Home ನಂಬಿಕೆ ಸುತ್ತಮುತ್ತ ರಹೂಗಣ ರಾಜನಿಗೆ ಜಡ ಭರತನಿಂದ ತತ್ತ್ವೋಪದೇಶ

ರಹೂಗಣ ರಾಜನಿಗೆ ಜಡ ಭರತನಿಂದ ತತ್ತ್ವೋಪದೇಶ

1777
0
SHARE

ಸಿಂಧು ಸೌವೀರ ದೇಶದ ಒಡೆಯ ರಹೂಗಣ ಮಹಾರಾಜನು ಬಹಳ ವೀರನೂ, ದೈವಭಕ್ತನೂ, ಉತ್ತಮ ಶ್ರದ್ದೆಯನ್ನು ಹೊಂದಿದವನೂ ಆಗಿದ್ದನು.  ಒಮ್ಮೆ ರಾಜನು ಪಲ್ಲಕ್ಕಿಯನ್ನೇರಿ ಹೋಗುತ್ತಿದ್ದಾಗ ದಾರಿಯಲ್ಲಿ ಇಕ್ಷುಮತಿ ನದಿಯ ತೀರದಲ್ಲಿ ಪಲ್ಲಕ್ಕಿಯನ್ನು ಹೊರುವ ಬೋಯಿಗಳ ನಾಯಕನಿಗೆ ಒಬ್ಬ ಬೋಯಿಯ ಅವಶ್ಯಕತೆ ಒದಗಿತ್ತು. ಅದಕ್ಕಾಗಿ ಬೋಯಿಯನ್ನು ಹುಡುಕುತ್ತಿದ್ದಾಗ ದೈವವಶದಿಂದ ಅವನಿಗೆ ಬ್ರಾಹ್ಮಣ ಶ್ರೇಷ್ಠನಾದ  ಜಡಭರತನು ಸಿಕ್ಕಿದನು. ‘ಈ ಮನುಷ್ಯನು ಹೃಷ್ಟ-ಪುಷ್ಟನಾಗಿ ಧೃಢಕಾಯನಾಗಿದ್ದಾನೆ, ತರುಣನಾಗಿದ್ದಾನೆ. ಇವನ ಅಂಗಾಂಗಗಳು ಗಟ್ಟಿ-ಮುಟ್ಟಾಗಿವೆ. ಆದ್ದರಿಂದ ಈತನು ಎತ್ತು-ಕತ್ತೆಗಳಂತೆ ಭಾರವನ್ನು ಚೆನ್ನಾಗಿ ಹೊರಬಲ್ಲನು’ ಎಂದು ಯೋಚಿಸಿ, ಆತನು ಬಿಟ್ಟಿ ಕೆಲಸಕ್ಕೆ ಸಿಕ್ಕಿದ್ದರಿಂದ ಇತರ ಬೋಯಿಗಳ ಜೊತೆಗೆ ಭರತನನ್ನು ಬಲಾತ್ಕಾರವಾಗಿ ಹಿಡಿದುತಂದು ಪಲ್ಲಕ್ಕಿಯನ್ನು ಹೊರೆಸಿಬಿಟ್ಟನು. ಮಹಾತ್ಮನಾದ ಭರತನು ಯಾವ ರೀತಿಯಿಂದಲೂ ಇಂತಹ ಕೆಲಸಕ್ಕೆ ಯೋಗ್ಯನಲ್ಲದಿದ್ದರೂ ಅವನು ಏನನ್ನು ಮರು ಮಾತಾಡದೆ ಸುಮ್ಮನೆ ಪಲ್ಲಕ್ಕಿಯನ್ನು ಹೊತ್ತು ನಡೆದನು.

         ಆ ದ್ವಿಜಶ್ರೇಷ್ಠನು ತನ್ನ ಕಾಲ್ಕೆಳಗೆ ಯಾವುದೇ ಜೀವಿಯೂ ಹಿಂಸೆಗೊಳಗಾಗಬಾರದೆಂದು ಭಯದಿಂದ ಒಂದು ಬಾಣದಷ್ಟು ಮುಂದಿನ ಭೂಮಿಯನ್ನು ನೋಡಿ ನಡೆಯುತ್ತಿದ್ದನು. ಅದರಿಂದ ಬೇರೆ ಬೋಯಿಗಳ ಜೊತೆಗೆ ಇವನ ನಡಿಗೆ ಸರಿಹೊಂದುತ್ತಿರಲಿಲ್ಲ. ಆದ್ದರಿಂದ ಪಲ್ಲಕ್ಕಿಯು ಅಡ್ಡಾದಿಡ್ಡಿ ಆಗುವುದನ್ನು ಕಂಡು ರಾಜಾ ರಹೂಗಣನು ಪಲ್ಲಕ್ಕಿಯನ್ನು ಹೊರುವವರನ್ನು ಕುರಿತು ” ಎಲೈ ಬೋಯಿಗಳೇ, ಸರಿಯಾಗಿ ನಡೆಯಿರಿ. ಪಲ್ಲಕ್ಕಿಯನ್ನು ಏಕೆ ಹೀಗೆ ಮೇಲಕ್ಕೂ-ಕೆಳಕ್ಕೂ ತೂಗುತ್ತ ಹೆಜ್ಜೆಹಾಕುತ್ತಿದ್ದೀರಲ್ಲ ? ” ಎಂದು ಆಕ್ಷೇಪಿಸಿದನು.

          ರಾಜನ ಆ ಆಕ್ಷೇಪಾರ್ಹವಾದ ಮಾತನ್ನು ಕೇಳಿ, ತಮಗೆ ಶಿಕ್ಷೆಯಾದೀತೆಂದು ಭಯದಿಂದ ಅವರು ರಾಜನಲ್ಲಿ ಹೀಗೆ ವಿನಂತಿಸಿಕೊಂಡರು.  ” ಮಹಾಪ್ರಭುಗಳೇ, ನಾವೇನು ಮೈಮರೆತಿಲ್ಲ ತಮ್ಮ ನಿಯಮ ಮರ್ಯಾದೆಗಳಿಗೆ ಅನುಗುಣವಾಗಿ ಸರಿಯಾಗಿಯೇ ಪಲ್ಲಕ್ಕಿಯನ್ನು ಸಾಗಿಸುತ್ತಿದ್ದೇವೆ. ಆದರೆ ಈ ಹೊಸ ಬೋಯಿಯು ಈಗತಾನೇ ಪಲ್ಲಕ್ಕಿಯನ್ನು ಹೊರಲು ನೇಮಿಸಲ್ಪಟ್ಟಿದ್ದರೂ ಬೇಗ-ಬೇಗನೇ ನಡೆಯುತ್ತಿಲ್ಲ. ನಾವು ಈತನೊಡನೆ ಪಲ್ಲಕ್ಕಿಯನ್ನು ಹೊರಲಾರೆವು” ಎಂದು ಹೇಳಿದರು.

           ಬೋಯಿಗಳ ಈ ದೀನವಾದ ಮಾತನ್ನು ಕೇಳಿ ರಹೊಗಣ ರಾಜನು ” ಸಂಸರ್ಗದಿಂದ ಉಂಟಾದ ದೋಷವು ಒಬ್ಬನಲ್ಲಿದ್ದರೂ ಆತನೊಡನೆ ಸಂಬಂಧವನ್ನು ಇಟ್ಟುಕೊಂಡಿರುವ ಎಲ್ಲ ಮನುಷ್ಯರಲ್ಲಿಯೂ ಹರಡುವುದು.  ಇದಕ್ಕೆ ಪ್ರತೀಕಾರ ಮಾಡದೇ ಇದ್ದರೆ ಎಲ್ಲ ಬೋಯಿಗಳ ನಡಿಗೆಯು ಕೆಟ್ಟುಹೋಗುವುದು”  ಎಂದು ಯೋಚಿಸಿದ ರಾಜನಿಗೆ ಸ್ವಲ್ಪ ಕೋಪವು ಉಂಟಾಯಿತು. ಅವನು ಮಹಾಪುರುಷರ ಸೇವೆಯನ್ನು ಮಾಡಿದ್ದರೂ ಕ್ಷತ್ರಿಯ ಸ್ವಭಾವಕ್ಕೆ ವಶನಾಗಿ, ಬಲವಂತವಾಗಿ ಅವನ ಬುದ್ಧಿಯು ರಜೋಗುಣದಿಂದ ತುಂಬಿಹೋಯಿತು. ಆಗ ಆತನು, ಬೂದಿ ಮುಚ್ಚಿದ ಕೆಂಡದಂತೆ, ಬ್ರಹ್ಮತೇಜಸ್ಸು  ಪ್ರಕಟವಾಗದೆ ಮರೆಗೊಂಡಿದ್ದ ಭರತನಿಗೆ, ” ಅಯ್ಯೋ ಪಾಪ.. ನಿನಗೆ ತುಂಬಾ ಆಯಾಸವಾಗಿರಬೇಕು. ಯಾರ ಸಹಾಯವೂ ಇಲ್ಲದೆ ಬಹು ದೂರದಿಂದ ಬಹುಕಾಲದವರೆಗೂ ನೀನೊಬ್ಬನೇ ಪಲ್ಲಕ್ಕಿಯನ್ನು ಹೊತ್ತು ಬಂದಿರುವೆ. ನಿನ್ನ ದೇಹವು ಕೃಶವಾಗಿದೆ, ನೀನು ದೃಢಕಾಯನಾಗಿಲ್ಲ, ಅಂಗಾಂಗಳ ವೈಫಲ್ಯವನ್ನು ಹೊಂದಿರುವೆ ಜೊತೆಗೆ ಮುಪ್ಪು ನಿನ್ನನ್ನು ಆವರಿಸಿದೆಯಲ್ಲವೇ… ಎಂದು ವ್ಯಂಗ್ಯದ ಮಾತುಗಳನ್ನು ಮನಸಿಗೆ ಕುಟುಕುವಂತೆ ಆಡಿದನು.

      ಜಡಭರತನಿಗೆ ಮಾತ್ರ ಆ ಮಾತುಗಳಿಂದ ಯಾವ ಭಾವನೆಯು ಉಂಟಾಗಲಿಲ್ಲ ಅವನು ಹಿಂದಿನಂತೆಯೇ ಸುಮ್ಮನೆ ಪಲ್ಲಕ್ಕಿಯನ್ನು ಹೊತ್ತು ನಡೆಯುತ್ತಿದ್ದನು. ರಾಜನ ಮಾತುಗಳನ್ನು ಆತನು ಸ್ವಲ್ಪವೂ ಕೆಟ್ಟದಾಗಿ ಭಾವಿಸಲಿಲ್ಲ. ಏಕೆಂದರೆ ಪಂಚಭೂತಗಳೂ, ಇಂದ್ರಿಯಗಳೂ,ಅಂತಃಕರಣಗಳ ಸಮುದಾಯವಾದ ಈ ತನ್ನ ಕೊನೆಯ ಶರೀರವು ಅವಿದ್ಯೆಯ ಕಾರ್ಯವೇ ಆಗಿದೆ ಎಂದು ಆತನು ಅರಿತಿದ್ದನು. ಆ ಶರೀರವು  ವಿವಿಧ ಅಂಗಗಳಿಂದ ಕೂಡಿಕೊಂಡು ಕಾಣಿಸಿಕೊಂಡಿದ್ದರೂ ವಸ್ತುತಃ ಇರಲಿಲ್ಲ ಅದಕ್ಕೆ ಅವನಿಗೆ ‘ನಾನು-ನನ್ನದು’ ಎಂಬುದೆಲ್ಲವು ಸರ್ವಥಾ ಹೊರಟುಹೋಗಿತ್ತು ಮತ್ತು ಅವನು ಬ್ರಹ್ಮ್ಮಸ್ವರೂಪನೇ ಆಗಿದ್ದನು.

     ರಾಜನಿಗಾದರೂ ತಾನು ಇಷ್ಟು ಹೇಳಿದರು ಪಲ್ಲಕ್ಕಿಯು ಸರಿಯಾಗಿ ಹೋಗದೆ ಇರುವುದನ್ನು ಕಂಡು ರಾಜನು ಕ್ರೋಧದಿಂದ ಕೆಂಡಕಾರುತ್ತಾ ಆ ಭರತಮುನಿಯನ್ನು ” ಎಲವೋ ! ಇದೇನಿದು? ನೀನು ಜೀವಂತವಾಗಿದ್ದರೂ ಸತ್ತಿರುವೆಯಾ ? ನನ್ನನ್ನು ತಿರಸ್ಕರಿಸಿ ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀದ್ದೀಯ. ನಾನು ನಿನಗೆ ಈಗಲೇ ತಕ್ಕ ಶಿಕ್ಷೆಯನ್ನು ವಿಧಿಸುತ್ತೇನೆ ಆಗ ನಿನ್ನ ಬುದ್ಧಿಯು ಸರಿಹೋಗುವುದು” ಎಂದು ಗದರಿಸಿದನು.

          ಹೀಗೆ ತಾನು ರಾಜನೆಂಬ ದುರಭಿಮಾನದಿಂದ ರಹೂಗಣ ರಾಜನು ಮನಬಂದಂತೆ ಮಾತುಗಳನ್ನಾಡಿದನು. ತನ್ನನು ಮಹಾಪಂಡಿತನೆಂದು ಭಾವಿಸಿಕೊಂಡು ರಜೋಗುಣ-ತಮೋಗುಣಗಳಿದ ಕೂಡಿಕೊಂಡು ಅಹಂಕಾರಕ್ಕೆ ವಶನಾಗಿ, ಶ್ರೀ ಭಗವಂತನ ಅನನ್ಯ ಪ್ರೇಮಕ್ಕೆ ಪಾತ್ರನಾದ, ಭಕ್ತಶ್ರೇಷ್ಠನಾದ  ಭರತನನ್ನು ತಿರಸ್ಕಾರ ಮಾಡಿದನು. ಯೋಗೇಶ್ವರರ ನಡೆಯು ಹೇಗಿರುತ್ತದೆ ಎಂಬುದರ ಪರಿಚಯವೇ ಆತನಿಗೆ ಇರಲಿಲ್ಲ.

          ಆತನ ಅಪಕ್ವವಾದ ಬುದ್ಧಿಯನ್ನು ನೋಡಿ ಭರತನು ನಸುನಕ್ಕು ಯಾವಬಗೆಯ ಅಭಿಮಾನವು ಇಲ್ಲದೆ ” ಎಲೈ ರಾಜನೇ, ನೀನು ಹೇಳಿರುವುದು ಯಥಾರ್ಥವಾಗಿದೆ. ಅದರಲ್ಲಿ ಉಪಹಾಸವೇನು ಇಲ್ಲ. ಭಾರವೆಂಬ ವಸ್ತು ಇರುವುದಾದರೆ ಅದು ಹೊರುವುವವನಿಗೆ ಇದೆ. ಮಾರ್ಗವಿರುವುದಾದರೆ ಅದು ನಡೆಯುವವನಿಗೆ ಇದೆ. ದಪ್ಪವಾಗಿರುವುದು ಅದರದ್ದೇ ಆಗಿದೆ. ಇವೆಲ್ಲವೂ ಶರೀರಕ್ಕಾಗಿಯೇ ಹೊರತು ಆತ್ಮನಿಗೆ ಅಲ್ಲ, ಜ್ಞಾನಿಗಳು ಹೀಗೆ ಮಾತನಾಡುವುದಿಲ್ಲ. ದಪ್ಪಗಿರುವುದು, ತೆಳ್ಳಗಿರುವುದು, ದೈಹಿಕ-ಮಾನಸಿಕ ರೋಗಗಳು,ಹಸಿವು ಬಾಯಾರಿಕೆಗಳು , ಭಯ , ಧೈರ್ಯ, ಇಚ್ಛೆ, ಮುಪ್ಪು, ನಿದ್ರೆ , ವಿಷಯ ಸುಖ, ಕ್ರೋಧ , ದೈನ್ಯತೆ , ಶೋಕ ಮುಂತಾದವುಗಳೆಲ್ಲವೂ ದೇಹಾಭಿಮಾನದಿಂದ ಉಂಟಾಗುವ ಜೀವನಲ್ಲಿ ಇರುತ್ತವೆ. ಆದರೆ ನನ್ನಲ್ಲಿ ಇವುಗಳು ಲವಶೇಷವೂ ಇಲ್ಲ.

        ರಾಜನೇ, ಜೀವಂತವಿದ್ದರೂ ಸತ್ತವನು ಎಂದು ನೀನು ಹೇಳಿದ ಮಾತು – ಎಷ್ಟು ವಿಕಾರಿ ಪದಾರ್ಥಗಳಿವೆಯೋ ಅವೆಲ್ಲವುಗಳಲ್ಲಿ ನಿಯಮಿತ ರೂಪದಿಂದ ಇವೆರಡು ಮಾತುಗಳು ಕಂಡುಬರುತ್ತದೆ. ಏಕೆಂದರೆ ಅವೆಲ್ಲವೂ ಆದಿ-ಅಂತ್ಯಗಳು ಇರುವಂತವುಗಳು. ಎಲೈ ರಾಜನೇ ಸ್ವಾಮಿ-ಸೇವಕ ಭಾವ ಸ್ಥಿರವಾಗಿರುವಲ್ಲಿಯೇ ಆಜ್ಞಾ-ಪಾಲನಾದಿಗಳ ನಿಯಮಹೊಂದಬಲ್ಲದು. ನೀನು ರಾಜನಾಗಿರುವೆ ಮತ್ತು ನಾನು ಪ್ರಜೆಯಾಗಿದ್ದೇನೆ ಈ ರೀತಿಯ ಭೇದ ಬುದ್ಧಿಯು ವ್ಯವಹಾರದಲ್ಲಿ ಅಲ್ಲದೆ ಬೇರೆಯೆಲ್ಲಿಯೂ ಕಂಡುಬರುವುದಿಲ್ಲ. ಪರಮಾರ್ಥ ದೃಷ್ಟಿಯಿಂದ ನೋಡಿದರೆ ಯಾರನ್ನು ಸ್ವಾಮಿ , ಯಾರನ್ನು ಸೇವಕನೆಂದು ಹೇಳುವುದು? ಆದರೂ ರಾಜನೇ ನಿನಗೆ ಸ್ವಾಮಿತ್ತ್ವದ ಅಭಿಮಾನವಿದ್ದರೆ ಹೇಳು ನಾನು ನಿನ್ನನ್ನು ಯಾವ ರೀತಿ ಸೇವೆ ಮಾಡಲಿ ? ವೀರನೇ ಉನ್ಮತ್ತನಾಗಿ ಜಡನಂತೆ ನನ್ನ ಸ್ಥಿತಿಯಲ್ಲೇ ಇರುತ್ತೇನೆ. ನನಗೆ ಚಿಕಿತ್ಸೆ ಮಾಡಿ ನಿನಗೆ ಏನು ಸಿಗುವುದು? ವಾಸ್ತವವಾಗಿ ನಾನು ಜಡ ಮತ್ತು ಪ್ರಮಾದಿಯೇ ಆಗಿದ್ದರೆ ನನಗೆ ಶಿಕ್ಷೆ ಕೊಡುವುದು ವ್ಯರ್ಥವಾಗುತ್ತದೆ.

           ಹೀಗೆ ಜಡ ಭರತ ಮಹಾ ಮುನಿಯು ರಾಜನ ಪ್ರಶ್ನೆಗಳಿಗೆಲ್ಲ ಉತ್ತರವನ್ನು ನೀಡಿ ಮೌನನಾಗಿ ಭೋಗದ ಮೂಲಕ ಪ್ರಾರಬ್ಧವನ್ನು ಕ್ಷಯಗೊಳಿಸಲಿಕ್ಕಾಗಿ ಪುನಃ ಮೊದಲಿನಂತೆಯೇ ಪಲ್ಲಕ್ಕಿಯನ್ನು ಹೆಗಲಮೇಲೆ ಇರಿಸಿ ನಡೆಯತೊಡಗಿದನು. ಅದರಿಂದ  ರಾಜನಿಗೆ ತನ್ನ ತಪ್ಪಿನ ಅರಿವಾಗಿ , ದೇಹಾತ್ಮಬುದ್ದಿಗೆ ಹೇತುಭೂತವಾದ ಅಜ್ಞಾನವು ನಿವೃತ್ತಿಯಾಗಿ ಹೋಗಿತ್ತು. ಅದರಿಂದ ಅವನು ಪರಮ ಶಾಂತನಾಗಿ ಈ ಬ್ರಾಹ್ಮಣನು ಯಾರೋ ಮಹಾತ್ಮನೇ ಇರಬೇಕು ಎಂದು ಯೋಚಿಸಿ ಪಲ್ಲಕ್ಕಿಯಿಂದ ಇಳಿದು ಬಂದು ಭರತನಲ್ಲಿ ಕ್ಷಮೆಯನ್ನು ಯಾಚಿಸಿ ತನಗೆ ತತ್ವೋಪದೇಶ ಮಾಡಬೇಕೆಂದು ವಿನಮ್ರತೆಯಿಂದ ವಿನಂತಿಸಿದನು. ಆಗ ಭರತನು ರಹೂಗಣನಿಗೆ ರಾಜಧರ್ಮವನ್ನೂ, ಯಥಾರ್ಥವಾದ ತತ್ವಗಳನ್ನು ಉಪದೇಶಮಾಡಿ, ಅವನ  ಅನುಮಾನಗಳನ್ನು ಪರಿಹರಿಸಿ ಭವಾಟವಿಯ ವರ್ಣನೆಯನ್ನು ಮಾಡಿದನು.

       ಗರುಡನೊಡನೆ ಒಂದು ನೊಣವು ಹೇಗೆ ಸ್ಪರ್ಧಿಸಲಾರದೋ ಹಾಗೆ ರಾಜರ್ಷಿ ಮಹಾತ್ಮಾ ಭರತನ ಮಾರ್ಗವನ್ನು ಬೇರೆ ಯಾವ ರಾಜನು ಮನಸಿನಿಂದಲೂ ಅನುಸರಿಸಲಾರನು. ಭರತನು ಪುಣ್ಯಶ್ಲೋಕನಾದ ಶ್ರೀಹರಿಯಲ್ಲಿ ಅನುರಕ್ತನಾಗಿ ಬೇರೆಯವರಿಗೆ ತ್ಯಾಗಮಾಡಲು ಬಹು ಕಷ್ಟಕರವಾದ, ಆದರೆ  ಅತಿಮನೋಹರವಾದ ಪತ್ನಿಪುತ್ರ ರಾಜ್ಯಾದಿ ಸಂಬಂಧಗಳನ್ನು ಮತ್ತು ಯಾರ ದಯಾಕಟಾಕ್ಷಕ್ಕೆ ಬೀಳಬೇಕೆಂದು ಜನರು ಹಾತೊರೆಯುತ್ತಾರೋ ಅಂತಹ ಲಕ್ಷ್ಮಿಯನ್ನು ಕೂಡ ಯುವಕನಾಗಿರುವಾಗಲೇ ತ್ಯಜಿಸಿಬಿಟ್ಟಿದ್ದನು.

      ಭರತ ಚಕ್ರವತಿಗೆ ಇದೆಲ್ಲವೂ ಉಚಿತವಾಗಿದೆ ಏಕೆಂದರೆ ಯಾವ ಮಹಾನುಭಾವರ ಚಿತ್ತವು ಮಧುಸೂದನನ ಸೇವೆಯಲ್ಲಿ ಅನುರಕ್ತವಾಗಿರುವುದೋ ಅವರ ದೃಷ್ಟಿಯಲ್ಲಿ ಮೋಕ್ಷಪದವು ಅತ್ಯಂತ ತುಚ್ಛವಾಗಿರುವುದು. ಕೊನೆಗೆ ಭರತನಿಗೆ ಸಾಕ್ಷಾತ್ ಭಗವಂತನ ಸಾಮೀಪ್ಯ ದೊರೆಯಿತು.

ಪಲ್ಲವಿ

LEAVE A REPLY

Please enter your comment!
Please enter your name here