Home ಧಾರ್ಮಿಕ ಸುದ್ದಿ ಕುಕ್ಕೆ ಸುಬ್ರಹ್ಮಣ್ಯ ಆನ್‌ಲೈನ್‌ ಸೇವೆಗೆ ಪ್ರತ್ಯೇಕ ವೆಬ್‌ಸೈಟ್‌

ಕುಕ್ಕೆ ಸುಬ್ರಹ್ಮಣ್ಯ ಆನ್‌ಲೈನ್‌ ಸೇವೆಗೆ ಪ್ರತ್ಯೇಕ ವೆಬ್‌ಸೈಟ್‌

1766
0
SHARE

ಗುತ್ತಿಗಾರು/ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನ್‌ಲೈನ್‌ ಸೇವೆಗಳ ಬುಕಿಂಗ್‌ ಮಾಡಲು ಗುತ್ತಿಗೆ ಪಡೆದಿರುವ ಸಂಸ್ಥೆಯ ವಿರುದ್ಧ ಸಾರ್ವಜನಿಕ ರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಗುತ್ತಿಗೆಯನ್ನು ರದ್ದು ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುತ್ತಿಗಾರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಕುಕ್ಕೆ ಕ್ಷೇತ್ರದ ಆನ್‌ಲೈನ್‌ ಸೇವೆಗೆ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಪ್ರಕರಣದ ಹಿನ್ನೆಲೆ: ಕೆಲವು ಸಮಯದ ಹಿಂದೆ ರಾಜ್ಯದ 54 ದೇವಸ್ಥಾನಗಳಲ್ಲಿ ಆನ್‌ಲೈನ್‌ ಸೇವೆಗೆ ನಿರ್ಧರಿಸಿದ್ದ ರಾಜ್ಯ ಸರಕಾರ ಅದರ ನಿರ್ವಹಣೆಯನ್ನು ಅರ್ಜುನ್‌ ರಂಗಾ ಎಂಬಾತನ ಪ್ಯೂರ್‌ ಪ್ರೇಯರ್‌ ಕಂಪೆನಿಗೆ ಗುತ್ತಿಗೆ ನೀಡಿತ್ತು. ಆ ಸಂಸ್ಥೆಯು ಕುಕ್ಕೆ ದೇವಸ್ಥಾನದ ನಕಲಿ ವೆಬ್‌ಸೈಟ್‌ ಮಾಡಿ ಭಕ್ತರಿಂದ ಅಕ್ರಮವಾಗಿ ಸೇವೆಗಳನ್ನು ಬುಕಿಂಗ್‌ ಮಾಡಿ ವಂಚಿಸುತ್ತಿತ್ತು ಎಂದು 2018ರ ಅ. 16ರಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ಪ್ರಕರಣ ಈಗ ಹೈಕೋರ್ಟಿನಲ್ಲಿದ್ದು, ಆರೋಪಿತ ಅರ್ಜುನ್‌ ರಂಗಾನ ವಿರುದ್ಧದ ಕ್ರಮಕ್ಕೆ ತಡೆ ನೀಡಿದೆ. ಈ ನಡುವೆ ಲಾಕ್‌ಡೌನ್‌ ಸಮಯದಲ್ಲಿ ಭಕ್ತರಿಗೆ ಪ್ರಮುಖ ಕ್ಷೇತ್ರಗಳ ದೇವರ ದರ್ಶನಕ್ಕೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತಂದಿತ್ತು. ಈ ಆನ್‌ಲೈನ್‌ ವ್ಯವಸ್ಥೆಯ ಜವಾಬ್ದಾರಿಯನ್ನು ಮತ್ತೆ ಪ್ಯೂರ್‌ ಪ್ರೇಯರ್‌ ಕಂಪೆನಿಗೆ ನೀಡಿರುವುದು ವಿವಾದಕ್ಕೆ ಕಾರಣ.

LEAVE A REPLY

Please enter your comment!
Please enter your name here