Home ನಂಬಿಕೆ ಸುತ್ತಮುತ್ತ ಬದುಕಿಗೊಂದು ಯಶಸ್ವೀ ಸೂತ್ರ

ಬದುಕಿಗೊಂದು ಯಶಸ್ವೀ ಸೂತ್ರ

580
0
SHARE

ಇಂದ್ರಿಯಗಳಿಂದ ದಾಳಿಗೆ ಒಳಗಾಗುವ ಮನಸ್ಸು, ಬೇಕು-ಬೇಡಗಳೆಂಬ ಸಂಕಷ್ಟಗಳು, ಬದುಕು-ಬವಣೆ ಎಂಬ ಪಯಣ ಎಲ್ಲವೂ ಕೆಲವೊಂದು ಕ್ಷಣ ನಮ್ಮ ಆಕಾಂಕ್ಷೆಯನ್ನೋ ನಿರೀಕ್ಷೆಯನ್ನೋ ತಡೆದು ನಿಲ್ಲಿಸಿಬಿಡಬಹುದು. ಬದುಕಿನ ಮೇಲೆ ಒಲವು ಶಾಶ್ವತವಾಗಿರಬೇಕಾದರೆ ಅಲ್ಲೊಂದು ಗೆಲುವಿನ ಚಿಲುಮೆ ಇರಲೇಬೇಕು. ದೇಹವನ್ನಾಳುವ ಮನಸ್ಸು ಸ್ಥಿರ ಮತ್ತು ಸಮರ್ಥವಾಗಿದ್ದಲ್ಲಿ ಬದುಕಿನಲ್ಲಿ ಯಶಸ್ಸು ಸಾಧ್ಯ. ಇಂದ್ರಿಯಗಳ ಲಾಲಸೆಗೆ ಮನಸ್ಸು ಕರಗಿ ಹೋಗದೆ ಹಾಗೆ ಇರಬೇಕು ಎಂಬುದನ್ನು ಧರ್ಮ ಹೇಳುತ್ತದೆ. ಧರ್ಮದ ಹಾದಿ ಕಟುವಾಗಿ ಕಂಡರೂ ಅದು ಗೆಲುವಿಗೆ ಇರುವ ಒಂದೇ ಒಂದು ಮಾರ್ಗ. ಹಾಗಾಗಿ ಮನಸ್ಸು ನಿಯಂತ್ರಿಸಲ್ಪಡದೆ ಧರ್ಮವನ್ನು ಸುಲಭವಾಗಿ ಹಿಂಬಾಲಿಸಲಾಗದು.
ಜಗತ್ತು ಮನಸ್ಸನ್ನು ಚಂಚಲಗೊಳಿಸುವ ವಸ್ತು, ವ್ಯಕ್ತಿ ಮತ್ತು ಶಕ್ತಿಗಳಿಂದ ಕೂಡಿದೆ. ಇದಕ್ಕೆ
ಸುಲಭವಾಗಿ ಸೋಲುವುದು ನಮ್ಮ ದುರ್ಬಲ ಮನಸ್ಸು. ನಮ್ಮೊಳಗಿನ ವಿವೇಚನೆ, ಬುದ್ಧಿವಂತಿಕೆ ಎಲ್ಲವೂ ಸಮೃದ್ಧವಾಗಿರಲು ಮನಸ್ಸು ಸ್ಥಿರವಾಗಿರುವುದು ಬಹುಮುಖ್ಯ.

ಹಾಗಾದರೆ ಈ ಮನಸ್ಸಿನ ತಳಮಳಗಳನ್ನು ನಿಯಂತ್ರಿಸುವ, ಬದುಕಿನ ಹಾದಿಯನ್ನೂ ಸುಗಮಗೊಳಿಸುವ ಸುಲಭ ವಿಧಾನ ಯಾವುದು? ಸುಭಾಷಿತ ಸುಧಾನಿಧಿಯಲ್ಲಿ ಇದಕ್ಕೊಂದು ಯಶಸ್ವೀ ಸೂತ್ರವಿದೆ.

“ನಿತ್ಯಂ ಕೋಪಾತ್ತಪೋ ರಕ್ಷೇಚ್ಛಿಯಂ ರಕ್ಷೇಚ್ಚ ಮತ್ಸರಾತ್ |
ವಿದ್ಯಾಂ ಮಾನಾವಮಾನಾಭ್ಯಾತ್ಮಾನಂ ಚ ಪ್ರಮಾದತಃ ||

ಯಾವಾಗಲೂ ತಪಸ್ಸನ್ನು ಕೋಪದಿಂದ ಕೆಡದಂತೆ ಕಾಪಾಡಿಕೊಳ್ಳಬೇಕಂತೆ. ಇಲ್ಲಿ ತಪಸ್ಸು ಎಂಬುದು ಬದುಕಿನ ಪ್ರತಿಯೊಂದು ಕ್ಷಣವೇ ಆಗಿದೆ. ಕೋಪದ ಕೈಯಲ್ಲಿ ಮನಸ್ಸನ್ನು ಕೊಟ್ಟರೆ ಅದು ನಮ್ಮ ಇಡೀ ಜೀವನವನ್ನು ಕ್ಷಣಾರ್ಧದಲ್ಲಿ ನಾಶ ಮಾಡಿಬಿಡುತ್ತದೆ. ಕೋಪ ನಮ್ಮ ಗುರಿಯನ್ನು, ದಾರಿಯನ್ನು, ಜ್ಞಾನವನ್ನು, ಆಸೆ-ಆಕಾಂಕ್ಷೆಗಳನ್ನು ಕೊಂದುಬಿಡುತ್ತದೆ. ಹಾಗಾಗಿ ಯಾವ ಕ್ಷಣದಲ್ಲಿಯೂ ಮನಸ್ಸು ಉದ್ವಿಘ್ನಗೊಳ್ಳದ ಹಾಗೆ ಜಾಗರೂಕತೆ ಮಾಡಬೇಕು. ಇನ್ನೊಂದು ಮಾತ್ಸರ್ಯದಿಂದ ನಮ್ಮ ಐಶ್ವರ್ಯವನ್ನು ನಾಶಮಾಡಿಕೊಳ್ಳಬಾರದು. ಮಾತ್ಸರ್ಯ ಹೆಚ್ಚುತ್ತ ಹೋದಾಗ ಪ್ರತಿಷ್ಠೆ, ಅಹಂಕಾರ ಬೆಳೆಯುತ್ತ ಹೋಗಿ ಅದೊಂದು ರೋಗವೇ ಆಗಿ ಬಿಡುತ್ತದಲ್ಲದೆ ನಮ್ಮಲ್ಲಿ ಇರುವ ಐಶ್ವರ್ಯವನ್ನೂ ನಿಧಾನವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ. ವಿದ್ಯೆ ಯಾರಿಂದಲೂ ಕದಿಯಲಾಗದ ಸಂಪತ್ತಾದರೂ ಕೂಡ ಅಪಮಾನಕ್ಕೆ ತುತ್ತಾಗದಂತೆ ಎಚ್ಚರಿಕೆವಹಿಸಬೇಕು. ಎಲ್ಲಿ ವಿದ್ಯೆ ಅಥವಾ ನಮ್ಮ ಜ್ಞಾನ ಅವಮಾನಕ್ಕೆ ಒಳಗಾಗುವುದೋ ಆಗ ನಮ್ಮೊಳಗಿನ ಶಕ್ತಿ ಕುಂದುತ್ತದೆ. ಬದುಕಿನ ಹಾದಿ ತಪ್ಪುತ್ತದೆ. ಇನ್ನು ಕೊನೆಯದಾಗಿ ಎಚ್ಚರಗೇಡಿತನದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಸದಾಮನಸ್ಸು ಜಾಗ್ರತವಾಗಿರಬೇಕು. ಪ್ರತಿಯೊಂದು ನಿರ್ಧಾರದಲ್ಲಿಯೂ ಯೋಚನೆ, ಯೋಜನೆ ಅಗತ್ಯ.

ಕೋಪ, ಮಾತ್ಸರ್ಯ, ಅಪಮಾನ ಮತ್ತು ಎಚ್ಚರಗೇಡಿತನ ಬದುಕಿಗೆ ಯಾವಾಗಲೂ ಮಾರಕವಾಗಿರುವಂಥವುಗಳು. ಇವುಗಳಿಂದ ನಮ್ಮ ಗುರಿ, ಐಶ್ವರ್ಯ, ವಿದ್ಯೆ ಮತ್ತು ಎಚ್ಚರಿಕೆಯಿಂದ ನಮ್ಮನ್ನು ನಾವು ಕಾಪಾಡಿಕೊಂಡಾಗ, ಮನಸ್ಸು ಸ್ಥಿರವೂ ಸಮರ್ಥವೂ ಆಗಿ ಬದುಕು ಸುಲಲಿತವಾದ ದಾರಿಯಲ್ಲಿ ಸಾಗುವುದು.

ವಿಷ್ಣು ಭಟ್ ಹೊಸ್ಮನೆ.

LEAVE A REPLY

Please enter your comment!
Please enter your name here