Home ಧಾರ್ಮಿಕ ಸುದ್ದಿ ಶ್ರೀ ಧರ್ಮಸ್ಥಳ: ಇಂದಿನಿಂದ ಪಂಚಮಹಾವೈಭವ

ಶ್ರೀ ಧರ್ಮಸ್ಥಳ: ಇಂದಿನಿಂದ ಪಂಚಮಹಾವೈಭವ

47
0
SHARE

ಬೆಳ್ತಂಗಡಿ : ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಇತಿಹಾಸ ದಲ್ಲೇ ಮೊತ್ತಮೊದಲ ಬಾರಿಗೆ ಬಾಹು ಬಲಿಯ ಜೀವನ- ಚರಿತ್ರೆ ಸಾರುವ ಪಂಚ ಮಹಾವೈಭವ ಫೆ. 11ರಿಂದ ಆರಂಭ ಗೊಳ್ಳಲಿದ್ದು, ಕ್ಷೇತ್ರದಲ್ಲಿ ನಿರ್ಮಾಣಗೊಂಡ ರಾಜಗಾಂಭೀರ್ಯದ ಅಯೋಧ್ಯೆ- ಪೌದನಾಪುರ ನಗರದಲ್ಲಿ ಈ ವೈಭವವು ಅತ್ಯಾಕರ್ಷಕವಾಗಿ ಮೂಡಿಬರಲಿದೆ.

ರಾಜ್ಯದ ವಿವಿಧ ಭಾಗಗಳ 300ಕ್ಕೂ ಅಧಿಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳ ಲಿದ್ದು, ಕಳೆದ ಮೂರು ತಿಂಗಳಿನಿಂದ ಇದಕ್ಕಾಗಿ ನಡೆದ ಸಿದ್ಧತೆಗಳು ವೇದಿಕೆಯಲ್ಲಿ ಸಾಕಾರಗೊಳ್ಳಲಿವೆ.

ಹೇಮಾವತಿ ವೀ. ಹೆಗ್ಗಡೆ, ಹೆಗ್ಗಡೆ ಕುಟುಂಬದ ಮಹಿಳಾ ಸದಸ್ಯರ ಮಾರ್ಗ ದರ್ಶನದಲ್ಲಿ ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ, ಬೆಂಗಳೂರಿನ ಅಶೋಕ್‌ ತಂಡ ಇದಕ್ಕೆ ನಿರ್ದೇಶನ ನೀಡಿದೆ. ಬಾಲ ಲೀಲೋತ್ಸವದಲ್ಲಿ 100 ಮಂದಿ ಮಕ್ಕಳು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು ಸಹಿತ ಅಲ್ಲಲ್ಲಿ ಇದರ ರಿಹರ್ಸಲ್‌ ನಡೆದಿದ್ದು, ಉಡುಪಿಯ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್‌ ಮಾಡಲಾಗಿದೆ. ಉಜಿರೆ ಕಾಲೇಜಿನ ವಿದ್ಯಾರ್ಥಿಗಳು, ಕ್ಷೇತ್ರದ ಸಿಬಂದಿ ಸಹಿತ ರಾಜ್ಯದ ವಿವಿಧ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಎಲ್ಲ ಕಲಾವಿದರು ಇದಕ್ಕಾಗಿ ಅವಿರತ ಶ್ರಮಿಸಿದ್ದಾರೆ.

ಪಂಚಮಹಾವೈಭವ ಹಾಗೂ ಸಮ ವಸರಣಕ್ಕಾಗಿ ಸಿದ್ಧಗೊಂಡ ಪ್ರತ್ಯೇಕ ಸಭಾಂಗಣಗಳು ಪ್ರಸ್ತುತ ಅಕರ್ಷಣೆಯ ಕೇಂದ್ರಗಳಾಗಿವೆ. ಪಂಚಮಹಾವೈಭವದ ಸಭಾಂಗಣ ಪ್ರವೇಶಿಸುತ್ತಿದ್ದಂತೆ ಯಾವುದೋ ಒಂದು ಅರಮನೆಗೆ ಪ್ರವೇಶಿಸಿದ ಅನುಭವ ನೀಡುತ್ತಿದೆ. ಅಂದರೆ ಇದಕ್ಕೆ ಬಳಸಿದ ಆಲಂಕಾರಿಕ ವಸ್ತುಗಳು ಸಾಂಪ್ರ ದಾಯಿಕ ಅರಮನೆಯ ಲುಕ್‌ನಲ್ಲಿದೆ. ಸಮವಸರಣದ ಮಂಟಪವೂ ವಿಶೇಷ ರೀತಿಯಲ್ಲಿ ನಿರ್ಮಾಣಗೊಂಡಿದೆ.

ವೈಭವದಲ್ಲೇನಿದೆ ?

ಒಟ್ಟು 5 ದಿನಗಳ ಕಾಲ ನಡೆಯಲಿರುವ ಪಂಚಮಹಾವೈಭವದಲ್ಲಿ ಫೆ. 11ರಂದು ಬೆಳಗ್ಗೆ ಶ್ರೀ ಆದಿನಾಥ ಮಹಾರಾಜರ ಆಡಳಿತದಲ್ಲಿ ನವಯುಗ ಆರಂಭದ ಸಂಕೇತಗಳು, ಆದಿನಾಥ ಮಹಾರಾಜರಿಂದ ಪ್ರಜೆಗಳಿಗೆ ಅಸಿ-ಮಸಿ-ಕೃಷಿ ಇತ್ಯಾದಿ ಮಾರ್ಗದರ್ಶನ, ಸಂಜೆ 6ಕ್ಕೆ ಆದಿನಾಥರ ಮಕ್ಕಳ ಬಾಲಲೀಲೋತ್ಸವ, 12ರಂದು ಬೆಳಗ್ಗೆ 9.30ಕ್ಕೆ ಸ್ತ್ರೀ ಶಿಕ್ಷಣ, ಗುರುಗಳಿಂದ ಅಕ್ಷರಾಭ್ಯಾಸ, ವ್ರತ ಸ್ವೀಕಾರ ಕಾರ್ಯಕ್ರಮ, 13ರಂದು ಬೆಳಗ್ಗೆ 9.30ಕ್ಕೆ ಚಕ್ರರತ್ನ ಉದಯಿಸುವುದು, ದಿಗ್ವಿಜಯದ ಮೆರ ವಣಿಗೆ, ಅಪರಾಹ್ನ 4ಕ್ಕೆ ಅಯೋಧ್ಯೆಗೆ ವಿಜಯೀ ಭರತೇಶನ ಮರು ಮೆರವಣಿಗೆ, 14ರಂದು ಬೆಳಗ್ಗೆ 9.30ಕ್ಕೆ ಭರತಚಕ್ರಿಗೆ ಶರಣಾಗುವಂತೆ ಮಂತ್ರಿಯ ಮೂಲಕ ಬಾಹುಬಲಿಗೆ ಸಂದೇಶ ಕಳುಹಿಸುವುದು, ಸಂಜೆ 5ಕ್ಕೆ ಧರ್ಮಯುದ್ಧದ ಸನ್ನಿವೇಶಗಳು, ಬಾಹುಬಲಿಯ ತ್ಯಾಗ, ತಪಸ್ಸು, 15ರಂದು ಬೆಳಗ್ಗೆ 9.30ಕ್ಕೆ ಭಗವಾನ್‌ ಶ್ರೀ ಆದಿನಾಥ ತೀರ್ಥಂಕರರ ಸಮವಸರಣ ದರ್ಶನ, ಭರತಾಗಮನ ಶಂಕೆ ನಿವಾರಣೆ, ಸಂಜೆ ಕೇವಲ ಜ್ಞಾನ ಪ್ರದರ್ಶನಗೊಳ್ಳಲಿದ್ದು, 16ರಿಂದ ಮಸ್ತಕಾಭಿಷೇಕ ನಡೆಯಲಿದೆ.

ಪಂಚಮಹಾವೈಭವದಲ್ಲಿ ಫೆ. 13ರಂದು ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕ ಐತಿಹಾಸಿಕ ದಿಗ್ವಿಜಯ ಯಾತ್ರೆ ನಡೆಯಲಿದೆ. ಬೆಳಗ್ಗೆ ಧರ್ಮಸ್ಥಳದಿಂದ ಶಾಂತಿವನಕ್ಕೆ ಹಾಗೂ ಸಂಜೆ ಶಾಂತಿವನದಿಂದ ಧರ್ಮಸ್ಥಳಕ್ಕೆ ಮೆರವಣಿಗೆ ಇರುತ್ತದೆ. ಈ ಮೆರವಣಿಗೆಯಲ್ಲಿ ದೇಶ-ವಿದೇಶಗಳ ತಂಡಗಳ ಜತೆಗೆ ಸ್ಥಳೀಯ ತಂಡಗಳು ಪಾಲ್ಗೊಳ್ಳಲಿದ್ದು, ಒಟ್ಟು 3 ಸಾವಿರಕ್ಕೂ ಹೆಚ್ಚು ಕಲಾವಿದರು ಇರುತ್ತಾರೆ.

ಸತೀಶ್‌ ಇರಾ

LEAVE A REPLY

Please enter your comment!
Please enter your name here