ಮಹಾನಗರ: ನಗರದ ಪುರಾತನ ಗೊಲ್ಲರಕೇರಿ ಶ್ರೀ ವೀರ ಹನುಮಂತ ದೇವಸ್ಥಾನವು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಗುರುವಾರ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀರಾಮಚಂದ್ರ ಸೀತಾ ಲಕ್ಷ್ಮಣ ಹನುಮಂತ ದೇವರ ಪಂಚಲೋಹ ಬಿಂಬ ಮತ್ತು ವೀರ ಹನುಮಂತ ದೇವರ ಶಿಲಾಬಿಂಬ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ಬಿಂಬ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಫೆ. 11ರಿಂದಲೇ ವಿವಿಧ ಧಾರ್ಮಿಕ ಶಾಸ್ತ್ರ ವಿಧಿಗಳು ನಿರಂತರವಾಗಿ ನಡೆದಿದ್ದವು. ಗುರುವಾರ ಬೆಳಗ್ಗೆ ತತ್ತ್ವ ಹೋಮದ ಬಳಿಕ,
ಕಾಶೀ ಮಠಾಧೀಶರು ದೇಗುಲಕ್ಕೆ ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಸ್ವಾಮೀಜಿ ಅವರು ದೇವರ ವಿಗ್ರಹ ಪ್ರಾಣಪ್ರತಿಷ್ಠೆಯನ್ನು ಮತ್ತು ದೇವರಿಗೆ ಅಲಂಕಾರ, ಪ್ರಸನ್ನಪೂಜೆ ನುರವೇರಿಸಿದರು. ದೇಗುಲದ ಅರ್ಚಕರಾದ ಸೀತಾರಾಮ ಭಟ್ಟ ಮತ್ತು ಕೇಶವ ದಿನೇಶ ಭಟ್ಟ ಕುಟುಂಬಸ್ಥರು ಸ್ವಾಮೀಜಿಯವರಿಗೆ ಗುರುಪಾದಪೂಜೆ ನಡೆಸಿದರು.
ಇಚ್ಛೆ ಈಡೇರಿಸಲಿ ಈ ಸಂದರ್ಭ ಆಶೀರ್ವಚನ ನೀಡಿದ ಸ್ವಾಮೀಜಿ, ಹನುಮಂತ ದೇವರ ಮತ್ತೂಂದು ಅವತಾರವಾದ ಮಧ್ವಾಚಾಚಾರ್ಯರ ಜಯಂತಿಯಂದೇ ವೀರ ಹನುಮಂತ ದೇವರ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ. ಶ್ರೀ ರಾಮಚಂದ್ರ ಹನುಮಂತ ದೇವರ ಸನ್ನಿಧಿಯಲ್ಲಿ ಭಕ್ತಿ ಪೂರ್ವಕವಾಗಿ ಬೇಡಿದವರಿಗೆ, ಅವರ ಇಚ್ಛೆಗಳನ್ನು ಭಗವಂತನು ಈಡೇರಿಸಲಿ ಪ್ರಾರ್ಥಿಸಿದರು.
ಶ್ರೀ ಮಹಾಮ್ಮಾಯಿ ದೇಗುಲದ ವೇದಮೂರ್ತಿ ವಿಟ್ಠಲ ಭಟ್ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ದೇಗುಲದ ಮತ್ತು ಕುಟುಂಬದ ಪರಂಪರೆಯ ಬಗ್ಗೆ ಹಾಗೂ ಕಾಶೀ ಮಠದ ನಡುವಿನ ಅವಿಚ್ಛಿನ ಸಂಬಂಧದ ಬಗ್ಗೆ ವಿವರಿಸಿದರು. ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ ಉಪೇಂದ್ರ ಭಟ್ ದೇವರ ಭಜನೆಯನ್ನು ಹಾಡಿದರು. ಮಧ್ಯಾಹ್ನ ಮಹಾಪೂಜೆ ನಡೆಯಿತು.
ಸುಮಾರು 700ಕ್ಕೂ ಹೆಚ್ಚಿನ ವರ್ಷದ ಇತಿಹಾಸವಿರುವ ವೇ| ಮೂ| ದಿವಂಗತ ಮಂಜೇಶ್ವರ ಕೇಶವ ಭಟ್ ಅವರು ನಿರ್ಮಿಸಿರುವ ಹಾಗೂ ಪ್ರಸಕ್ತ ಮಂಜೇಶ್ವರ ಸೀತಾರಾಮ ನರಸಿಂಹ ಭಟ್, ಮಂಜೇಶ್ವರ ಕೇಶವ ದಿನೇಶ್ ಭಟ್ ಅವರು ವಂಶ ಪಾರಂಪರ್ಯಗತವಾಗಿ ಆರಾಧಿಸಿಕೊಂಡು ಬರುತ್ತಿರುವ ದೇವಸ್ಥಾನ ಇದಾಗಿದೆ.