ಸುಬ್ರಹ್ಮಣ್ಯ : ಇತಿಹಾಸ ಪ್ರಸಿದ್ಧ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಗುರುವಾರ ಶ್ರೀ ಹರಿಹರೇಶ್ವರ ದೇವರ ಪುನಃ ಪ್ರತಿಷ್ಠೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಉತ್ತರ ನಕ್ಷತ್ರ ಮೀನ ಲಗ್ನದ ಶುಭ ಮುಹೂರ್ತ ದಲ್ಲಿ ನಡೆಯಲಿದೆ.
ಬೆಳಗ್ಗೆ ಪ್ರಾಸಾದ ಪ್ರತಿಷ್ಠೆ ನಡೆದು ಬಳಿಕ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವ ಕಲಶಾಭೀಷೇಕ, ಪ್ರತಿಷ್ಠಾ ಬಲಿ ಮತ್ತು ಶ್ರೀ ಗಣಪತಿ ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಆಶೀರ್ವಚನ ನೀಡುವರು. ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳು ಆಶೀರ್ವಚನ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಧಾರ್ಮಿಕ ಉಪನ್ಯಾಸ ಮಾಡುವರು. ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ವಾಸ್ತು ತಜ್ಞ ರಮೇಶ ಕಾರಂತ ಬೆದ್ರಡ್ಕ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಹೊಸೋಳಿಕೆ ಮುಖ್ಯ ಅತಿಥಿಗಳಾಗಿರುವರು. ಬಳಿಕ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.