ಪುತ್ತೂರು : ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಯಲ್ಲಿ ಪೂರ್ವಶಿಷ್ಟ ಸಂಪ್ರದಾಯಗಳ ಆಚರಣೆಯೇ ದಾಖಲಾರ್ಹ ಮತ್ತು ಪ್ರಮುಖ ವಿಶೇಷ. ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವರಿಗೂ ಬಲಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೂ ನೇರ ಧಾರ್ಮಿಕ ಸಂಬಂಧವಿದೆ. ಎ. 16ರಂದು ಬಲಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ವಿವಿಧ ಬಿರುದಾವಳಿಗಳೊಂದಿಗೆ ರಾತ್ರಿ ಶ್ರೀ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸುತ್ತದೆ. ದೇವಸ್ಥಾನದ ಹೊರಾಂಗ ಣದಲ್ಲಿ ದೇವ – ದೈವ ಭೇಟಿ ನಡೆದು ಸಾಂಪ್ರದಾಯಿಕ ನುಡಿಕಟ್ಟು ನಡೆದು ದೈವಗಳ ಭಂಡಾರದ ಜತೆಗೆ ಶ್ರೀ ದೇವರ ಉತ್ಸವ ನಡೆಯುತ್ತದೆ.
ಹೂವು ಸಮರ್ಪಣೆ.
ಎ. 16ರಂದು ಶ್ರೀ ದೈವಗಳಿಗೆ ಭಕ್ತರು ಮಲ್ಲಿಗೆ ಹೂವು ಸಮರ್ಪಿಸುವ ಹರಕೆ ಸಲ್ಲಿಸುತ್ತಾರೆ. 2 ಲಕ್ಷ ರೂ.ಗಳಿಗೂ ಹೆಚ್ಚಿನ ಮೌಲ್ಯದ ಮಲ್ಲಿಗೆ ಶ್ರೀ ದೈವಗಳಿಗೆ ಸಮರ್ಪಣೆಯಾಗುತ್ತದೆ. ಹಳೆ ನಗರ ಪೊಲೀಸ್ ಠಾಣೆಯ ಬಳಿ ದೇವಸ್ಥಾನದ ವತಿಯಿಂದ ಮಲ್ಲಿಗೆ ದಂಡೆ ಮಾಲೆಯೊಂದಿಗೆ ದೈವಗಳನ್ನು ಸ್ವಾಗತಿಸಲಾಗುತ್ತದೆ. ಹರಕೆ ರೂಪದಲ್ಲಿ ಬಂದ ಮಲ್ಲಿಗೆಯನ್ನು ಪ್ರಸಾದ ರೂಪ ದಲ್ಲಿ ಕುಂಕುಮದೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ. ಎ. 17ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ಶ್ರೀ ದೈವಗಳ ಭಂಡಾರವನ್ನು ಬಂಗಾರ ಕಾಯರ್ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ. ಈ ಶಿಷ್ಟ ಸಂಪ್ರದಾಯವನ್ನು ಜಾತ್ರೆಯ ಸಂದರ್ಭದಲ್ಲಿ ಅನೂಚಾನವಾಗಿ ಪಾಲಿಸಲಾಗುತ್ತದೆ.
ಬಟ್ಟಲು ಕಾಣಿಕೆ ಒಮ್ಮೆ ಮಾತ್ರ
ಬ್ರಹ್ಮರಥೋತ್ಸವದ ಎ. 17ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಸೇವೆಯ ಬಳಿಕ ಭಕ್ತರಿಂದ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವರಿಗೆ ಬಟ್ಟಲು ಕಾಣಿಕೆ ಸಮರ್ಪಿಸುವ ಸಂಪ್ರದಾಯ ಇಲ್ಲಿದೆ. ದರ್ಶನ ಬಲಿಯೊಂದಿಗೆ ದೇವರ ಜತೆ ಇರುವ ಬಲಾ°ಡು ದಂಡನಾಯಕ ಉಳ್ಳಾಳ್ತಿ ಭಂಡಾರದ ಉಳ್ಳಾಳ್ತಿ ದೈವದ ಪಾತ್ರಿ ಅಪ್ಪಣೆ ನೀಡಿದ ಬಳಿಕವಷ್ಟೇ ಬಟ್ಟಲು ಕಾಣಿಕೆ ಸಮರ್ಪಣೆಯಾಗಬೇಕು.
ಅವಭೃಥ ಸವಾರಿ
ಜಾತ್ರೆಯ ಧಾರ್ಮಿಕ ವಿಶೇಷತೆಗಳಲ್ಲಿ ಶ್ರೀ ದೇವರ ವೀರಮಂಗಲ ಅವಭೃಥ ಸವಾರಿಯೂ ಪ್ರಮುಖವಾಗಿದೆ. ದೇವಳ ದಿಂದ 13 ಕಿ.ಮೀ. ದೂರದಲ್ಲಿರುವ ವೀರಮಂಗಲ ಕುಮಾರಧಾರಾ ನದಿಗೆ ಅವಭೃಥ ಸ್ನಾನಕ್ಕೆ ತೆರಳುವುದು. ಎ. 18ರಂದು ಸಂಜೆ ದೇಗುಲದಿಂದ ಸಾವಿ ರಾರು ಭಕ್ತರೊಂದಿಗೆ ದೇವರ ಅವಭೃಥ ಸವಾರಿ ಹೊರಟು ಎ. 19ರಂದು ಮುಂಜಾನೆ ವೀರಮಂಗಲ ಕುಮಾರ ಧಾರಾ ನದಿ ತಟವನ್ನು ತಲುಪುತ್ತಾರೆ. ದಾರಿಯುದ್ದಕ್ಕೂ ಆರತಿ, ಹಣ್ಣುಕಾಯಿ ಮತ್ತು ಕಟ್ಟೆಪೂಜೆಗಳನ್ನು ಸ್ವೀಕರಿಸುತ್ತಾ ದೇವರು ವೀರಮಂಗಲ ಜಳಕಕ್ಕೆ ಸಾಗುತ್ತಾರೆ. ಪುತ್ತೂರಿನಿಂದ ದೇವರ ಸವಾರಿಯ ಜತೆ ಪುರುಷರಕಟ್ಟೆಯ ತನಕ ತೆರಳುವ ಸಂಪ್ರದಾಯವನ್ನು ಕೆಲವು ಭಕ್ತರು ಈಗಲೂ ಪಾಲಿಸುತ್ತಾರೆ.
ನೋಡಲು ಅವಕಾಶವಿಲ್ಲ
ಎ. 17ರಂದು ತಡರಾತ್ರಿ ಶ್ರೀ ದೇವಾ ಲಯದ ಒಳಾಂಗಣದಲ್ಲಿ ನಡೆ ಯುವ ಶ್ರೀ ಭೂತ ಬಲಿಯನ್ನು ದೇವರ ಸೇವಕರ ಹೊರತು ಯಾರೂ ನೋಡಬಾರದು ಎಂಬ ಶಿಷ್ಟ ಪದ್ಧತಿ ಇಲ್ಲಿದೆ. ಭೂತ ಬಲಿ ಮುಗಿಯದೆ ದೇವರ ಶಯನೋತ್ಸವಕ್ಕೆ ತೆರಳು ವಂತಿಲ್ಲ. ಭೇರಿ ಪೂಜೆ ಮತ್ತು ಭಕ್ತರು ನೋಡಬಾರದ ಭೂತ ಬಲಿ ನಡೆಯು ವುದು ಈ ದೇವಾಲಯದಲ್ಲಿ ಮಾತ್ರ.
ವಿಶೇಷ ವರದಿ