ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ಡಿ.13ರಂದು ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ವೇ|ಮೂ| ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ಸೂಡ ಶ್ರೀಶ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಡಿ. 16ರಂದು ಶ್ರೀ ಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.
ಇಲ್ಲಿ ವಾಸುಕೀ ಸುಬ್ರಹ್ಮಣ್ಯನಿಗೆ ತುಲಾಭಾರ, ರಂಗಪೂಜೆ, ನಾಗ ಸಮಾರಾಧನೆ, ಮಡೆಸ್ನಾನ, ಪೊಡಿ ಮಡೆಸ್ನಾನ ಮುಂತಾದ ಹರಕೆ ತೀರಿಸಿ ಭಕ್ತರು ಸಂತಾನ ಭಾಗ್ಯ,ಆರೋಗ್ಯ ಭಾಗ್ಯ, ವಿದ್ಯಾಬುದ್ಧಿ ಸರ್ವ ಸುಖಗಳನ್ನೂ ಅರ್ಜಿಸಿಕೊಂಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯನಿಗೆ ಹೇಳಿದ ಹರಕೆಯನ್ನು ಇಲ್ಲಿ ಸಲ್ಲಿಸಬಹುದಾಗಿದೆ. ಆದರೆ ಸೂಡ ಸುಬ್ರಹ್ಮಣ್ಯನಿಗೆ ಹೇಳಿದ ಹರಕೆಯನ್ನು ಕುಕ್ಕೆಯಲ್ಲಿ ಸಲ್ಲಿಸಲಾಗದು ಎಂಬುದು ವಾಡಿಕೆ. ಪುರಾಣಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ವರ್ಷಂಪ್ರತಿ ಷಷ್ಠಿ ಜಾತ್ರಾ ಮಹೋತ್ಸವವು ಜರಗುತ್ತಿದ್ದು ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಧಾರ್ಮಿಕ ಕಾರ್ಯಕ್ರಮ
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಿ. 6ರಿಂದ ಆರಂಭಗೊಂಡಿದ್ದು ಡಿ. 12ರಂದು ಧ್ವಜಾರೋಹಣ, ಬಲಿ ಮಹಾಪೂಜೆ, ಡಿ. 13ರಂದು ಕಲಶಾಭಿಷೇಕ, ಷಷ್ಠಿ ಮಹೊತ್ಸವ , ರಥೋತ್ಸವ, ರಾತ್ರಿ ರಥೋತ್ಸವ, ಭೂತಬಲಿ, ಡಿ. 16 ರಂದು ಮಹಾಪೂಜೆ, ರಥಾರೋಹಣ, ಸಂತರ್ಪಣೆ, ರಾತ್ರಿ ಮಹಾರಥೋತ್ಸವ, ಡಿ. 17ರಂದು ರಾತ್ರಿ ಜುಮಾದಿ ದೈವದ ನೇಮ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ತಿಳಿಸಿದ್ದಾರೆ.