ನಗರ: ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಬಳಿಯ ಶ್ರಿ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರದಂದು ಶ್ರೀ ಲಕ್ಷ್ಮೀದೇವಿ ಅಮ್ಮನವರ ವರ್ಷಾವಧಿ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು.
ಬೆಳಗ್ಗೆ ಗಣಪತಿ ಹೋಮ, ಮಹಾಪೂಜೆ ನಡೆದು ಪಾಷಾಣ ಮೂರ್ತಿಗೆ ತಂಬಿಲ, ನಾಗದೇವರಿಗೆ ತಂಬಿಲ, ಗುಳಿಗನಿಗೆ ತಂಬಿಲ ಸೇವೆಯು ಕಟ್ಟು ಕಟ್ಟಲೆಯಂತೆ ನೆರವೇರಿತು. ಬಳಿಕ ಕಲಾವಿದರು ಮೂಡಾಯೂರು ಚಂದ್ರಶೇಖರ್ ಮತ್ತು ಬಳಗದವರಿಂದ ಸ್ಯಾಕ್ಸೋ´ೋನ್ ವಾದನ, ಮಹಾಪೂಜೆ, ದೇವಿ ದರ್ಶನ ನಡೆಯಿತು. ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯ, ಭಕ್ತರಿಗೆ ಪ್ರಸಾದ ವಿತರಣೆ ನಡೆಸಿದರು.
ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸೇವೆ ನಡೆಯಿತು. ಸ್ಥಳೀಯ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು. ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು. ವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರದ ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀ ಪ್ರಸಾದ್ ಬೆಟ್ಟ ನಿರ್ವಹಣೆ ಮಾಡಿದರು.
ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ ವಿನಾಯಕ ಸುಗಮ ಸಂಗೀತ ಶಾಲೆಯ ವತಿಯಿಂದ ಭಜನ ಕಾರ್ಯಕ್ರಮ ನೆರವೇರಿತು. ರಾತ್ರಿ 8.30ರಿಂದ ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ ನಡೆಯಿತು. ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ‘ಬೊಳ್ಳಿದ ಬೊಲುಗುಡೆ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.