ಉಡುಪಿ : ಶ್ರೀಕೃಷ್ಣ ಮಠದ ಬ್ರಹ್ಮರಥಕ್ಕೆ ನಾಲ್ಕು ಚಕ್ರಗಳನ್ನು ನೂತನವಾಗಿ ಅಳವಡಿಸಲಾಗಿದೆ. ಸುಮಾರು 35 ವರ್ಷಗಳ ಹಿಂದೆ ಅಳವಡಿಸಿದ್ದ ಚಕ್ರಗಳು ಶಿಥಿಲವಾದ ಕಾರಣ ಹೊಸ ಚಕ್ರಗಳನ್ನು ನಿರ್ಮಿಸಿ ಅಳವಡಿಸಲಾಯಿತು.
ಚಕ್ರಗಳಿಗೆ ಬೇಕಾದ ಹೆಬ್ಬಲಸು ಮರವನ್ನು ಕೇರಳದಿಂದ ತರಿಸಲಾಗಿದೆ. ಒಂದೊಂದು ಚಕ್ರ 40 ಸಿಎಫ್ಟಿ ಮರ ಹೊಂದಿದೆ. ಇದಕ್ಕೆ 800 ಕೆ.ಜಿ. ಕಬ್ಬಿಣದ ಪಟ್ಟಿಯನ್ನು 38 ಸ್ಟೀಲ್ ಬೋಲ್ಟ್ ಗಳ ಸಹಾಯದಿಂದ ಹೊಡೆಯಲಾಗಿದೆ. ಒಂದೊಂದು ಚಕ್ರ ಸುಮಾರು 1 ಟನ್ ಭಾರವಿದೆ. 6.5 ಅಡಿ ಎತ್ತರ, 10 ಇಂಚು ದಪ್ಪದ ಚಕ್ರದ ಕೆಲಸವನ್ನು ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ಮತ್ತು ಸಿಬಂದಿ ಮಾಡಿದ್ದಾರೆ. ಇದಕ್ಕೆ ತಗುಲಿದ ಸಮಯ ಒಂದು ತಿಂಗಳು. ಹಳೆಯ ಚಕ್ರಗಳನ್ನು ರಾಜಾಂಗಣದ ಬದಿ ಇಡಲಾಗಿದೆ. ಹೊಸ ಚಕ್ರಗಳನ್ನು ಲಾರಿಯಲ್ಲಿ ತಂದು ಕ್ರೇನ್ ಮೂಲಕ ಅಳವಡಿಸಲಾಯಿತು. ಕಬ್ಬಿಣದ ಪ್ಲೇಟ್ ಅಳವಡಿಸಿದ ಕಾರಣ ಚಕ್ರಕ್ಕೆ ಇನ್ನಷ್ಟು ಬಲ ಬರುತ್ತದೆ. 50 ವರ್ಷ ಬಾಳಿಕೆ ಬರಲಿದೆ ಎಂದು ಬಳ್ಕೂರು ಗೋಪಾಲ ಆಚಾರ್ಯ ತಿಳಿಸಿದ್ದಾರೆ. ಶನಿವಾರ ಅಳವಡಿಸಿದ ಚಕ್ರಗಳನ್ನು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.