Home ಧಾರ್ಮಿಕ ಸುದ್ದಿ ಸುಳ್ಯ ಚೆನ್ನಕೇಶವನ ಸಂಭ್ರಮದ ರಥೋತ್ಸವ

ಸುಳ್ಯ ಚೆನ್ನಕೇಶವನ ಸಂಭ್ರಮದ ರಥೋತ್ಸವ

1005
0
SHARE

ಸುಳ್ಯಜ: ಚಳಿಗಾಲದ ಜಾತ್ರೆ ಯೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಚೆನ್ನ ಕೇಶವ ದೇವಾಲಯದ ವರ್ಷಾವಧಿ ಜಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ವೈಭವದ ರಥೋತ್ಸವ ನಡೆಯಿತು. ತಾಲೂಕು, ಹೊರ ತಾಲೂಕು, ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದರು.

ಗುರುವಾರ ರಾತ್ರಿ ಮಿತ್ತೂರು ನಾಯರ್‌ ದೈವಗಳ ಭಂಡಾರ ಮತ್ತು ಕಾನತ್ತಿಲ ದೈವದ ಭಂಡಾರ ದೇವಸ್ಥಾನಕ್ಕೆ ಆಗಮಿಸಿತ್ತು. ಮಿತ್ತೂರು ನಾಯರ್‌ ದೈವಗಳ ಭಂಡಾರ ದೇವರ ಬಲಿಯನ್ನು ಎದುರುಗೊಂಡು, ಅನಂತರ ಪೂಜಾ ವಿಧಿ ವಿಧಾನ ಪೂರ್ಣಗೊಳಿಸಿ, ವಾಲಸಿರಿ ಮಂಟಪದಲ್ಲಿ ದೇವರನ್ನು ಕುಳ್ಳಿರಿಸಿ, ದೈವದ ಭಂಡಾರವು ಪನ್ನೆಬೂಡಿಗೆ ತೆರಳಿತ್ತು.

ಕಾನತ್ತಿಲ ದೈವಗಳ ಭಂಡಾರದ ಉದ್ರಾಂಡಿ ಭೂತ ದೇವರ ಬಲಿ ಅನಂತರ ವಾಲಸಿರಿ ಮಜಲಿಗೆ ತೆರಳಿ, ಮರಳಿ ಬರುತ್ತದೆ. ದೇವರ ಉತ್ಸವ ಮೂರ್ತಿ ಬೂಡಿನ ಗದ್ದೆಯಲ್ಲಿ ಜರಗುವ ವಾಲಸಿರಿಗಾಗಿ ಹೊರಟು ರಥಬೀದಿಗೆ ಬಂದಾಗ ಕಾನತ್ತಿಲ ದೈವವು ದೇವರನ್ನು ಎದುರುಗೊಂಡಿತ್ತು. ಈ ದೈವವೂ ರಥೋತ್ಸವದಲ್ಲಿ ತೇರಿನ ಜತೆಗೆ ಹೋಗಿ ಬರುವುದು ಸಂಪ್ರದಾಯ.

ಶುಕ್ರವಾರ ಬೆಳಗ್ಗೆ ಸೂರ್ಯೋ ದೋಯಕ್ಕೆ ಸರಿಯಾಗಿ ಪನ್ನೆಬೂಡಿನಿಂದ ಮಿತ್ತೂರು ನಾಯರ್‌ ದೈವದ ಭಂಡಾರವು ಮರಳಿ ದೇವಸ್ಥಾನಕ್ಕೆ ಆಗಮಿಸಿತ್ತು. ದಾರಿ ಮಧ್ಯೆ ಭಕ್ತರಿಗೆ ಪ್ರಸಾದ ವಿತರಿಸಿ, ದೇವಸ್ಥಾನದಲ್ಲಿ ದೊಡ್ಡ ದರ್ಶನ ಬಲಿಯನ್ನು ಎದುರುಗೊಂಡಿತ್ತು. ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಪೂರ್ಣ ಗೊಂಡ ಅನಂತರ ಗಾಂಧಿ ನಗರದಲ್ಲಿರುವ ಮಿತ್ತೂರು ನಾಯರ್‌ ಕಟ್ಟೆಗೆ ಭಂಡಾರ ತೆರಳಿತ್ತು. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಅನಂತರ ಭಂಡಾರ ಮಿತ್ತೂರು ಛಾವಡಿಗೆ ಮರಳಿತ್ತು.

LEAVE A REPLY

Please enter your comment!
Please enter your name here