ಮೈಸೂರು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶನಿವಾರದಿಂದ ಜ.18ರವರೆಗೆ ನಡೆಯಲಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಅವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗಾಗಿ ಮಹಾ ಪ್ರಸಾದ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಆರು ದಿನಗಳ ಜಾತ್ರೆಯಲ್ಲಿ ಸುಮಾರು 20 ಲಕ್ಷ ಜನರು ಪ್ರಸಾದ ಸ್ವೀಕರಿಸುವ ಅಂದಾಜಿನೊಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಸುತ್ತಮುತ್ತಲಿನ ಭಕ್ತಾದಿಗಳು ದೇಣಿಗೆ ನೀಡಿರುವ 1500 ಕ್ವಿಂಟಾಲ್ ಅಕ್ಕಿಯ ಜತೆಗೆ ಗಂಗಾವತಿಯಿಂದ 1000 ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿಯನ್ನು ತರಿಸಲಾಗಿದೆ. 15 ಲೀಟರ್ ಸಾಮರ್ಥ್ಯದ 1200 ಟಿನ್ ಅಡುಗೆ ಎಣ್ಣೆ, ಬೆಳಗಾವಿ ಜಿಲ್ಲೆ ಬನಹಟ್ಟಿಯಿಂದ 12 ಟನ್ ಬಕೆಟ್ ಬೆಲ್ಲ, 150 ಕ್ವಿಂಟಾಲ್ ತೊಗರಿಬೇಳೆ, 15 ಸಾವಿರ ತೆಂಗಿನ ಕಾಯಿ, 8ಕ್ವಿಂಟಾಲ್ ಗೋಡಂಬಿ-ದ್ರಾಕ್ಷಿ ದಾಸ್ತಾನು ಮಾಡಲಾಗಿದೆ.
ನಿತ್ಯ 2 ಲೋಡ್ ತರಕಾರಿ: 6 ರಿಂದ 7 ಸಾವಿರ ಲೀಟರ್ ಹಾಲು ಹಾಗೂ 25 ಸಾವಿರ ಲೀಟರ್ ಮೊಸರನ್ನು ತರಿಸಲಾಗುತ್ತದೆ. ಸಾಂಬಾರಿಗಾಗಿ ಪಾಂಡವಪುರ, ಗುಂಡ್ಲುಪೇಟೆ ಭಾಗಗಳಿಂದ ಭಕ್ತರು ತಂದು ಕೊಡುವ ತರಕಾರಿಯ ಜತೆಗೆ ಮೈಸೂರಿನ ಎಪಿಎಂಸಿಯಿಂದ ನಿತ್ಯ 2ಲೋಡ್ ತರಕಾರಿ ತರಿಸಲಾಗುತ್ತದೆ.
ಬೃಹತ್ ಕೊಪ್ಪರಿಗೆಗಳು: ಭಕ್ತರಿಗೆ ಮಹಾ ಪ್ರಸಾದ ಉಣಬಡಿಸಲು ಒಂದೇ ಬಾರಿಗೆ 5 ಕ್ವಿಂಟಾಲ್ ಅನ್ನ ಬೇಯುವ 30 ಬೃಹತ್ ಕೊಪ್ಪರಿಗೆಗಳನ್ನು ತರಿಸಲಾಗಿದೆ. ಮಂಗಳ ಮಂಟಪದಲ್ಲಿ 100 ಕ್ವಿಂಟಾಲ್ ಸಿಹಿ ತಯಾರಿಸಲಾಗಿದೆ. ಆರು ದಿನಗಳ ಕಾಲ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ಮಹಾ ದಾಸೋಹ ಸಿದ್ಧಪಡಿಸಲು 500 ಬಾಣಸಿಗರು, 2000 ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ದಾಸೋಹಕ್ಕಾಗಿ ಪ್ರತಿ ವರ್ಷ ಹೊರಗಿನಿಂದ ಪ್ಲೇಟ್ಗಳನ್ನು ತರಿಸಲಾಗುತ್ತಿತ್ತು. ಈ ವರ್ಷ ಮಠದ ವತಿಯಿಂದಲೇ ಮಿಷನ್ ತರಿಸಿ 8 ರಿಂದ 9 ಲಕ್ಷ ಪೇಪರ್ ಪ್ಲೇಟ್ ತಯಾರಿಸಲಾಗಿದೆ.
ತರಕಾರಿ ಹೆಚ್ಚುವ ಯಂತ್ರ: ಇನ್ನು ಕ್ವಿಂಟಾಲ್ ಗಟ್ಟಲೆ ತರಕಾರಿ ಹಚ್ಚಲು ನೂರಾರು ಜನರು ಇಡೀ ದಿನ ಕೆಲಸ ಮಾಡಬೇಕಾದ ಅಗತ್ಯವಿತ್ತು. ಆದರೆ, ಈ ಬಾರಿ ತರಕಾರಿ ಹೆಚ್ಚುವ ಯಂತ್ರಗಳನ್ನು ಬಳಸಲಾಗುತ್ತಿದ್ದು, ಯಂತ್ರದ ಡೈ ಬದಲಿಸಿಕೊಂಡು ಬೇಕಾದ ಅಳತೆಗೆ ತರಕಾರಿಗಳನ್ನು ಕತ್ತರಿಸಿಕೊಳ್ಳಬಹುದಾಗಿದೆ.
ಪ್ರತ್ಯೇಕ ಸರದಿ: ಆಹ್ವಾನಿತರಿಗೆ ಸುತ್ತೂರಿನ ಉಚಿತ ಬಾಲಕರ ಶಾಲಾ ಆವರಣದಲ್ಲಿ, ಗಣ್ಯರಿಗೆ ಜೆಎಸ್ಎಸ್ ಕೃಷಿ ವಿಜಾnನ ಕೇಂದ್ರದಲ್ಲಿ ಮಹಾ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸ್ವಾಮೀಜಿಗಳಿಗೆ ಮಂತ್ರಭಾಷಿ ಅತಿಥಿಗೃಹದಲ್ಲಿ ವಾಸ್ತವ್ಯ ಮತ್ತು ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಭಕ್ತಾದಿಗಳಿಗಾಗಿ ಮಹಿಳೆಯರು ಮತ್ತು ಹಿರಿಯರಿಗೆ ಪ್ರತ್ಯೇಕ ಕೌಂಟರ್ ಹಾಗೂ ಪುರುಷರಿಗೆ ನಾಲ್ಕು ಕೌಂಟರ್ ತೆರೆಯಲಾಗಿದೆ. ಅಲ್ಲದೇ, ಸುತ್ತೂರು ಗ್ರಾಮದಲ್ಲಿ 3ಸಾವಿರ ಜನರಿಗೆ ಮಹಾ ದಾಸೋಹ ಉಣ ಬಡಿಸಲಾಗುತ್ತದೆ.
ಕೃಷಿ ಬ್ರಹ್ಮಾಂಡ: ಸಣ್ಣ ಮತ್ತು ಅತಿ ಸಣ್ಣ ರೈತರ ಸುಸ್ಥಿರ ಜೀವನೋಪಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಲಾನಯನ ತತ್ವಗಳು ಮತ್ತು ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ ಹೆಚ್ಚು ಖರ್ಚಿಲ್ಲದ ಸಮಗ್ರ ಕೃಷಿ ಮಾದರಿಯೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮಾದರಿಯ ಮೂಲಕ ರೈತರು ತಮಗಿರುವಷ್ಟು ಜಮೀನಿನಲ್ಲಿಯೇ ಸ್ವಾವಲಂಬಿಗಳಾಗಿ ಒಳ್ಳೆಯ ಕೃಷಿ ಮಾಡುವಂತೆ ಸ್ಫೂರ್ತಿ ನೀಡಲು ಉದ್ದೇಶಿಸಲಾಗಿದೆ.
ಕೃಷಿ ಬ್ರಹ್ಮಾಂಡದ 3 ಎಕರೆ ಪ್ರದೇಶದಲ್ಲಿ 162 ಬೆಳೆಗಳನ್ನು ಬೆಳೆಯಲಾಗಿದೆ. 45 ಬಗೆಯ ಹೂ, ತರಕಾರಿ ಹಾಗೂ 98 ಬಗೆಯ ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾಗಿದೆ.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಹಾ ಪ್ರಸಾದ ತಯಾರಿ ಹಾಗೂ ಭಕ್ತರಿಗೆ ಬಡಿಸಲು ಜೆಎಸ್ಎಸ್ ಸಂಸ್ಥೆಯ ನೌಕರರ ಜತೆಗೆ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದು ಸೇವೆ ಸಲ್ಲಿಸಿ ಹೋಗುತ್ತಾರೆ.
-ಎಸ್.ಪಿ.ಮಂಜುನಾಥ್, ಕಾರ್ಯದರ್ಶಿ, ಜೆಎಸ್ಎಸ್ ಮಹಾ ವಿದ್ಯಾಪೀಠ.
* ಗಿರೀಶ್ ಹುಣಸೂರು