Home ಧಾರ್ಮಿಕ ಸುದ್ದಿ ಸಂತ ಅಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ; ಬಲಿಪೂಜೆ

ಸಂತ ಅಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ; ಬಲಿಪೂಜೆ

11
0
SHARE

ಮಹಾನಗರ: ಸಂತ ಅಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ನಾಲ್ಕನೇ ದಿನದ ಬಲಿಪೂಜೆಯನ್ನು ಶನಿವಾರ ಮಿಲಾಗ್ರಿಸ್‌ ದೇಗುಲದಲ್ಲಿ ಆತ್ಮ ಜ್ಯೋತಿ ಸಮಾಲೋಚನ ಕೇಂದ್ರದ ವಂ| ಮ್ಯಾಕ್ಸಿಮ್‌ ಅರ್ಪಿಸಿದರು.

ವಂ| ಡೊಲ್ಫಿ ಸೆರಾವೊ ಅವರು ಪ್ರವಚನ ನೀಡಿ, ಮಕ್ಕಳಂತೆ ಆಗದಿದ್ದರೆ ನೀವು ದೇವರ ಸಾಮ್ರಾಜ್ಯ ಸೇರಲಾರಿರಿ ಎಂದು ಯೇಸು ಸ್ವಾಮಿ ಶಿಷ್ಯರಿಗೆ ಹೇಳಿದ್ದಾರೆ. ಮಕ್ಕಳಂತೆ ಆಗುವುದೆಂದರೆ ಮುಗ್ಧ ಮನಸ್ಸಿನವರಾಗುವುದು. ಮಕ್ಕಳಲ್ಲಿ ಕಪಟತನ ಇರುವುದಿಲ್ಲ. ಅಂತರ್ಜಾಲದ ಪ್ರಭಾವ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಮುಗ್ಧತೆಯಿಂದ ಬೆಳೆಸುವ ಅಗತ್ಯವಿದೆ ಎಂದರು.

ಲೌಕಿಕ ಅಗತ್ಯಗಳಿಗೆ ಬೇಕಾಗಿರುವುದನ್ನು ನೀಡುವ ಹಾಗೆ ದೇವರ ಪರಿಚಯವನ್ನು ಮಕ್ಕಳಿಗೆ ನಿಡಬೇಕಾಗಿದೆ. ಮಕ್ಕಳು ತಮ್ಮ ಹೆತ್ತವರನ್ನು, ಹಿರಿಯರನ್ನು ಗೌರವದಿಂದ ಕಾಣಲು ಕಲಿಯಬೇಕು. ಅವರಿಂದ ಉತ್ತಮ ಗುಣಗಳನ್ನು, ಮೌಲ್ಯಗಳನ್ನು ಕಲಿತು ತಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂಬ ಸಂದೇಶ ನೀಡಿದರು. ಬಲಿಪೂಜೆಯ ಕೊನೆಗೆ ಮಕ್ಕಳೆಲ್ಲರನ್ನು ಬಲಿ ಪೀಠದ ಮಂದೆ ಜತೆ ಸೇರಿಸಿ ಅವರ ಮೇಲೆ ಪ್ರತ್ಯೇಕ ಆಶೀರ್ವಾದವನ್ನು ಕೋರಲಾಯಿತು.

ಸಂಸ್ಥೆಯ ಸಹಾಯಕ ನಿರ್ದೇಶಕರು ವಂ| ತೃಶಾನ್‌ ಡಿ’ಸೋಜಾ ನವೇನ ಪ್ರಾರ್ಥನೆ ನಡೆಸಿಕೊಟ್ಟರು.

ಬಲಿಪೂಜೆಯಲ್ಲಿ ಭಾಗವಹಿಸಲು ಭಕ್ತಿಗೀತೆಗಳನ್ನು ಹಾಡಿದ ಮಕ್ಕಳ ಗಾಯನ ಮಂಡಳಿಯ ಸದಸ್ಯರಿಗೆ ಸಂಸ್ಥೆಯ ನಿರ್ದೇಶಕ ವಂ| ಒನಿಲ್‌ ಡಿ’ಸೋಜಾ ವಂದಿಸಿದರು. ಭಕ್ತರು ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here