ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸ ವದ ದಂಗವಾಗಿ ರಥಬೀದಿಯಲ್ಲಿ ರವಿವಾರ ನಡೆದ ದೇಸೀ ಗೋತಳಿಗಳ ಸಮ್ಮೇಳನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಚಿನ್ನದ ರಥದಲ್ಲಿ ಗೋಪಾಲಕೃಷ್ಣೋತ್ಸವ ನಡೆಯಿತು. ಸಂಜೆ 6 ಗಂಟೆಗೆ ಭಜನ ಮಂಡಳಿಗಳ ಸುಮಾರು 100 ಸದಸ್ಯೆಯರ ಕೊಳಲು ವಾದನ ದೊಂದಿಗೆ ಉತ್ಸವ ಆರಂಭಗೊಂಡಿತು.
ಕಾಣಿಯೂರು ಮಠದಿಂದ ಪಲಿಮಾರು ಮಠದ ವರೆಗೆ ಸುಮಾರು ಮುಕ್ಕಾಲಂಶ ರಥಬೀದಿಯ ಇಕ್ಕೆಲ ಗಳಲ್ಲಿ ನಿರ್ಮಿಸಿದ ತಾತ್ಕಾಲಿಕ ಹಟ್ಟಿಯಲ್ಲಿ (ಶಾಮಿಯಾನ) ಕಟ್ಟಿದ ಸುಮಾರು 200 ಗೋವುಗಳ ನಡುವೆ ಉತ್ಸವದ ಮೆರವಣಿಗೆ ಸಾಗಿ ಬಂತು. ಮೆರವಣಿಗೆ ಮುಂದಿದ್ದ ಆನೆ ‘ಸುಭದ್ರೆ’ಯ ಹಿಂಭಾಗದಲ್ಲಿದ್ದ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಸುಗಳಿಗೆ ಗೋಗ್ರಾಸ ನೀಡಿದರು. ಪೇಜಾವರ ಕಿರಿಯ, ಕೃಷ್ಣಾಪುರ, ಸೋದೆ, ಕಾಣಿಯೂರು ಅದಮಾರು, ಅದಮಾರು ಕಿರಿಯ, ಪಲಿಮಾರು ಕಿರಿಯ, ಬಾಳೆಗಾರು ಶ್ರೀಗಳು ಪಾಲ್ಗೊಂಡರು.
ಕಾಫಿ=ಕಾಲಕೂಟ ಪೀಯುಷ
ನಮಗೆ ತಿನ್ನಲು ಆಗದ ವಸ್ತುಗಳನ್ನು ಗೋವುಗಳಿಗೆ ನೀಡುತ್ತೇವೆ. ಅವು ನಮಗೆ ರುಚಿಕರವಾದ ಹಾಲು ನೀಡುತ್ತವೆ. ಆದರೆ ನಾವು ಆ ಹಾಲಿಗೆ ಕಾಫಿ ಪುಡಿ ಹಾಕಿ ಕಲುಷಿತ ಮಾಡುತ್ತಿದ್ದೇವೆ. ‘ಕಾ’ ಅಂದರೆ ಕಾಲಕೂಟ ‘ಫಿ’ ಅಂದರೆ ಪೀಯುಷ ಎಂದು ಪೇಜಾವರ ಶ್ರೀಗಳು ವ್ಯಾಖ್ಯಾನಿಸಿದರು.
ರಥಬೀದಿಯಲ್ಲಿ ತಾತ್ಕಾಲಿಕ ಹಟ್ಟಿ
ಸುಮಾರು 15 ತಳಿಗಳಿಗೆ ಸಂಬಂಧಿಸಿದ ಸುಮಾರು 200 ಗೋವುಗಳನ್ನು ರಥಬೀದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಹಟ್ಟಿಯಲ್ಲಿ (ಶಾಮಿಯಾನ) ಪ್ರದರ್ಶಿಸಲಾಯಿತು. ಇವುಗಳಲ್ಲಿ ಅತಿ ಗಿಡ್ಡದ ತಳಿಗಳಿಂದ ಹಿಡಿದು ಬೃಹದಾಕಾರದ ಗೋವುಗಳಿದ್ದವು. ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಗೋ ಉತ್ಪನ್ನಗಳ ಮಳಿಗೆಗಳೂ ತೆರೆದಿದ್ದವು.