ಸುಬ್ರಹ್ಮಣ್ಯ/ ಧರ್ಮಸ್ಥಳ/ ಉಡುಪಿ: ಮಕರ ಸಂಕ್ರಮಣ ಸನ್ನಿಹಿತವಾಗುತ್ತಿರುವಂತೆ ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ ಕಂಡುಬರುತ್ತಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರವಿವಾರ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. ಮಕರ ಸಂಕ್ರಮಣ ಹತ್ತಿರವಾಗುತ್ತಿದ್ದು, ಶಬರಿಮಲೆ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ರವಿವಾರ ಆದುದರಿಂದ ದೂರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿತ್ತು.
2ನೇ ಶನಿವಾರ ಮತ್ತು ರವಿವಾರ ರಜೆಯಾದ್ದರಿಂದ ಧರ್ಮಸ್ಥಳ ಕ್ಷೇತ್ರದಲ್ಲಿ 25ರಿಂದ 30 ಸಾವಿರ ಮಂದಿ ಭಕ್ತರು ಸ್ವಾಮಿಯ ದರ್ಶನ ಪಡೆದರು. ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪಾರ್ಕಿಂಗ್, ವಸತಿ ಗೃಹಗಳಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದು, ಧರ್ಮಸ್ಥಳ, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ, ಸುರ್ಯ ಸದಾಶಿವರುದ್ರ ದೇವಸ್ಥಾನದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಸೋಮವಾರ ಶಿವ ಆರಾಧನೆಗೆ ವಿಶೇಷವಾದ್ದರಿಂದ ಧರ್ಮಸ್ಥಳದಲ್ಲಿ ಮತ್ತಷ್ಟು ಭಕ್ತರು ಸೇರುವ ನಿರೀಕ್ಷೆಯಿದೆ.
ಉಡುಪಿಯಲ್ಲಿ ಪರ್ಯಾಯ ಸಡಗರ
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಮಹೋತ್ಸವಕ್ಕೆ ಸಜ್ಜಾಗುತ್ತಿದ್ದು, ಸಪ್ತೋತ್ಸವವೂ ನಡೆಯುತ್ತಿದೆ. ಇದಲ್ಲದೆ ರಜಾದಿನಗಳು, ಶಬರಿಮಲೆ ಯಾತ್ರೆಯ ಕಾರಣದಿಂದಲೂ ಅಧಿಕ ಸಂಖ್ಯೆಯ ಭಕ್ತರು, ಪ್ರವಾಸಿಗರು ಕಂಡುಬರುತ್ತಿದ್ದಾರೆ.