ಬೆಳ್ತಂಗಡಿ : ವಿನೂತನ ಬೆದರು ಬೊಂಬೆಯೊಂದು ಧರ್ಮಸ್ಥಳದ ಲಕ್ಷದೀ ಪೋತ್ಸವ ವಸ್ತುಪ್ರದರ್ಶನದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಈ ಬೆದರು ಬೊಂಬೆ ಹೊಲಗದ್ದೆಗಳಲ್ಲಿ ಕಾಣಿಸುವಂತಹ ಮಾದರಿಯದ್ದಲ್ಲ. ಬದಲಾಗಿ ಇದು ಸ್ವಯಂಚಾಲಿತ ಯಾಂತ್ರಿ ಕತೆಯನ್ನು ಆಧರಿಸಿದೆ. ಪ್ರಾಣಿಗಳು ಹತ್ತಿರ ಬಂದ ತತ್ಕ್ಷಣವೇ ಇದು ಆ ಕ್ಷಣಕ್ಕೆ ಕಾರ್ಯೋನ್ಮುಖಗೊಳ್ಳುತ್ತದೆ. ಹಕ್ಕಿಗಳು ಹತ್ತಿರ ಸುಳಿದರೆ ಮನುಷ್ಯನ ರೀತಿಯಲ್ಲೇ ಪ್ರತಿಕ್ರಿಯಿಸುತ್ತದೆ. ಇದರಿಂದ ಪ್ರಾಣಿ-ಪಕ್ಷಿಗಳು ಹೊಲದಿಂದ ದೂರ ಓಡುತ್ತವೆ.
ಸೆನ್ಸರ್ ಅಳವಡಿಕೆ ವೇಣೂರಿನ ಎಸ್ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕಿರಿಯ ತರಬೇತಿ ಅಧಿಕಾರಿ ಸತೀಶ್ ಅವರ ಮಾರ್ಗದರ್ಶನದಲ್ಲಿ ರೂಪಿಸಿದ
ಈ ಸ್ವಯಂಚಾಲಿತ ಬೆದರು ಬೊಂಬೆಗೆ ಸೆನ್ಸರ್ ಅಳವಡಿಕೆಯಾಗಿದೆ. ಹತ್ತಿರ ಸುಳಿಯುವ ಪ್ರಾಣಿಗಳನ್ನು ಹೊಲದಾಚೆಗೆ ಓಡಿಸುವ ರೀತಿಯಲ್ಲಿಯೇ ಇದು ವಿನ್ಯಾಸ
ಗೊಂಡಿದೆ. ಶಬ್ದ ಹೊರಡಿಸುವುದರ ಮೂಲಕ ಇದು ರೈತನಿಗೆ ನೆರವಾಗುತ್ತದೆ.
ರೈತರು ಕೃಷಿ ಕೆಲಸದಲ್ಲಿ ಬಳಸುವ ಸಾಂಪ್ರದಾಯಿಕವಾದ ಬೆದರು ಬೊಂಬೆಯನ್ನೇ ಮಾದರಿಯನ್ನಾಗಿಸಿಕೊಂಡು ಈ ಬೆದರು ಬೊಂಬೆಯನ್ನು ಸಿದ್ಧಪಡಿಸಲಾಗಿದೆ. ಕಾಡು ಪ್ರಾಣಿಗಳು ಹಂದಿ, ಜಿಂಕೆ, ಆನೆ, ಮನುಷ್ಯರನ್ನು ಸೆನ್ಸರ್ ಮೂಲಕ ಗುರುತಿಸುವ ಈ ಯಂತ್ರದಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ಪರಿಸರ ಸ್ನೇಹಿ ವಿನ್ಯಾಸದ ಇದು, ಪ್ರಾಣಿಗಳನ್ನು ಬೆದರಿಸಿ ಓಡಿಸುತ್ತದಷ್ಟೆ. ಗ್ರಾಮೀಣ ರೊಬೊಟ್ ಎಂದೇ ಕರೆಯಲ್ಪಡುವ ಈ ಯಂತ್ರದ ವಿನ್ಯಾಸ ವಿಶಿಷ್ಟವಾದುದು. ಒಂದು ಮೋಟಾರು ಹೊಂದಿದ್ದು, ಇದು ವಿದ್ಯುತ್ ಹಾಗೂ ಸೌರಶಕ್ತಿ ಮೂಲದಿಂದಾಗಿ ಕಾರ್ಯ ನಿರ್ವಹಿಸುತ್ತದೆ. ಮನುಷ್ಯನಂತೆ ಎರಡು ಕೈ ಮತ್ತು ಕಾಲು ಹೊಂದಿದ್ದು, ಪಾದದಿಂದ ನಾಲ್ಕು ಮೀಟರ್ ಮೇಲೆ ಬೆಳಕಿನ ರೂಪದಲ್ಲಿ ಸೆನ್ಸರ್ ಜೋಡಣೆ ಮಾಡ ಞಲಾಗಿದೆ. ಯಾವುದೇ ಪ್ರಾಣಿಗಳು ಬಂದಾಗ ಬೆಳಕಿನ ಸೆನ್ಸರ್ನಿಂದಾಗಿ ಮೋಟಾರ್ ಸ್ಟಾರ್ಟ್ ಆಗಿ ಕೈಗಳ ಸಹಾಯದಿಂದ ಎರಡು ಸ್ಟೀಲ್ ಪ್ಲೇಟ್ ಬಾರಿಸುತ್ತದೆ. ಪರಿಣಾಮವಾಗಿ ಶಬ್ದ ಬರುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಪ್ರಾಣಿಗಳಿಗೆ ಭಯವಾಗಿ ಗದ್ದೆಯ ಹತ್ತಿರ ಬರುವುದಿಲ್ಲ. ಹೊನಕೇರಪ್ಪ ಸಂಶಿ, ಎಸ್ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ