Home ಧಾರ್ಮಿಕ ಸುದ್ದಿ “ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣದಿಂದ ಸಾಮಾಜಿಕ ಕ್ಷೇಮ’

“ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣದಿಂದ ಸಾಮಾಜಿಕ ಕ್ಷೇಮ’

1675
0
SHARE

ಮಹಾನಗರ: ಸಮಸ್ತ ಸಮಾಜಕ್ಕೂ ಕ್ಷೇಮ ಉಂಟಾಗಬೇಕಾದರೆ ಸಾಮೂಹಿಕವಾಗಿ ಶ್ರೀ ವಿಷ್ಣು ಸಹಸ್ರನಾಮ ಪಠಣದಂತಹ ದೇವತಾ ಸೇವೆಯನ್ನು ಮಾಡಿದರೆ ಉತ್ತಮ. ಅದರಲ್ಲೂ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಅಂತಹ ಸೇವೆಗಳು ನಡೆದರೆ ಹೆಚ್ಚಿನ ಫಲ ದೊರೆತು ನಮ್ಮ ಜೀವನ ಸಾರ್ಥಕ ಎಂದು ಆಡಳಿತ ಮೊಕ್ತೇಸರ ಕೆ.ಸಿ.ನಾೖಕ್‌ ಹೇಳಿದರು.

ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುಂದಾಪುರದ ಡಾ| ಎಸ್‌.ಎನ್‌.ಪಡಿಯಾರ್‌ ಅವರ ನಿರ್ದೇಶನದಲ್ಲಿ ಸ್ಥಾಪನೆಯಾದ ಶ್ರೀ ವಿಷ್ಣು ಸಹಸ್ರನಾಮ ಪಠಣ ಆಂದೋಲನ ಸಮಿತಿ, ಪಶ್ಚಿಮ ಕರಾವಳಿ ಹಾಗೂ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಹಯೋಗದಲ್ಲಿ ದಿನಪೂರ್ತಿ ಹಮ್ಮಿ ಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಹನ್ನೆರಡು ಬಾರಿ ಲೋಕ ಕಲ್ಯಾಣಾರ್ಥ ಸಾಮೂಹಿಕವಾಗಿ ಶ್ರೀವಿಷ್ಣು ಸಹಸ್ರನಾಮ ಪಠಣ ಮಾಡಲಾಯಿತು. ಬಳಿಕ ಇಬ್ಬರು ವಿದ್ವಾಂಸರಿಂದ ಸತ್ಸಂಗ ನಡೆಯಿತು.

ವಿದ್ವಾಂಸರಾದ ಡಾ| ಸೋಂದ ಭಾಸ್ಕರ ಭಟ್ಟರು ಶ್ರೀಮದ್ಭಗವದ್ಗೀತೆಯಲ್ಲಿ ಬರುವ ಕರ್ಮ ಯೋಗ- ಜ್ಞಾನಯೋಗದ ಮಹತ್ವದ ಬಗ್ಗೆ ಮಾತನಾಡಿ, “ಕರ್ಮವಿಲ್ಲದೆ ಜ್ಞಾನವಿಲ್ಲ. ಜ್ಞಾನವಿಲ್ಲದೆ ಕರ್ಮವಿಲ್ಲ. ಕರ್ಮ ಜ್ಞಾನಗಳೆರಡೂ ಅನಿವಾರ್ಯ ಹಾಗೂ ಒಂದಕ್ಕೊಂದು ಪೂರಕ. ಜೀವನದ ಗೊಂದಲಗಳನ್ನು ನಿವಾರಿಸಬೇಕಾದರೆ ಇವುಗಳೆರಡರ ಮಹತ್ವವನ್ನು ಮನಗಾಣಬೇಕಾದದ್ದು
ಅನಿವಾರ್ಯ ಎಂದರು.

ವಿದ್ವಾಂಸರಾದ ವೇ| ಮೂ| ನರಸಿಂಹಾಚಾರ್ಯರು ಮಾತನಾಡಿ, ಅತ್ಯಂತ ದುರ್ಲಭವಾದ ಮನುಷ್ಯ ಜನ್ಮದಲ್ಲಿ ಸುಖವನ್ನು ಪ್ರಾಪ್ತಿ ಮಾಡಬೇಕಾದರೆ ಸಮಸ್ತ ಜೀವ ಜಾಲವುಳ್ಳ ವಿಶ್ವವನ್ನೇ ವ್ಯಾಪಿಸಿರುವ ಪರಮೋಚ್ಚ ಭಗವಂತನ ಸಾವಿರಾರು ಗುಣರೂಪಗಳನ್ನು ಕೊಂಡಾಡ ಬೇಕಾದದ್ದು ಅತ್ಯಗತ್ಯ. ಇದರಿಂದ ವಿಶ್ವಕ್ಕೇ ಬರುವ ವಿಪತ್ತುಗಳನ್ನು ನಿವಾರಿಸಲು ಸಾಧ್ಯ. ವಿಷ್ಣು ಸಹಸ್ರನಾಮದ ಒಂದೊಂದು ಅಕ್ಷರಗಳೂ ಮಹತ್ತರವಾದ ಅರ್ಥವನ್ನು ವಿವರಿಸುವಂತಹದು.

ಮನುಷ್ಯ ಶರೀರದ ಸಹಸ್ರ ಸಹಸ್ರ ನರ ನಾಡಿಗಳನ್ನು ಪ್ರಚೋದಿಸುವಂತಹ ವಿಷ್ಣು ಸಹಸ್ರನಾಮದ ಶಕ್ತಿ ಸಕಲ ಕಷ್ಟಗಳನ್ನು ನಿವಾರಿಸಿ ಆತ್ಮಸ್ಥೈರ್ಯವನ್ನು ನೀಡುವಂಥಹದು. ಸಾಮೂಹಿಕವಾಗಿ ಇದನ್ನು ಪಠಿಸಿದರೆ ಅದರ ಶಕ್ತಿ ಸಾವಿರ ಪಟ್ಟು ಹೆಚ್ಚಾಗುವುದು ಎಂದು ತಿಳಿಸಿದರು.

ಪ್ರಕೃತಿ ಸಮತೋಲನ ಸಾಧ್ಯ ಡಾ| ಎಸ್‌.ಎನ್‌. ಪಡಿಯಾರ್‌ ಮಾತನಾಡಿ, ಸಮುದ್ರ ಕೊರೆತ, ಪ್ರಾಕೃತಿಕ ವಿಕೋಪ, ಸಮಾಜ ಎದುರಿಸುತ್ತಿರುವ ದುರಿತ, ಶರೀರದ ಅನಾರೋಗ್ಯ ಇವುಗಳ ನಿವಾರಣೆ ಶ್ರೀವಿಷ್ಣು ಸಹಸ್ರನಾಮ ಪಠಣದಿಂದ ಸಾಧ್ಯ ಎಂಬುದು ವೈಜ್ಞಾನಿಕವಾಗಿಯೂ ನಿರೂಪಿಸಲ್ಪಟ್ಟಿರುವಂಥಹದು. ಹಾಗಾಗಿ ಪ್ರಕೃತಿಯ ಸಮತೋಲನ ಸಾಧಿಸಲು ಋಷಿ ಮುನಿಗಳು ಸಾಧಿಸಿ ತೋರಿಸಿದ ಶ್ರೀ ವಿಷ್ಣು ಸಹಸ್ರನಾಮದ ಪಠಣ ಅತ್ಯಂತ ಪ್ರಸ್ತುತ. ಇಂತಹ ಪಠಣ ಕರಾವಳಿ ಪರ್ಯಂತ ನೂರಾರು ದೇವಾ ಲಯಗಳಲ್ಲಿ ನಡೆಸುವ ಯೋಜನೆಯನ್ನು ಆಂದೋಲನ ಸಮಿತಿ ವತಿಯಿಂದ ಹಮ್ಮಿ ಕೊಳ್ಳಲಾಗಿದೆ ಎಂದರು. ಅರುಣಾ ಪಡಿಯಾರ್‌, ಸಗುಣಾ ನಾೖಕ್‌, ಸುರೇಂದ್ರ ಶೆಣೈ, ಗೋವನಿತಾಶ್ರಯದ ಡಾ| ಪಿ. ಅನಂತಕೃಷ್ಣ ಭಟ್‌, ಉದ್ಯಮಿ ಬಸ್ತಿ ದೇವದಾಸ್‌ ಶೆಣೈ, ನ್ಯಾಯವಾದಿ ಪುರುಷೋತ್ತಮ ಭಟ್‌, ರತ್ನಾಕರ ಕುಳಾಯಿ ಉಪಸ್ಥಿತರಿದ್ದರು. ಪ್ರಕಾಶ್‌ ಇಳಂತಿಲ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣ ಕುಮಾರ್‌ ವಂದಿಸಿದರು.

LEAVE A REPLY

Please enter your comment!
Please enter your name here