ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಿಜಯದಶಮಿಯ ಪರ್ವಕಾಲದಲ್ಲಿ ಸಂಪ್ರದಾಯದಂತೆ ಕದಿರು ಕಟ್ಟುವ ಹಬ್ಬವನ್ನು ಆಚರಿಸಲಾಯಿತು. ಸೋದೆ ಮಠದಿಂದ ಚಿನ್ನದ ಪಲ್ಲಕಿಯಲ್ಲಿ ಕದಿರಿನ ಮೆರವಣಿಗೆ ಹೊರಟು ಕೃಷ್ಣಮಠಕ್ಕೆ ಗರ್ಭಗುಡಿಯ ಮೂಡು ಬಾಗಿಲಿನಿಂದ ಒಳ ಪ್ರವೇಶಿಸಿತು.
ವರ್ಷದಲ್ಲಿ ಇದೊಂದೇ ದಿನ ಈ ಬಾಗಿಲನ್ನು ತೆರೆಯುವ ಕ್ರಮವಿದೆ. ಅಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಪೂಜೆ ನಡೆಯಿತು.
ಅನಂತರ ಮಠದ ದಿವಾನ್ ವೇದವ್ಯಾಸ ತಂತ್ರಿಗಳವರ ಉಪಸ್ಥಿತಿಯಲ್ಲಿ ಬಡಗು ಮಳಿಗೆಯಲ್ಲಿ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು. ಭಕ್ತರು ಮನೆಗಳಿಗೆ ಕದಿರು ಕೊಂಡೊಯ್ದು ಕದಿರು ಕಟ್ಟಿದರು.