ಕಾರ್ಕಳ: ಇಸ್ಲಾಂನ ಆಚರಣೆಗಳು ವಿಶ್ವದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಮುಸ್ಲಿಮರ ಕೊಡುಗೆ ಮಹತ್ತರವಾಗಿದೆ. ಸುನ್ನತಿ (ಮುಂಜಿಕರ್ಮ) ಆಚರಣೆಯು ವೈದ್ಯಕೀಯವಾಗಿ ದೃಢಗೊಂಡಿದೆ ಎಂದು ಹೊಸ್ಮಾರು ಶೈಖ್ ಮುಯದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮೌಲಾನಾ ಉಮರ್ ಸಅದಿ ಹೇಳಿದರು.
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ನ ಹೊಸ್ಮಾರು ಶಾಖೆಯ ವತಿಯಿಂದ ಎ. 25ರಂದು ಹೊಸ್ಮಾರು ಶೈಖ್ ಮುಯದ್ದೀನ್ ಜುಮ್ಮಾ ಮಸೀದಿಯ ಆವರಣದಲ್ಲಿ ನಡೆದ ಸಾಮೂಹಿಕ ಉಚಿತ ಮುಂಜಿಕರ್ಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹೊಸ್ಮಾರು ಶೈಖ್ ಮುಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಮ್. ಎಚ್. ಸುಲೈಮಾನ್ ಸಅದಿ ಅಲ್ ಅಫ್ಲಲಿ ಮಾತನಾಡಿ, ವೈಜ್ಞಾನಿಕ ಹಾಗೂ ವೈದ್ಯಲೋಕ ಇಸ್ಲಾಮ್ ಅನುಸರಿಸುವ ಮುಂಜಿಕರ್ಮವನ್ನು ಅಂಗೀಕರಿಸಿದ್ದು, ಸರ್ವಮಾನ್ಯತೆಗೆ ಪಾತ್ರವಾಗಿದೆ. ಮುಂಜಿಕರ್ಮಗಳನ್ನು ಸಾಮೂಹಿಕವಾಗಿ ನೆರವೇರಿಸುವಲ್ಲಿ ಸಂಘಟನೆಗಳು ಸಕ್ರಿಯವಾಗಿದ್ದು, ಇದು ಧರ್ಮಜಾಗೃತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಸಾರ್ಥಕತೆ ಕಂಡಿದೆ. ಸಣ್ಣ ಪ್ರಾಯದಲ್ಲೇ ಮುಂಜಿಕರ್ಮ ನೆರವೇರಿಸುವುದರಿಂದ ಹಲವು ರೋಗಗಳಿಂದ ಮುಕ್ತಿ ಕಾಣ ಬಹುದು. ಆ ಮೂಲಕ ಧಾರ್ಮಿಕ ಆಚರಣೆ ನಡೆಸಿಕೊಂಡು ಮುಂದುವರಿಯಬೇಕು ಎಂದರು.
ಎಸ್ಸೆಸ್ಸೆಫ್ ಹೊಸ್ಮಾರು ಶಾಖೆಯ ಅಧ್ಯಕ್ಷ ಮೌಲಾನಾ ಮುಹಮ್ಮದ್ ಶರೀಫ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಂಜಿಕರ್ಮ ನೆರವೇರಿಸಿದ ಕಾರ್ಕಳ ಸರಕಾರಿ ಆಸ್ಪತ್ರೆ ನಿವೃತ್ತ ವೈದ್ಯಾಧಿಕಾರಿ ಡಾ| ರಹಮತುಲ್ಲಾ ಅವರನ್ನು ಸಮ್ಮಾನಿಸಲಾಯಿತು. ಹೊಸ್ಮಾರು ದಾರುಸ್ಸಲಾಮ್ ಸುನ್ನಿ ಮದರಸ ಅಧ್ಯಾಪಕ ಮೌಲಾನಾ ಮುಸ್ತಫಾ ಅಮಾನಿ, ಈದು ಗ್ರಾ.ಪಂ. ಸದಸ್ಯ ಶೈಖ್ ಮುಯದ್ದೀನ್, ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಗುಂಪಕಲ್ಲು, ಎಸ್ವೈಎಸ್ ಅಧ್ಯಕ್ಷ ಎನ್.ಸಿ. ಅಹ್ಮದ್ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಿರೂಪಿಸಿ, ವಂದಿಸಿದರು.