ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದೇವರ ಹೊರಾಂಗಣ ಉತ್ಸವ ಮುಗಿದ ಬಳಿಕ ದೇವರು ಗರ್ಭಗುಡಿ ಪ್ರವೇಶಿಸಿದರು.
ರವಿವಾರ ಬೆಳಗ್ಗೆ ಕ್ಷೇತ್ರದ ದೈವದ ದೈವಗಳ ಭಂಡಾರವು ದೇವರಗದ್ದೆಯ ಸಮೀಪದ ಪುರುಷರಾಯ ಬೆಟ್ಟದಲ್ಲಿ ಹೊಸಳಿಗಮ್ಮ ಮೂಲ ಗುಡಿ ಸೇರಿತು. ದೈವದ ಗುಡಿ ಬಳಿ ಹೊಸೊಳಿಗಮ್ಮ ದೈವದ ನೇಮ ಜರಗಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ಅರ್ಚಕರು, ಭಕ್ತರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿ ದೇಗುಲದ ಹೊರಾಂಗಣ ಬಿಟ್ಟು ರಾಜಬೀದಿಗೆ ಬಂದು ರಥೋತ್ಸವ ಆಗಬೇಕಾದರೆ ಅದಕ್ಕೆ ಮುಂಚಿತವಾಗಿ ಕ್ಷೇತ್ರದ ದೈವಗಳ ಭಂಡಾರವು ಮೂಲ ಸ್ಥಾನದಿಂದ ಹೊಸಳಿಗಮ್ಮನ ಗುಡಿಗೆ ಬರುತ್ತದೆ. ಇದು ಕ್ಷೇತ್ರದ ಸಂಪ್ರದಾಯ.
ಸೇವೆಗಳು ಅಬಾಧಿತ
ದೇವಸ್ಥಾನದಲ್ಲಿ ಹೊರಾಂಗಣ ಉತ್ಸವ ಗಳು ಸಂಪನ್ನಗೊಂಡಿದ್ದರೂ ದೇಗುಲ ದಲ್ಲಿ ನಿತ್ಯವೂ ನಡೆಯುವ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ತುಲಾಭಾರ ಸೇವೆಗಳು ಏಕಾದಶಿ ದಿನ ಹೊರತು ಪಡಿಸಿ ಇತರೆಲ್ಲ ದಿನಗಳು ಎಂದಿನಂತೆ ನಡೆಯುತ್ತವೆ.
ಮುಂದಿನ ದೀಪಾವಳಿ ಅಮಾವಾಸ್ಯೆ ದಿನ ಮತ್ತೆ ದೇವರ ಹೊರಾಂಗಣ ಪ್ರವೇಶ ಮೂಲಕ ಉತ್ಸವಾದಿಗಳು ಮತ್ತು ಹರಕೆ ಉತ್ಸವಗಳು ಆರಂಭವಾಗುತ್ತವೆ.