ಬಂಟ್ವಾಳ : ಐದು ಗ್ರಾಮಗಳ ಸಹಸ್ರಾರು ಸಂಖ್ಯೆಯ ಶ್ರೀರಾಮಭಕ್ತರ ನೆರವು, ಒಂದು ಪ್ರಧಾನ ಯಜ್ಞಕುಂಡ ಸಹಿತ ಹತ್ತು ಕುಂಡಗಳಲ್ಲಿ 432 ಯಜ್ಞ ದೀಕ್ಷಿತರು, 2,400 ಮಂದಿ ನಾಮಜಪ ಸೇವಾಕರ್ತರಿಂದ ಎ. 7ರಂದು ಕಳ್ಳಿಗೆ ಗ್ರಾಮ ಪೆರಿಯೋಡಿಬೀಡು ಬಾಕಿಮಾರು ಗದ್ದೆಯ 3,600 ಚ.ಅ. ವಿಸ್ತಿರ್ಣದ ಯಾಗ ಮಂಟಪದಲ್ಲಿ ಲೋಕ ಕಲ್ಯಾಣ ಉದ್ದೇಶದ ಶ್ರೀರಾಮ ನಾಮ ತಾರಕ ಜಪಯಜ್ಞ ಸಂಪನ್ನಗೊಂಡಿತು.
ಕಳ್ಳಿಗೆ, ಪುದು, ತುಂಬೆ, ಕೊಡ್ಮಾಣ್, ಮೇರ ಮಜಲು ಗ್ರಾಮದ 480 ಮಂದಿ ಶ್ವೇತ ವಸ್ತ್ರಧಾರಿ ತರುಣ ಸ್ವಯಂಸೇವಕರು, 300 ಮಂದಿ ಸಮವಸ್ತ್ರಧಾರಿ ನೋಂದಾಯಿತ ಮಾತೃ ಸ್ವಯಂ ಸೇವಕರ ಸಹಕಾರ ದೊಂದಿಗೆ 1 ಎಕ್ರೆ ಪ್ರದೇಶದ ಸಭಾಂಗಣ ದಲ್ಲಿ ಯಜ್ಞ ಪೂರ್ಣಗೊಂಡಿತು.
ಶಾಸ್ತ್ರಬದ್ಧವಾಗಿ ಶನಿವಾರ ಸಂಜೆ 6.30ಕ್ಕೆ ಗೋನಿವಾಸದೊಂದಿಗೆ, ಮಂಟಪ ಸಂಸ್ಕಾರ, ಅರಣಿ ಮಥನ, ಅಗ್ನಿ ಜನನವಾಗಿ ಎ. 7ರಂದು ಬೆಳಗ್ಗೆ 6.30ಕ್ಕೆ ಯಜ್ಞ
ಆರಂಭಗೊಂಡಿತು. ಹತ್ತು ಕುಂಡಗಳಲ್ಲಿ ಯಾಗ ದೀಕ್ಷಿತರು ಹವಿಸ್ಸು ನೀಡುವ ಮೂಲಕ ಅಗ್ನಿ ಭುಗಿಲೇಳುವ ಮೂಲಕ ದೇವತೆಗಳಿಗೆ, ಧರಣಿದೇವಿಗೆ ಸಮರ್ಪಣೆ ಗೊಂಡಿತು. ಸರಿಯಾಗಿ ಐದು ಗಂಟೆಗಳ ಕಾಲ ನಡೆದ ಹವಿಸ್ಸು ಸಮರ್ಪಣೆಯಲ್ಲಿ ಯಜ್ಞಕುಂಡದ ಎದುರು ಸಹಸ್ರಾರು ಮಂದಿ ರಾಮನಾಮ ತಾರಕ ಮಂತ್ರ ಜಪ ತರ್ಪಣ ಮಾಡುವ ಮೂಲಕ 11.30ಕ್ಕೆ ಪೂರ್ಣಾಹುತಿ ನಡೆಯಿತು.
ಯಜ್ಞದ ಪ್ರಧಾನ ದೀಕ್ಷಿತರಾದ ಪುರೋಹಿತ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಸಂಚಾಲಕ ಜ್ಯೋತಿಗುಡ್ಡೆ ದಾಮೋದರ ನೆತ್ತರಕೆರೆ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಉಮೇಶ್ ರೆಂಜೋಡಿ, ಗೌರವ ಸಲಹೆಗಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಮನೋಹರ ಕಂಜತ್ತೂರು, ನವೀನ್ ಕಲ್ಲಗುಡ್ಡೆ, ಪದ್ಮನಾಭ ಶೆಟ್ಟಿ ಪುಂಚಮೆ, ಸಂತೋಷ್ ನೆತ್ತರೆಕೆರೆ ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು. ಯಜ್ಞ ಪೂರ್ಣಾಹುತಿ ಬಳಿಕ ಧಾರ್ಮಿಕ ಸಭೆ ನಡೆಯಿತು.