ಉಡುಪಿ : ಕಲ್ಯಾಣಪುರ ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನದ ಭಜನಾ ಮಂಡಳಿಗೀಗ ಸುವರ್ಣ ಮಹೋತ್ಸವ ಸಂಭ್ರಮ. ಫೆ. 5ರಂದು ಆರಂಭಗೊಂಡ ನಗರ ಭಜನಾ ಕಾರ್ಯಕ್ರಮ ಶಿವರಾತ್ರಿಯಂದು ಅಖಂಡ ಭಜನೆಯೊಂದಿಗೆ ಸಮಾಪನಗೊಳ್ಳಲಿದೆ.
ಫೆ. 13ರ ಬೆಳಗ್ಗೆ ಕಲಶಪ್ರತಿಷ್ಠೆಯೊಂದಿಗೆ ಶಿವರಾತ್ರಿ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಫೆ. 14ರ ಬೆಳಗ್ಗೆ ಕಲಶ ವಿಸರ್ಜನೆ, ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ಫೆ. 14 ಬೆಳಗ್ಗೆ 10ಕ್ಕೆ ಅರ್ಚಕರ ಮನೆಗೆ ಶಿಲಾನ್ಯಾಸ, ಫೆ. 15ರ ಬೆಳಗ್ಗೆ 11.30ಕ್ಕೆ ದೇವರಿಗೆ ಮಹಾಶತರುದ್ರಾಭಿಷೇಕ ನಡೆಯಲಿದೆ.
ಕಲ್ಯಾಣಪುರ ಸಂತೆಕಟ್ಟೆ ರಾ.ಹೆ. ಬಳಿ ನಯಂಪಳ್ಳಿಯಲ್ಲಿರುವ ಈ ದೇವಸ್ಥಾನ ಬಹಳ ಪುರಾತನವಾದುದು. ಸ್ವರ್ಣಾ ನದಿ ತೀರದಲ್ಲಿ ದೇವಸ್ಥಾನವಿದೆ. ಮಧ್ವಾಚಾರ್ಯರು ಮಗುವಾಗಿದ್ದಾಗ ತಾಯಿ ಜತೆ ಬಂದಾಗ ಪುರಾಣ ಪ್ರವಚನ ಮಾಡುತ್ತಿದ್ದವರ ತಪ್ಪನ್ನು ತೋರಿಸಿ ಸರಿಪಡಿಸಿದ ತಾಣವಿದು. ಈ ವಿಷಯ ಮಧ್ವವಿಜಯದಲ್ಲಿ ಉಲ್ಲೇಖವಿದೆ. ಈ ಸ್ಥಳಕ್ಕೂ ಚಿತ್ರಾಪುರ ಸಾರಸ್ವತ ಸಮುದಾಯಕ್ಕೂ ಸಂಬಂಧವಿದೆ. ಕಾಲಕ್ರಮೇಣ ಇವರು ವಿವಿಧೆಡೆ ವೃತ್ತಿ ಸಂಬಂಧ ಹೋದರೂ ‘ನಯಂಪಳ್ಳಿ’ ಅಡ್ಡ ಹೆಸರನ್ನು ಇಂದಿಗೂ ಉಳಿಸಿಕೊಂಡಿದ್ದು ದೇವಸ್ಥಾನಕ್ಕೆ ಬಂದು ಹೋಗುತ್ತಾರೆ.
1967ರಲ್ಲಿ ಯು.ಬಿ. ಶ್ಯಾಮರಾಯ ಆಚಾರ್ಯರು ಯುವಕರನ್ನು ಸೇರಿಸಿಕೊಂಡು ಭಜನೆಯನ್ನು ಆರಂಭಿಸಿದರು. ಆರಂಭದಲ್ಲಿ ಸಂಕ್ರಯ್ಯ ಆಚಾರ್ಯ ಅಧ್ಯಕ್ಷರು, ಶ್ಯಾಮರಾಯ ಆಚಾರ್ಯ ಕಾರ್ಯದರ್ಶಿ, ಕೂಸಪ್ಪ ಸುವರ್ಣ ಕೋಶಾಧಿಕಾರಿ, ವಿಟ್ಠಲ ಜತ್ತನ್ ಉಪಾಧ್ಯಕ್ಷ, ನಾರಾಯಣ ಅಂಚನ್ ಜತೆ ಕಾರ್ಯದರ್ಶಿಯಾಗಿದ್ದರು. ಆಗ ಜಗನ್ಮೋಹಿನಿ ಭಜನಾ ಮಂಡಳಿ ಎಂಬ ಹೆಸರಿತ್ತು. ಬಳಿಕ ಮಡಿಮಲ್ಲಿಕಾರ್ಜುನ ಭಜನಾ ಮಂಡಳಿ ಹೆಸರಿನಲ್ಲಿ ನಿರಂತರವಾಗಿ ಸೋಮವಾರ ರಾತ್ರಿ ಭಜನೆ, ಪೂಜೆ, ಆರು ದಿನ ನಗರಭಜನೆ, ಶಿವರಾತ್ರಿಯಂದು ಅಖಂಡ ಭಜನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗ ಸುವರ್ಣ ಮಹೋತ್ಸವ ಸಂಭ್ರಮವಾಗಿದೆ.