ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ಮತ್ತು ಉಮಾಮಹೇಶ್ವರನಿಗೆ ಶಿವರಾತ್ರಿ ರಥೋತ್ಸವ ಶನಿವಾರ ಸಂಜೆ ನೆರವೇರಿತು.
ಒಂದೇ ಪಲ್ಲಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರು ರಥಬೀದಿಗೆ ಬಂದು ರಥಾ ರೋಹಣರಾದರು. ದೇವಸ್ಥಾನದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿ ತ್ತಾಯರು ಪೂಜೆ ಸಲ್ಲಿಸಿದರು. ಬಳಿಕ ತಳಿರು ತೋರಣಗಳಿಂದ ಅಲಂಕೃತವಾದ ಚಿಕ್ಕರಥದಲ್ಲಿ ಶಿವರಾತ್ರಿ ಉತ್ಸವವು ನೆರವೇರಿತು. ಅವಳಿ ದೇವರು ಒಂದೇ ರಥದಲ್ಲಿ ಆರೂಢರಾಗಿ ರಥೋತ್ಸವ ನೆರವೇರುವುದು ಶಿವರಾತ್ರಿ ಮರುದಿನ ಮಾತ್ರ. ಭಕ್ತರ ಪರಾಕಿನೊಂದಿಗೆ ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ತವಿಲ್ ನಿನಾದಗಳೊಂದಿಗೆ ರಥೋತ್ಸವ ನೆರವೇರಿತು. ಬಳಿಕ ವಾಸುಕಿ ಛತ್ರದ ಶಿವರಾತ್ರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು. ರಥೋತ್ಸವದ ಬಳಿಕ ದೇವಸ್ಥಾನದಲ್ಲಿ ಡೋಲೋತ್ಸವ ಅಥವಾ ಉಚ್ಚಾಲಪೂಜೆ ನೆರವೇರಿತು.
ಕುಕ್ಕೆಯಲ್ಲಿ ಭಕ್ತ ಸಂದೋಹ ಶನಿವಾರ, ರವಿವಾರ ಕುಕ್ಕೆ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದುಬಂದಿತ್ತು. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಭೋಜನ ಸ್ವೀಕರಿಸಿದರು. ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರು ಹಾಗೂ ಶಿವರಾತ್ರಿಗೆ ಆಗಮಿಸಿದ ಆಸ್ತಿಕರು ಶನಿವಾರ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದರು.