Home ನಂಬಿಕೆ ಸುತ್ತಮುತ್ತ ಸೌರಮಾನ ಯುಗಾದಿ; ವಿಷುಕಣಿ ನೋಡುವುದು

ಸೌರಮಾನ ಯುಗಾದಿ; ವಿಷುಕಣಿ ನೋಡುವುದು

2724
0
SHARE
       ಸೂರ್ಯನು ಮೀನರಾಶಿಯಿಂದ ಮೇಷರಾಶಿಗೆ ಪ್ರವೇಶ ಮಾಡುವ ದಿನವನ್ನು ಸೌರಮಾನ ಯುಗಾದಿ ಎಂದು ಆಚರಿಸಲಾಗುತ್ತದೆ. ಇದೂ ಸಹ ಹೊಸವರ್ಷದ ಸಂಭ್ರಮದ ಆಚರಣೆ. ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ “ವಿಷುಕಣಿ” ನೋಡುವ ಸಂಪ್ರದಾಯ ಪ್ರಸಿದ್ಧವಾದುದಾಗಿದೆ. ಇದೊಂದು ಸುವಸ್ತುಗಳನ್ನು ನೋಡುವ ಆಚರಣೆ. ವಿಷು ಹಬ್ಬದ ಮುನ್ನಾ ದಿನ ದೇವರಕೋಣೆಯಲ್ಲಿ ಪಂಚಾಂಗ, ಹೂವು, ಹಣ್ಣು, ಹಸಿರು ತರಕಾರಿಗಳು, ಚಿನ್ನ, ಹಣ, ಅಕ್ಕಿ, ತೆಂಗಿನಕಾಯಿ, ಅರಸಿನ ಕುಂಕುಮ ತಾಳೆಗರಿಯ ಸಂಗ್ರಹ, ಪುಸ್ತಕಗಳು ಮೊದಲಾದ ಮಂಗಲದ್ರವ್ಯಗಳನ್ನು ದೇವರ ಮುಂದಿಟ್ಟು ಮಲಗುತ್ತಾರೆ.
ನೂತನ ವರ್ಷದ ಮೊದಲ ದಿನ ಎದ್ದವರೇ ಕಣ್ಣು ತೆರೆಯದೇ ನೇರವಾಗಿ ದೇವರಕೋಣೆಗೆ ಬಂದು ಆ ಎಲ್ಲ ಸುವಸ್ತುಗಳ ಇದಿರು ನಿಂತು ಕಣ್ಣು ತೆರೆಯುತ್ತಾರೆ. ಇದರಿಂದ ಹೊಸವರ್ಷದ ಮೊದಲ ದಿನ ಮೊದಲ ನೋಟ ಸುವಸ್ತುಗಳಿಂದಲೇ ಆರಂಭವಾಗುತ್ತದೆ. ಈ ಹೊಸವರ್ಷ ಸುಖಕರವಾಗಿರಲಿ ಮತ್ತು ಯಾವುದಕ್ಕೂ ಕೊರತೆಯಿಲ್ಲದೆ ಸಮೃದ್ಧವಾದ ಜೀವನ ನಮ್ಮದಾಗಲಿ ಎಂಬ ಆಶಯ ಇದರಲ್ಲಿದೆ.
       ಈ ಸುವಸ್ತುಗಳಿಗೂ ಮಾನವನ ಜೀವನಕ್ಕೂ ನೇರವಾದ ಸಂಬಂಧವಿದೆ. ಮನುಷ್ಯ ಪರಾವಲಂಬಿ ಜೀವಿ. ಹಾಗಾಗಿ ಪ್ರಕೃತಿಯಲ್ಲಿನ ಪ್ರತಿ ಬದಲಾವಣೆಯನ್ನು ಮಾನವನು ಅವಲಂಬಿಸಿಯೇ ಬದುಕುತ್ತಾನೆ; ಉಸಿರಾಡುತ್ತಾನೆ. ಪ್ರಕೃತಿ ಮತ್ತು ಈ ಪ್ರಕೃತಿಯಲ್ಲಿ ದೊರೆಯುವ ವಸ್ತುಗಳೆಲ್ಲವೂ ದೇವರೇ. ಇಲ್ಲಿ ಕಣಿ ನೋಡುವ ಸಂಪ್ರದಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರ ಅರಿವು ನಮಗಾಗುತ್ತದೆ. ಇಡೀ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವರ್ಷದ ಮೊದಲ ನೋಟ ಅಂದರೆ  ಕಣ್ಣಿನ ರೆಪ್ಪೆ ಬಿಚ್ಚಿದಾಕ್ಷಣವೇ ನೋಡುವ ಮೂಲಕ ಅದಕ್ಕೆ ವಂದಿಸುವ, ಅವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವ ಮತ್ತು ಉಳಿಸಿ ಬೆಳೆಸುವ ಮುಂದಾಲೋಚನೆಯನ್ನು ಜಾಗ್ರತವಾಗಿರಿಸುವ ಅಂಶ ಇಲ್ಲಿ ಅಡಕವಾಗಿದೆ.
ಅಕ್ಕಿ ಮತ್ತು ತರಕಾರಿ ನಮ್ಮ ದೇಹಕ್ಕೆ ಬೇಕಾಗುವ ಆಹಾರ ಅಂದರೆ ಶಕ್ತಿಯ ಸಂಕೇತವಾಗಿದೆ. ಹೂವು ಹಣ್ಣು ಕಾಯಿ ಇದು ನಮ್ಮ ಸಮರ್ಪಣಾ ಮನೋಭಾವದ ಸಂಕೇತ. ಇಲ್ಲಿ ಈ ವರ್ಷ ನನ್ನ ಜೀವನವನ್ನು ಒಳ್ಳೆಯ ಕಾರ್ಯಗಳಿಗೆ ಸಮರ್ಪಿಸುತ್ತೇನೆ ಎಂಬ ಸಂಕಲ್ಪ ಮಾಡಿಕೊಳ್ಳಬೇಕು. ಪುಸ್ತಕ ಅಂದರೆ ಬುದ್ಧಿಶಕ್ತಿಯ ಸಂಕೇತ. ಉತ್ತಮವಾದ ಜ್ಞಾನವನ್ನು ಹೊಂದುತ್ತ, ಅವನ್ನು ಇತರರಿಗೂ ಹಂಚುತ್ತ ಸುಜ್ಞಾನದಿಂದ ಬದುಕುತ್ತೇನೆಂಬ ನಿರ್ಧಾರ ಮಾಡಬೇಕು. ಹಣ ಮತ್ತು ಚಿನ್ನ ಸಂಪತ್ತಿನ ಸಂಕೇತ.
ತನ್ನಲ್ಲಿರುವ ಸಂಪತ್ತು ಅನಾಚಾರಗಳಿಗೆ ಬಳಕೆಯಾಗದಂತೆ ಉಪಯೋಗಿಸುವ ತೀರ್ಮಾನವನ್ನು ಮಾಡಬೇಕು. ಇನ್ನು ಅರಿಸಿನ ಕುಂಕುಮ ಶುಭದ ಸಂಕೇತ. ಮಂಗಳಕರವಾದ ಕಾರ್ಯಗಳಲ್ಲಿ ತೊಡಗುತ್ತ ತನ್ನ ಮನೆ ಸಮಾಜ ರಾಜ್ಯ ದೇಶ ಹಾಗೂ ಇಡೀ ವಿಶ್ವವೇ ಶುಭಕರವಾದ ವಾತಾವರಣದಲ್ಲಿ ಬಾಳಲು ನೆರವಾಗುತ್ತೇನೆಂಬ ಸಂಕಲ್ಪ ಮಾಡಬೇಕಿದೆ.
    ದೇವರೆಂಬುದು ಧನಾತ್ಮಕ ಚಿಂತನೆಗಳ ಮುನ್ನುಡಿ. ಈ ಹಬ್ಬಹರಿದಿನಗಳು ಮನುಷ್ಯನಿಗೆ ಸುಗುಣವಂತನಾಗಿ ಬಾಳಲು ಇರುವ ಮಾರ್ಗವನ್ನು ತೋರಿಸುತ್ತವೆ. ಹಬ್ಬವೆಂಬುದು ಕೇವಲ ಮೋಜು ಮಸ್ತಿಗಳಿಗಷ್ಟೇ ಸೀಮಿತವಾಗಿರದೆ ಅದರ ಉದ್ದೇಶವನ್ನು ಅರಿಯುತ್ತ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕಾದುದು ಇವತ್ತಿನ ಜಗತ್ತಿನಲ್ಲಿ ತೀರಾ ಅಗತ್ಯವಾದುದಾಗಿದೆ. ತಾಂತ್ರಿಕವಾಗಿ ಬೆಳೆಯುತ್ತಲೇ ಇರುವ ನಮ್ಮ ಜೀವನಕ್ರಮ ಮತ್ತು ಮನಸ್ಸು ಯಾಂತ್ರಿಕವಾಗಿ ಕಾರ್ಯನಿರ್ವಹಿಸುವಂತಾಗಬಾರದು. ಮಾನವೀಯ ಅಂಶಗಳು ಇಲ್ಲವಾದಾಗ, ಸಂಪತ್ತಿನ ಅಹಂಕಾರದ ಹಾರಾಟ ಹೆಚ್ಚಿದಾಗ ವಿಶ್ವದ ಶಾಂತಿ ಕೆಡುತ್ತದೆ. ಮಾನವನ ಶಕ್ತಿ ಎಂಬುದು ಕೇವಲ ದೇಹದ್ದಲ್ಲ. ಅದು ಸೂಕ್ಷ್ಮವಾದ ಮನಸ್ಸಿನ ಶಕ್ತಿ. ಮನಸ್ಸು ಒಪ್ಪದೆ ನಮ್ಮ ದೇಹ ಹುಲ್ಲುಕಡ್ಡಿಯನ್ನೂ ಎತ್ತಿಡದು. ಅಂತಹ ಮನಸ್ಸು ಪರಿಶುದ್ಧವಾಗಿದ್ದಾಗ ನಮ್ಮ ಶಕ್ತಿ ಸತ್ಕಾರ್ಯಕ್ಕೆ ಬಳಕೆಯಾಗಿ ಎಲ್ಲರಿಗೂ ಸನ್ಮಂಗಲ ಉಂಟಾಗುತ್ತದೆ. ಒಳಿತಿಗೂ ಕೆಡುಕಿಗೂ ಕಾರಣವಾಗಬಲ್ಲ ನಮ್ಮ  ಮನಸ್ಸನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಹಬ್ಬಗಳು ನಮಗೆ ಹೇಳಿಕೊಡುತ್ತವೆ.
ಶುಭಾಶಯ: ಹಬ್ಬದ ಹಾರೈಕೆಗಳೊಂದಿಗೆ ಪರಿಶುದ್ಧವಾದ ಮನಸ್ಸು ಪರಸ್ಪರ ಅವಲಂಬಿತವಾಗಿ, ಅರಿತು ಬಾಳಿದರೆ ವಸುದೈವ ಕುಟುಂಬಕಂ ಎಂಬ ಮಾತು ಸತ್ಯವಾಗುವುದರಲ್ಲಿ ಸಂದೇಹವಿಲ್ಲ.
   ||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
  ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here