Home ಧಾರ್ಮಿಕ ಸುದ್ದಿ ಸುಳ್ಯ ದಸರಾಕ್ಕೆ ಚಾಲನೆ: ಶ್ರೀ ದೇವಿಯ ಮೆರವಣಿಗೆ, ಪ್ರತಿಷ್ಠೆ

ಸುಳ್ಯ ದಸರಾಕ್ಕೆ ಚಾಲನೆ: ಶ್ರೀ ದೇವಿಯ ಮೆರವಣಿಗೆ, ಪ್ರತಿಷ್ಠೆ

2523
0
SHARE

ಸುಳ್ಯ : ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ ಹಾಗೂ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ 48ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ-ಸುಳ್ಯ ದಸರಾ ಆರಂಭಗೊಂಡಿದ್ದು, ಶನಿವಾರ ಶ್ರೀದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬಾ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಪೂರ್ವಾಹ್ನ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್‌ ಅವರ ನೇತೃತ್ವದಲ್ಲಿ ನಡೆಯಿತು. ದಸರಾ ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಎಸ್‌. ಅಂಗಾರ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ವಿ. ಶೆಟ್ಟಿ, ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ. ಗೋಕುಲದಾಸ್‌, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ಕೆ. ರಾಜು ಪಂಡಿತ್‌, ಕಾರ್ಯದರ್ಶಿ ರಾಜೇಶ್‌ ಕುರುಂಜಿಗುಡ್ಡೆ ಮತ್ತು ನಿರ್ದೇಶಕರು, ಶಾರದಾಂಬಾ ದಸರಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ನವೀನ್‌ಚಂದ್ರ ಕೆ.ಎಸ್‌., ಪ್ರಧಾನ ಕಾರ್ಯದರ್ಶಿ ಎಂ.ಕೆ. ಸತೀಶ್‌, ನಿರ್ದೇಶಕರಾದ ಕೆ. ರಾಜು ಪಂಡಿತ್‌, ತೀರ್ಥರಾಮ ಜಾಲ್ಸೂರು, ಉದಯಕುಮಾರ್‌, ಕೆ. ಪುರುಷೋತ್ತಮ, ನ.ಪಂ. ಮಾಜಿ ಅಧ್ಯಕ್ಷ ಎನ್‌.ಎ. ರಾಮಚಂದ್ರ, ಜನಾರ್ದನ ದೋಳ, ಡಿ.ಎಂ. ಜಯಂತ ಶೆಟ್ಟಿ, ಸದಾಶಿವ ಕೆ. ಮೆಸ್ಕಾಂ, ಗೋಪಾಲ ಎಸ್‌. ನಡುಬೈಲು, ಕೆ. ಶಿವನಾಥ ರಾವ್‌ ಮತ್ತು ನ.ಪಂ. ಸದಸ್ಯರು ಉಪಸ್ಥಿತರಿದ್ದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಬಳಿಕ ವಿದ್ಯಾಶ್ರೀ ರಾಧಾಕೃಷ್ಣ ಅವರ ನಿರ್ದೇಶನದಲ್ಲಿ ಗಾನನೃತ್ಯ ಅಕಾಡೆಮಿ ಮಂಗಳೂರು ಇದರ ವಿದ್ಯಾರ್ಥಿಗಳಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ ನಡೆಯಿತು.

ಹೂವು ಖರೀದಿ ಜೋರು
ಪುತ್ತೂರು: ನವರಾತ್ರಿ ಹಬ್ಬದ ಸಂಭ್ರಮ ಮುಗಿಲು ಮುಟ್ಟುತ್ತಿದೆ. ಇನ್ನೆರಡು ದಿನದಲ್ಲಿ ಆಯುಧ ಪೂಜೆ, ವಿಜಯದಶಮಿ ಇರುವುದರಿಂದ ವ್ಯಾಪಾರ ವಹಿವಾಟು-ಖರೀದಿ ಭರಾಟೆಯೂ ಜೋರಾಗಿದೆ.

ನಗರದ ಅಲ್ಲಲ್ಲಿ ತಾತ್ಕಾಲಿಕ ಹೂವಿನ ಮಾರಾಟ ವ್ಯವಸ್ಥೆ ತಲೆಯೆತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಘಟ್ಟದ ಜಿಲ್ಲೆಗಳಿಂದ ಹೂವು ತರಿಸಿಕೊಂಡು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಸೇವಂತಿಗೆ, ಜೀನಿಯಾ, ಗೊಂಡೆ ಹೂವು, ಕಾಕಡ ಸಹಿತ ಪೂಜೆಗಳಲ್ಲಿ ಹಾಗೂ ವಾಹನಗಳ ಅಲಂಕಾರಕ್ಕೆ ಬಳಸುವ ಹೂವುಗಳ ಮರಾಟ ಬಿರುಸಿನಿಂದ ನಡೆಯುತ್ತಿದೆ. ಸದ್ಯಕ್ಕ ಈ ಹೂವುಗಳಿಗೆ ಮಾರಿಗೆ ಸರಾಸರಿ 100 ರೂ.ಗಳಂತೆ ಮಾರಾಟವಾಗುತ್ತಿದೆ. ಕೇಸರಿ ಹಾಗೂ ಹಳದಿ ಬಣ್ಣದ ಗೊಂಡೆ ಹೂವುಗಳ ಮಾಲೆ 100 ರೂ.ಗೆ ಮಾರಾಟವಾಗುತ್ತಿದೆ.

ಅ. 7 ಹಾಗೂ 8ರಂದು ಆಯುಧ ಪೂಜೆ, ವಿಜಯದಶಮಿ ಸಂಭ್ರಮ ಇರುವುದರಿಂದ ಹೂವುಗಳ ದರದಲ್ಲೂ ವ್ಯತ್ಯಾಸ ಕಾಣುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಮೈಸೂರು, ಹಾಸನ ಮೊದಲಾದ ಕಡೆಗಳಿಂದ ಪುತ್ತೂರಿನ ಸ್ಥಳೀಯ ಮಾರುಕಟ್ಟೆಗಳಿಗೆ ಹೂವಿನ ರಾಶಿ ಲಗ್ಗೆಯಿಟ್ಟಿವೆ.

“ಶಾರದಾ ಪೂಜೆಯಿಂದ ಜ್ಞಾನವೃದ್ಧಿ’
ಉಪ್ಪಿನಂಗಡಿ: ಶಾರದೆಯ ಆರಾಧನೆ ಜ್ಞಾನವೃದ್ಧಿಗೆ ಪೂರಕ. ಮಕ್ಕಳಿಗೆ ಶಾರದೆಯ ಮಡಿಲಲ್ಲಿ ಅಕ್ಷರಾಭ್ಯಾಸ ಮಾಡಿಸುವ ಪದ್ಧತಿ ಇದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಶನಿವಾರ 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ನಡೆದ ಚಂಡಿಕಾ ಹೋಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಕ್ಕಳ ಶಿಸ್ತುಬದ್ಧ ಜೀವನಕ್ಕೆ ಹೆತ್ತವರ ಮಾರ್ಗದರ್ಶನದ ಜತೆಗೆ ದೇವತಾರಾಧನೆಯೂ ಪ್ರಮುಖವಾಗುತ್ತದೆ. ಜೀವನೋತ್ಸಾಹ ಹೆಚ್ಚಿಸುವ ಸಲುವಾಗಿ ಮನೆ, ಮನಸ್ಸುಗಳು ಭಗವಂತನೊಂದಿಗೆ ಬೆಸೆದುಕೊಂಡಿರಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಮಾತನಾಡಿ, ಸಾಧನೆಗೆ ಮನುಷ್ಯ ಪ್ರಯತ್ನದಷ್ಟೇ ದೇವರ ಕೃಪೆಯೂ ಮುಖ್ಯ. ಮಕ್ಕಳನ್ನು ಸಮಾಜಕ್ಕೆ ಮಾದರಿಯನ್ನಾಗಿಸುವಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿದೆ ಎಂದರು.

ಎನ್‌. ಉಮೇಶ್‌ ಶೆಣೈ, ರಾಜಗೋಪಾಲ ಹೆಗ್ಡೆ, ಚಂದ್ರಶೇಖರ್‌ ಮಡಿವಾಳ, ರಘುರಾಮ, ಕಿಶೋರ್‌ ಕುಮಾರ್‌, ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಶಾರದೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಸ್ವಾಗತಿಸಿದರು. ಜಯಂತ ಪುರೋಳಿ ವಂದಿಸಿದರು. ಅಶೋಕ್‌ ಕುಮಾರ್‌ ರೈ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.

ಡಾ| ಕೃಷ್ಣಪ್ರಸಾದ್‌ ದೇವಾಡಿಗ ಅವರ ಸ್ಯಾಕ್ಸೋಫೋನ್‌ ವಾದನವು ಶೋತೃಗಳ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here