ಸುಳ್ಯ : ಈ ಬಾರಿಯ ಈದುಲ್ ಫಿತ್ರ್ಹಬ್ಬವನ್ನು ಸುಳ್ಯ ನಗರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ವಿವಿಧ ಧರ್ಮಗಳ ಮುಖಂಡರನ್ನು ಮುಸ್ಲಿಂ ಸಮಾಜದ ಬಂಧುಗಳು ಭೇಟಿ ಮಾಡಿದರು. ಸಿಹಿ ತಿಂಡಿ ಹಂಚಿ, ರಮ್ಜಾನ್ ಹಬ್ಬವು ನಾಡಿಗೆ ಒಳಿತು ಉಂಟು ಮಾಡಲಿ. ಸೌಹಾರ್ದ ನೆಲೆ ನಿಲ್ಲಲು ಸಹಕಾರಿಯಾಗಲಿ ಎಂಬ ಈದ್ ಸಂದೇಶ ಹಂಚಿಕೊಂಡರು.
ಕೇಶವ ಕೃಪಾದ ಪುರೋಹಿತ್ ನಾಗರಾಜ್ ಭಟ್ ಅವರ ನಿವಾಸಕ್ಕೆ ಮತ್ತು ಸುಳ್ಯದ ಚರ್ಚ್ನ ಧರ್ಮಗುರು ರೆ| ಫಾ| ವಿನ್ಸೆಂಟ್ ಡಿ’ಸೋಜಾ ಅವರನ್ನು ಭೇಟಿ ಮಾಡಿ ಹಬ್ಬದ ಶುಭ ಹಾರೈಸಲಾಯಿತು. ವೃತ್ತ ನಿರೀಕ್ಷಕ ಸತೀಶ್ ಹಾಗೂ ನಗರ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬಂದಿ ವರ್ಗದವರನ್ನು ಭೇಟಿ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ಹಾಗೂ ಲಾರಿ ಚಾಲಕ ಮಾಲಕರ ಸಂಘದ ಸದಸ್ಯರು, ಕೆಎಸ್ ಆರ್ಟಿಸಿ ಸಿಬಂದಿ, ಪತ್ರಿಕಾಭವನಕ್ಕೆ ಭೇಟಿ ನೀಡಿ ಸಿಹಿ ಹಂಚಿದರು.
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಂ. ಮುಸ್ತಫ, ಅನ್ಸಾರಿಯಾ ಅನಾಥಾಲಯದ ಅಧ್ಯಕ್ಷ ಅಬ್ದುಲ್ ಮಜೀದ್, ಜನತಾ ಗ್ರೂಪ್ಸ್ನ ಉದ್ಯಮಿಗಳಾದ ರಿಜ್ವಾನ್ ಅಹಮದ್, ಹಮೀದ್ ಜನತಾ, ಶರೀಫ್ ಜಟ್ಟಿಪಳ್ಳ, ರಿಯಾಝ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು.