ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಅಂಗವಾಗಿ ಬುಧವಾರ ಬೆಳಗ್ಗೆ 9.54ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕುಂಟಾರು ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ ಶ್ರೀ ದೇಗುಲದಲ್ಲಿ ಪ್ರಾರ್ಥನೆ ನಡೆದು ಅನಂತರ ದೇವರ ಬಲಿ ಉತ್ಸವದ ಬಳಿಕ ಧ್ವಜಸ್ಥಂಭ ಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ಮತ್ತು ವಸಂತ ಕೆದಿಲಾಯ ಮತ್ತಿತರರು ವೈದಿಕ ಕಾರ್ಯಕ್ರಮ ನೆರವೇರಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸದಸ್ಯರಾದ ಅರ್ಚಕ ವಸಂತ ಕೆದಿಲಾಯ, ಎನ್. ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ಸಂಜೀವ ನಾಯಕ್ ಕಲ್ಲೇಗ, ನಯನಾ ರೈ, ರೋಹಿಣಿ ಆಚಾರ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್. ಕೆ. ಜಗನ್ನಿವಾಸ
ರಾವ್, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ದೇಗುಲದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಬಾಬ ಮತ್ತಿತರರಿದ್ದರು.
ಹರಿದು ಬಂತು ಹಸುರುಕಾಣಿಕೆ ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನಕಾಯಿ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವಸ್ತುಗಳನ್ನು ಬುಧವಾರ ಬೆಳಗ್ಗೆಯಿಂದಲೇ ದೇಗುಲಕ್ಕೆ ತಂದೊ ಪ್ಪಿಸುತ್ತಿದ್ದಾರೆ. ಸುವಸ್ತುಗಳನ್ನು ಧ್ವಜ ಸ್ತಂಭದ ಕಟ್ಟೆಗೆ ಸುತ್ತಲೂ ಕಟ್ಟಲಾಗುತ್ತದೆ. ನಿರಂತರ ಅನ್ನದಾನದಲ್ಲಿ ದಿನಂಪ್ರತಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ.
ಇಂದು ಪೇಟೆ ಸವಾರಿ ಜಾತ್ರೆಯ ಅಂಗವಾಗಿ ಎ. 11ರ ಬೆಳಗ್ಗೆ ಬಲಿ ಉತ್ಸವ, ರಾತ್ರಿ ಉತ್ಸವದ ಬಳಿಕ ಶ್ರೀ ದೇವರ ಪೇಟೆ ಸವಾರಿಯು ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟುಗಳಲ್ಲಿ
ನಡೆಯಲಿದೆ.
ಎ. 15: ವಿಷು ಕಣಿ ಧ್ವಜಾರೋಹಣದ ಅನಂತರ ಪ್ರತಿ ದಿನ ದೇಗುಲದಲ್ಲಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು, ದೇವರ ಪೇಟೆ ಸವಾರಿ ನಡೆಯಲಿದೆ. ಎ. 15ರಂದು
ಶ್ರೀ ದೇಗುಲದಲ್ಲಿ ವಿಷು ಕಣಿ ಉತ್ಸವ ವಿಶೇಷವಾಗಿ ನಡೆದು ಅಂದು ರಾತ್ರಿ ದೇಗುಲದಲ್ಲಿ ಚಂದ್ರಮಂಡಲ ರಥೋತ್ಸವ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.