೃತವರ್ಮರು ಜಗಳವನ್ನಾರಂಭಿಸಿದರು. ( ಕುರುಕ್ಷೇತ್ರದಲ್ಲಿ ಸಾತ್ಯಕಿ ಪಾಂಡವರ ಪರವಾಗಿಯು ಕೃತವರ್ಮ ಕೌರವರ ಪರವಾಗಿಯೂ ಇದ್ದರು) ಅಲ್ಲೇ ಬೆಳೆದಿದ್ದ ಜೊಂಡುಹುಲ್ಲನ್ನು ಹಿಡಿದು ಒಬ್ಬರನ್ನೊಬ್ಬರು ಪರ ವಹಿಸ್ಕೊಂಡು ಹೊಡೆದಾಡಲಾರಂಭಿಸಿದರು. ಮುನಿಯಾ ಶಾಪದಿಂದಾಗಿ ಆ ಹುಲ್ಲುಗಳು ಕತ್ತಿಯಂತೆ ಚೂಪಾಗಿದ್ದವು ಆದ್ದರಿಂದ ಕೂಡಲೇ ಯಾದವರು ಸಾವನ್ನಪ್ಪುತ್ತಿದ್ದರು. ಯಾದವೀ ಕಲಹದಲ್ಲಿ ಎಲ್ಲಾ ನಿರ್ನಾಮವಾಗಿರುವುದನ್ನು ನೋಡಿ ಆಯಾಸಗೊಂಡ ಕೃಷ್ಣ ಅಲ್ಲೇ ಇದ್ದ ಒಂದು ಮರದಡಿಯಲ್ಲಿ ವಿಶ್ರಮಿಸುತ್ತಿರುತ್ತಾನೆ.
ಅದೇ ಸಮಯಕ್ಕೆ ಜಿಂಕೆಯನ್ನು ಬೇಟೆಯಾಡುತ್ತಾ ಬಂದ ಒಬ್ಬ ಬೇಟೆಗಾರ ಜಿಂಕೆಗೆ ಗುರಿ ಇಟ್ಟು ಹೊಡೆಯುತ್ತಾನೆ ಅದು ತಪ್ಪಿ ಕೃಷ್ಣನ ಪಾದದಲ್ಲಿದ್ದ ಕಮಲಕ್ಕೆ ತಾಕುತ್ತದೆ. ಅದನ್ನು ಕಂಡು ಆ ಬೇಟೆಗಾರ ಹೆದರುತ್ತ ಓಡಿ ಬಂದು ಕ್ಷಮೆ ಕೇಳುತ್ತಾನೆ. ಕೃಷ್ಣ ಅವನನ್ನು ಸಮಾಧಾನ ಪಡಿಸಿ ಇದು ವಿಧಿ ಹೀಗೆ ಆಗಬೇಕಿತ್ತು ಅದು ನಡೆದಿದೆ ಎಂದು ಧೈರ್ಯ ಹೇಳಿ, ಅವನಿಗೆ ವಿಷ್ಣುರೂಪದ ದರ್ಶನ ನೀಡಿ ಅವತಾರವನ್ನು ಮುಗಿಸುತ್ತಾನೆ. ಅಲ್ಲಿಗೆ ದ್ವಾಪರ ಯುಗ ಮುಗಿದು ಕಲಿಯುಗದ ಆರಂಭಕ್ಕೆ ನಾಂದಿಯಾಯಿತು.
– ಪಲ್ಲವಿ