Home ಧಾರ್ಮಿಕ ಸುದ್ದಿ ಶ್ರೀ ವೀರಭದ್ರೇಶ್ವರ ಜಾತ್ರೆ ನಾಳೆಯಿಂದ

ಶ್ರೀ ವೀರಭದ್ರೇಶ್ವರ ಜಾತ್ರೆ ನಾಳೆಯಿಂದ

1407
0
SHARE

ವಾಡಿ: ಸುಕ್ಷೇತ್ರ ಹಳಕರ್ಟಿ ಶ್ರೀ ವೀರಭದ್ರೇಶ್ವರ ಜಾತ್ರೆ ನ.23ರಿಂದ ಆರಂಭಗೊಳ್ಳಲಿದ್ದು, ನ.28 ರಂದು ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ. ಜಾತ್ರೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀ ಮುನೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಜನೆ, ಕೀರ್ತನೆ ಹಾಗೂ ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ನ.23 ರಂದು ರಾತ್ರಿ 10 ಗಂಟೆಗೆ ವಾದ್ಯಗಳೊಂದಿಗೆ ಅಂಬಲಿ ಬಂಡಿ, ನ.24 ರಂದು ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿ ಉತ್ಸವ, ಸಂಜೆ 6 ಗಂಟೆಗೆ ಚೌಡಮ್ಮನ ಗಂಗಸ್ಥಳ, ನ.25 ರಂದು ರಾತ್ರಿ 11 ಗಂಟೆಗೆ ಪಲ್ಲಕ್ಕಿ ಸೇವೆ. ನ.26 ರಂದು ರಾತ್ರಿ 1 ಗಂಟೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ಕಳ್ಳ ಸರಪಳಿ ಹರಿಯುವ ದೈವಿ ಕಸರತ್ತು ನಡೆಯಲಿದೆ. ನ.27 ರಂದು ಸಂಜೆ 4 ಗಂಟೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ದೈವ ಸರಪಳಿ ಹರಿಯುವಿಕೆ, ಒಗ್ಗಯ್ಯಗಳಿಗೆ ಸನ್ಮಾನ, ರಾತ್ರಿ 11 ಗಂಟೆಗೆ ಪುರವಂತರು ಹಾಗೂ ಭಕ್ತ ಸಮೂಹದಿಂದ ಪುರವಂತಿಕೆ, ಅಗ್ನಿ ಪ್ರವೇಶ ನಡೆಯುವುದು.

ರಥೋತ್ಸವ: ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ನಡೆಯುವ ವಿವಿಧ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ನ. 28 ರಂದು ಸಂಜೆ 6 ಗಂಟೆಗೆ ಶ್ರೀ ಮುನೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಭವ್ಯ ರಥೋತ್ಸವ ಜರುಗಲಿದೆ. ಇದಕ್ಕೂ ಮುನ್ನ ತೇರಿಗೆ ವಿಶೇಷ ಪೂಜೆ, ಚೌಡೇಶ್ವರಿ ದೇವಿಯ ಆಡುವಿಕೆ ನಡೆಯಲಿದೆ.

ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಾಡಿ ಪಟ್ಟಣದಿಂದ ಹಳಕರ್ಟಿ ಗ್ರಾಮದವರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಚಾರಿಟೇಬಲ್‌ ಟ್ರಸ್ಟ್‌ ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ ತಿಳಿಸಿದ್ದಾರೆ.

ನಾಟಕ ಪ್ರದರ್ಶನ: ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಭಕ್ತರ ಮನರಂಜನೆಗಾಗಿ ನ.27, 28 ಹಾಗೂ 29 ರಂದು ಪ್ರತಿದಿನ ರಾತ್ರಿ 10:30 ರಿಂದ ಶ್ರೀ ವೀರಭದ್ರೇಶ್ವರ ನಾಟ್ಯ ಸಂಘ ಹಳಕರ್ಟಿ ಕಲಾವಿದರಿಂದ, ಎಸ್‌.ಎನ್‌. ಕಾಡದ ಮಂಡಲಗಿರಿ ವಿರಚಿತ ಕೃತಿ ಗರತಿ ಹೆಣ್ಣಿಗೆ ಗರ್ವದ ಗಂಡ ಅರ್ಥಾತ್‌ ದ್ವೇಷದ ದಳ್ಳುರಿ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here