ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರಣಿಕ ದೈವ ಗಳಾದ ಪುರುಷರಾಯ ಬೆಟ್ಟದಲ್ಲಿ ನೆಲೆ ಗೊಂಡಿರುವ ಪಂಚ ದೈವಗಳ ಮೂಲ ಸ್ಥಾನ ಅಭಿವೃದ್ಧಿಗೊಳ್ಳುತಿದ್ದು ದೈವಸ್ಥಾನದಲ್ಲಿ ಅನುಜ್ಞಾಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ಮಂಗಳವಾರ ನಡೆಯಿತು.
ದೇವಸ್ಥಾನ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನಡೆದವು. ದೇವಸ್ಥಾನದ ಕಾರಣಿಕ ದೈವಗಳಾದ ಹೊಸೋಳಿಗಮ್ಮ, ಪುರುಷರಾಯ, ಕಾಚು ಕುಜುಂಬ, ಪೊಟ್ಟ ಪಂಜುರ್ಲಿ ಮತ್ತು ಕೆಂಚರಾಯ ದೈವಗಳ ಸ್ಥಾನಗಳ ಶುದ್ಧೀಕರಣ, ಬಳಿಕ ಪಂಚ ದೈವಗಳ ಸಂಕೋಚ ಕಾರ್ಯ ನಡೆಯಿತು. ದೈವಗಳ ಪದ್ಮಕಲ್ಲು, ಮುಗುಳಿ, ಉಯ್ನಾಲೆ ಮುಂತಾದವುಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ಸುಮಾರು 22.45 ಲಕ್ಷ ರೂ. ವೆಚ್ಚದಲ್ಲಿ ಹೊಸೋಳಿಗಮ್ಮ ದೈವಸ್ಥಾನ, 10.15 ಲಕ್ಷ ರೂ. ವೆಚ್ಚದಲ್ಲಿ ಪುರುಷರಾಯ ದೈವಸ್ಥಾನ, 10.15 ಲಕ್ಷ ರೂ ವೆಚ್ಚದಲ್ಲಿ ಕಾಚುಕುಜುಂಬ ದೈವಸ್ಥಾನ, 4.20 ಲಕ್ಷರೂ ವೆಚ್ಚದಲ್ಲಿ ಕೆಂಚರಾಯ ದೈವಸ್ಥಾನ, 2.75 ಲಕ್ಷ ರೂ ವೆಚ್ಚದಲ್ಲಿ ಪೊಟ್ಟ ಪಂಜುರ್ಲಿ ದೈವಸ್ಥಾನ ನಿರ್ಮಾಣವಾಗಲಿದೆ. 4.30 ಲಕ್ಷ ರೂ. ವೆಚ್ಚದಲ್ಲಿ ನೈವೇದ್ಯ ಕೊಠಡಿ, 17.30 ಲಕ್ಷ ರೂ. ವೆಚ್ಚದಲ್ಲಿ ಹೊಸೋಳಿಗಮ್ಮ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ಆವರಣ ಗೋಡೆ, ಬಾವಿಕಟ್ಟೆ, ಒಳಾಂಗಣ ಸುತ್ತ ಇಂಟರ್ಲಾಕ್ ಅಳವಡಿಕೆಯಾಗಲಿದೆ. ಒಟ್ಟು 69.30 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿವೆ ಹಾಗೂ ಪುರುಷರಾಯ ಬೆಟ್ಟಕ್ಕೆ ತೆರಳಲು 99.50 ಲಕ್ಷ ರೂ. ವೆಚ್ಚದಲ್ಲಿ ಸುಮಾರು 500 ಮೆಟ್ಟಿಲು ನಿರ್ಮಾಣ ಕಾರ್ಯವು ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಒ ರವೀಂದ್ರ ಎಂ.ಎಚ್, ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ದೇವಸ್ಥಾನದ ಸಿಬಂದಿ ಮೋಹನ. ಷಣ್ಮುಖ ಉಪಾರ್ಣ ಎಂ.ಕೆ., ಗುತ್ತಿಗೆದಾರ ಪ್ರಕಾಶ್ ಕುಂದಾಪುರ, ಶೋಭಿತ್ ನೂಚಿಲ ಉಪಸ್ಥಿತರಿದ್ದರು.