ವಿಟ್ಲಮುಟ್ನೂರು : ಚಿನ್ನದಂತಹ ಮನಸ್ಸಿನ ಭಕ್ತಿ ಯಿಂದ ಪ್ರಾರ್ಥಿಸಿದಾಗ ದೇವರು ಪ್ರಸನ್ನರಾಗುತ್ತಾರೆ. ದೇಗುಲ, ದೈವಸ್ಥಾನ ಜೀರ್ಣೋದ್ಧಾರ ಊರಿಗೆ ಶ್ರೇಯಸ್ಕರ ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ತಿಳಿಸಿದರು.
ಬುಧವಾರ ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಶಿಬರಿಕಲ್ಲ ಮಾಡ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದಲ್ಲಿ ಫೆ. 20ರಂದು ದೈವಗಳ ಸ್ಥಾನ ಪ್ರದಾನದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಗ್ರಾಮಸ್ಥರ ಒಮ್ಮತ ದೇಶಕ್ಕೆ ಮಾದರಿ ಕನ್ಯಾನ ಬಾಳೆಕೋಡಿ ಶ್ರೀ ಕಾಶಿಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮಸ್ಥರ ಒಮ್ಮತ ದೇಶಕ್ಕೆ ಮಾದರಿ. ಧರ್ಮ ರಕ್ಷಣೆಗೆ ನಾವು ಮುಂದಡಿ ಇಡಬೇಕು. ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು ಎಂದರು.
ಮಂಗಳೂರು ಕೂಳೂರುಬೀಡಿನ ವಜ್ರಕುಮಾರ ಕರ್ಣಂತ್ತಾಯ ಬಲ್ಲಾಳರು ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಕತ್ತಲ್ಸಾರ್ ಅವರು ದೈವಾರಾಧನೆ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು. ಕೊಡಿಪಾಡಿ ಶಾಸ್ತಾ ವನದ ಅರ್ಚಕ ಪುರೋಹಿತ ಮಿತ್ತೂರು ನಾರಾಯಣ ಜೋಯಿಷ, ಉಪನ್ಯಾಸಕ ಡಾ| ನವೀನ್ ಮರಿಕೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ.ಟಿ . ವೆಂಕಟೇಶ್ವರ ನೂಜಿ ಉಪಸ್ಥಿತರಿದ್ದರು. ಅಶೋಕ್ ಎಂ., ಭೂತಾರಾಧನೆ ಮಾಡುವ ನಾರ್ಣ ನಲಿಕೆ ಹಾಗೂ ಕಬಡ್ಡಿಪಟು ವಿಶ್ವರಾಜ್ ಪೂಜಾರಿ ಕೊಪ್ಪಳ ಅವರನ್ನು ಗೌರವಿಸಲಾಯಿತು.
ಪುನೀತ್ ಮಾಡ್ತಾರ್ ಸ್ವಾಗತಿಸಿ, ಪದ್ಮಯ್ಯ ಗೌಡ ಪೈಸಾರಿ ಪ್ರಸ್ತಾವಿಸಿದರು. ಆನಂದ ಕೆ.ಟಿ ವಂದಿಸಿದರು. ಶ್ರೀಪತಿ ನಾಯಕ್ ಡಿ., ಸುಮಂತ್ ಆಳ್ವ, ಚಿದಾನಂದ ಪೆಲತ್ತಿಂಜ, ನಾರಾಯಣ ಪೂಜಾರಿ ಎಸ್.ಕೆ. ನಿರೂಪಿಸಿದರು.