Home ನಂಬಿಕೆ ಸುತ್ತಮುತ್ತ ನೀರಿನಲ್ಲಿ ಮೀನಿನಂತೆ ಈಜಿ, ಬದುಕು ಮೀನಿನಂತಾಗದಿರಲಿ; ಇಲ್ಲಿದೆ ಪಾಠ!

ನೀರಿನಲ್ಲಿ ಮೀನಿನಂತೆ ಈಜಿ, ಬದುಕು ಮೀನಿನಂತಾಗದಿರಲಿ; ಇಲ್ಲಿದೆ ಪಾಠ!

2914
0
SHARE

ಜಗತ್ತಿನಲ್ಲಿ ಬದುಕಲು ಸಾಕಷ್ಟು ಅವಕಾಶಗಳಿವೆ. ಆದರೆ ಹೇಗೆ ಬದುಕಬೇಕು ಎಂಬುದಕ್ಕೆ ಜಾಣ್ಮೆ ಬೇಕು. ಆ ಜಾಣ್ಮೆ ಹುಟ್ಟಲು ಜ್ಞಾನ ಬೇಕೇಬೇಕು. ಹೇಗೆಹೆಗೋ ಬದುಕಿ ಬಿಡುವುದು ಸುಲಭ. ಈ ಕಲಿಯುಗದಲ್ಲಿ ಅದಕ್ಕೆ ಅವಕಾಶ ಇನ್ನೂ ಹೆಚ್ಚಿವೆ. ಅದರೆ ಅದು ಬದುಕೇ ಅಲ್ಲ. ಬದುಕುವ ರೀತಿಯಂತು ಅಲ್ಲವೇ ಅಲ್ಲ. ಬದುಕು ಎಂಬುದು ಶಿಸ್ತುಬದ್ಧವಾದ ಸುಸಂಸ್ಕೃತವಾದ ಯೋಚನೆಯನ್ನು ಕಾರ್ಯಗತಗೊಳಿಸುವಿಕೆ. ಬದುಕು ಜಗತ್ತಿನ ಎಲ್ಲವನ್ನೂ ಅವಲಂಬಿಸಿದೆ. ತುಂಬಾ ಆಳವಾಗಿ ಅವಲೋಕಿಸುವುದಾದರೆ ನಮ್ಮ ಬದುಕು ನಮ್ಮ ಸ್ವಂತದ್ದಲ್ಲ. ಹಾಗಾಗಿ ನಿಯಮಗಳನ್ನು ಪಾಲಿಸಬೇಕು. ಬಣ್ಣದಂಗಡಿಯಲ್ಲಿ ನಮಗೆ ಬೇಕಾದ ಬಣ್ಣವನ್ನು ಆರಿಸುವುದು ಸುಲಭವಲ್ಲ. ಅಲ್ಲಿ ಎಲ್ಲ ಬಣ್ಣಗಳೂ ನಮ್ಮದೇ ಎಂಬ ಭ್ರಮೆಯನ್ನು ಉಂಟುಮಾಡಬಹುದು.

ಅಥವಾ ನಮ್ಮದ್ದಲ್ಲದ ಬಣ್ಣದತ್ತ ಆಕರ್ಷಿತರಾಗಿ, ಇನ್ನಾವುದೋ ಸುಖವನ್ನು ಅರಸಿಕೊಂಡು ಬದುಕು ಬರಡಾಗಿ ಬಿಡಬಹುದು. ನಮ್ಮ ಮನಸ್ಸನ್ನು ಚಂಚಲಗೊಳಿಸುವ ಸಂಗತಿಗಳು ಸಾವಿರಾರು; ಸಾವಿರದವು ಕೂಡ. ನಾವು ಈಜುತ್ತಿರುವುದೂ ಅಂತಹ ಸಮುದ್ರದಲ್ಲಿಯೇ. ಕಾಲು ಸೋಲಬಾರದು, ಉಸಿರು ನಿಲ್ಲಬಾರದು. ಇಂತಹ ಸಂದಿಗ್ಧದಲ್ಲಿಯೇ ನಾವು ಸುಲಭದ ದಾರಿಯತ್ತ ಸೆಳೆಯಲ್ಪಟ್ಟು, ಕೊನೆಯಲ್ಲಿ ಗುರಿ ತಲುಪದೆ ಅಸಮರ್ಥರಾಗಿ ಬಿಡುವುತ್ತೇವೆ. ನೀವು ಮೀನಿನಂತೆ ಸುಂದರವಾಗಿ, ಸುಭದ್ರವಾಗಿಯೇ ಈಜಿ. ಆದರೆ ಈ ಮೀನು ಮಾಡುವ ತಪ್ಪನ್ನು ನೋಡಿಯೂ ನೀವು ಮೀನಿನಂತಾಡದಿರಿ ಎನ್ನುತ್ತದೆ ಶ್ರೀಮದ್ಭಾಗವತ.

ಮೀನಿನ ಬದುಕನ್ನು ಬಹಳ ಹತ್ತಿರದಿಂದ ನೋಡುವವರು ನಾವು. ಸ್ವಚ್ಛಂದವಾಗಿ ನೀರಿನಲ್ಲಿ ಬದುಕುವ ಮೀನು ಮೀನುಗಾರನ ಗಾಳದ ತುದಿಯಲ್ಲಿ ಸಿಕ್ಕಿಸಿದ ಮಾಂಸದ ತುಂಡಿಗೋ, ಹುಳ-ಹಪ್ಪಟೆಗೋ ಆಸೆಪಟ್ಟು ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ. ಇದೇ ರೀತಿ ಮನುಷ್ಯನೂ ಜಿಹ್ವಾಚಾಪಲ್ಯಕ್ಕೆ ಸಿಲುಕಿ ಸಾವನ್ನಪ್ಪುತ್ತಾನೆ. ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದೇ ಇದ್ದಾಗ ಜಿಹ್ವಾಚಾಪಲ್ಯಗಳು ಹೆಚ್ಚುತ್ತವೆ. ಜಿಹ್ವೆ ಎಂದರೆ ನಾಲಿಗೆ. ನಾಲಿಗೆ ಬಯಸುವುದೇ ರುಚಿಯನ್ನು. ನಾಲಿಗೆಗೆ ಇದು ಸಿಹಿ, ಇದು ಖಾರ, ಇದು ಹುಳಿ, ಇದು ಕಹಿ ಹೀಗೆ ಎಲ್ಲಾ ಬಗೆಯ ರುಚಿ ತಿಳಿಯುತ್ತದೆ. ಆದರೆ ಅದು ತಿನ್ನಲು ಅರ್ಹವೇ? ಆರೋಗ್ಯವೇ? ಎಂಬುದನ್ನು ನಾಲಿಗೆ ನಿರ್ಧರಿಸದು. ಈ ನಿರ್ಧಾರ ಮನಸ್ಸಿಗೆ ಬಿಟ್ಟ ವಿಚಾರ. ನಾಲಿಗೆಗೆ ರುಚಿಯಾಗಿದ್ದರತ್ತವೇ ಮನಸ್ಸು ಕೇಂದ್ರೀಕೃತವಾಗುವುದು ನಮ್ಮ ದೌರ್ಬಲ್ಯ. ಆ ಮೀನಿಗೂ ನಮಗೂ ವ್ಯತ್ಯಾಸವಿರದು. ಆಹಾರ ದೇಹಕ್ಕೆ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಕೆಲವು ಆಹಾರವಸ್ತುಗಳು ಮನಸ್ಸಿನ ಏಕಾಗ್ರತೆಯನ್ನೂ ಕೆಡಿಸುತ್ತವೆಂಬುದೂ ಗೊತ್ತಿರುವ ಸಂಗತಿಯೇ. ಹಾಗಾಗಿ ಜಿಹ್ವಾಚಾಪಲ್ಯಕ್ಕೆ ಒಳಗಾಗದೇ, ಆಹಾರವನ್ನು ನಿಯಂತ್ರಿಸುವ ಜಾಣ್ಮೆಯನ್ನು ಈ ಮೀನಿನ ಬದುಕು ಹೇಳುವ ಪಾಠದಿಂದ ಅರಿತು ಬೆಳಸಿಕೊಳ್ಳಬೇಕು.

ವಿವೇಕವುಳ್ಳವನು ಇಂದ್ರಿಯಗಳನ್ನು ಗೆಲ್ಲುವುದಕ್ಕಾಗಿಯೇ ಜಿಹ್ವಾಚಾಪಲ್ಯದ ಭೋಜನವನ್ನು ನಿಲ್ಲಿಸುತ್ತಾನೆ. ಆತ ನಾಲಿಗೆಯ ಅಂದರೆ ರಸನೇಂದ್ರಿಯದ ವಶನಾಗುವುದಿಲ್ಲ. ಶ್ರೀಮದ್ಭಾಗವತದ ಪ್ರಕಾರ ಎಲ್ಲ ಇಂದ್ರಿಯಗಳನ್ನು ಗೆದ್ದವನೂ ಕೂಡ ರಸನೇಂದ್ರಿಯವನ್ನು ಗೆಲ್ಲದೆ ಜಿತೇಂದ್ರಿಯನಾಗಲಾರ. ಇಂದ್ರಿಯಗಳನ್ನು ಗೆಲ್ಲುವುದು ಸುಲಭವಲ್ಲ. ಮೀನಿನ್ನು ಮಾಂಸದ ತುಣುಕೊಂದು ಎಳೆಯುವಂತೆ ನಮ್ಮನ್ನೂ ಆಕರ್ಷಿಸುವ ರಸನೇಂದ್ರಿಯ ಮೂಲಕ ಸೋಲಿಸುವ ಅಂಶಗಳೇ ತುಂಬಿರುವ ಜಗತ್ತಿನಲ್ಲಿ ಸಮೃದ್ಧವಾದ ಜೀವನವನ್ನು ಹೊಂದಲು ಇಂತಹ ಪಾಠಗಳನ್ನು ಕಲಿಯುತ್ತ, ಅಳವಡಿಸಿಕೊಳ್ಳುತ್ತ ಬದುಕನ್ನು ಕಟ್ಟಬೇಕು.

..ಮುಂದುವರಿಯುವುದು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

– ಭಾಸ್ವ.

LEAVE A REPLY

Please enter your comment!
Please enter your name here