ನವರಾತ್ರೆಯ ಶುಭದಿನದ ಐದನೆಯ ದಿನ ಪೂಜಿಸುವ ರೂಪ ಸ್ಕಂದಮಾ ಅಥವಾ ಸ್ಕಂದಮಾತೆ. ಭೂಲೋಕಕ್ಕೂ ಸತ್ಯಲೋಕಗಳ ನಡುವೆ ಇನ್ನೂ ಐದು ಲೋಕಗಳಿವೆ. ಈ ಎಲ್ಲಾ ಲೋಕಗಳನ್ನು ಸೇರಿಸುವ ಒಂದು ಕಿರಣವಿದೆ. ಇದನ್ನು ಸ್ಕಂದರೇಷೆ ಎನ್ನುತ್ತಾರೆ. ಈ ಕಿರಣ ಮತ್ತು ಈ ಏಳೂ ಲೋಕಗಳನ್ನು ನಿಯಂತ್ರಿಸುವವಳೇ ಸ್ಕಂದಮಾತೆ. ಈ ಏಳೂ ಲೋಕಗಳನ್ನು ಪಾರಾಗಿ ಹೋಗಲು ಸಹಾಯಮಾಡುವ ದೇವತೆಯೇ ಈ ಸ್ಕಂದಮಾತೆ. ಸತಿದೇವಿಯೆಂದರೆ ಪಾರ್ವತಿ. ಪಾರ್ವತಿಯು ಷಣ್ಮುಖನ ತಾಯಿ. ಷಣ್ಮುಖನಿಗೆ ಸ್ಕಂದ ಎಂತಲೂ ಕರೆಯುತ್ತಾರೆ. ಈತನ ತಾಯಿಯಾದ ಕಾರಣದಿಂದಲೂ ಸ್ಕಂದಮಾತೆ ಎಂದು ಹೆಸರು ಬಂದಿದೆ.
ಸಿಂಹವನ್ನೇರಿ ಕುಳಿತಿರುವ ಸ್ಕಂದಮಾತೆಯ ಕಾಲಿನ ಮೇಲೆ ಮಗ ಸ್ಕಂದನು ಬಾಲರೂಪದಲ್ಲಿ ಕುಳಿತಿದ್ದಾನೆ. ದೇವಿಯು ಇಲ್ಲಿ ಮಾತೃಸ್ವರೂಪಿಯಾಗಿ ಕಾಣಿಸಿಕೊಂಡಿದ್ದಾಳೆ. ಇವಳನ್ನು ಭಕ್ತಿ-ಶ್ರದ್ಧಾಪೂರ್ವಕವಾಗಿ ಪೂಜಿಸಿದರೆ ತಾಯಿಯ ಮಮತೆಯನ್ನು ನೀಡಿ ಕಷ್ಟವನ್ನೆಲ್ಲ ಪರಿಹರಿಸುವಳು. ಮಂದಸ್ಮಿತೆಯಾದ ಇವಳು ಲೋಕಪಾಲಕಿಯಾಗಿದ್ದಾಳೆ. ಜಗತ್ತಿನ ಎಲ್ಲಾ ಜಂತುಗಳೂ ದೇವಿಯ ಮಕ್ಕಳು. ಎಲ್ಲರೂ ದೇವಿಯ ಮಡಿಲಲ್ಲಿ ಉಳಿದುಕೊಂಡಿದ್ದೇವೆ ಎಂಬುದನ್ನು ಸೂಚಿಸುತ್ತದೆ.
ದೇವಿಯ ಈ ರೂಪವು ಮಕ್ಕಳನ್ನು ಹೇಗೆ ಪೊರೆಯಬೇಕೆಂಬ ಪಾಠವನ್ನು ಹೇಳುತ್ತದೆ. ಘೋರಪ್ರಾಣಿಯಾದ ಸಿಂಹವೇ ಅಲ್ಲಿದ್ದರು ಸ್ಕಂದನಿಗೆ ಭಯವಾಗುತ್ತಿಲ್ಲ. ಇಲ್ಲಿ ಸಿಂಹ ಎಂಬುದು ಬದುಕಿನಲ್ಲಿ ಒದಗಿಬರುವ ಕಷ್ಟಗಳು. ಅವುಗಳಿಗೆ ಹೆದರದಂತೆ ಮಕ್ಕಳನ್ನು ಬೆಳೆಸಬೇಕೆಂಬುದು ಇದರ ಅರ್ಥ. ಅಷ್ಟೇ ಅಲ್ಲದೆ ಕಷ್ಟಗಳು ನಮ್ಮ ಜೊತೆಗೇ ಇರುತ್ತದೆ. ಅವನ್ನು ಮೆಟ್ಟಿನಿಲ್ಲುವಂತಹ ಸಚ್ಚಾರಿತ್ರ್ಯವನ್ನು ಹೊಂದಿದಾಗ ಅವು ನಮ್ಮ ಅಡಿಯಾಳಾಗಿರುತ್ತವೆ. ಅದೇ ನಾವು ದುರ್ಮಾರ್ಗವನ್ನು ಬೆಂಬತ್ತಿ ಹೋದರೆ ಸಿಂಹದಂತಹ ಕಷ್ಟಗಳು ಇದಿರಾಗುವುದು ಖಂಡಿತ. ಸ್ಕಂದಮಾತೆಯ ಕೈಯಲ್ಲಿ ಇಲ್ಲಿ ಯಾವುದೇ ಆಯುಧಗಳಿಲ್ಲ. ಬದಲಾಗಿ ಕಮಲದ ಹೂವನ್ನು ಹಿಡಿದುಕೊಂಡಿದ್ದಾಳೆ. ಇಲ್ಲಿ ಕಮಲವೆಂದರೆ ಕೋಮಲವಾದ ಭಾವ. ಮಗುವಿನ ಎಳೆಯ ಮನಸ್ಸಿಗೆ ಮಧುರವಾದ ಭಾವದಿಂದ ಜಗತ್ತನ್ನು ಅರ್ಥೈಸಬೇಕಾಗುತ್ತದೆ. ಮಗುವಿನ ಮನಸ್ಸು ಹೂವಿನಂತೆ. ಅಲ್ಲೊಂದು ಅಂದವಿದೆ. ಆ ಅಂದಕ್ಕೆ ಚಂದದ ಆಕಾರವನ್ನು ನೀಡಿ ಅರಳುವಂತೆ ಮಾಡಬೇಕಾದದ್ದು ಹಿರಿಯರ ಕರ್ತವ್ಯ ಎಂಬುದು ಇದರ ಒಳಾರ್ಥ.
ಇವಳು ಮಾತೃಸ್ವರೂಪಿ. ಭೂ, ಭುವಃ, ಸ್ವಃ, ಮಹಃ, ಜನಃ, ತಪಃ ,ಮತ್ತು ಸತ್ಯ ಈ ಏಳೂ ಲೋಕಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಈಕೆ ಈ ಎಲ್ಲ ಲೋಕಗಳಿಗೆ ಹೋಗಲು ಅವಕಾಶ ಮಾಡಿಕೊಡುವ ದೇವಿಯೂ ಹೌದು. ಭೂಲೋಕವಾಸಿಗಳಾದ ನಾವು ಈಕೆಯ ಕಣ್ಗಾವಲಿನಲ್ಲಿದ್ದೇವೆ. ಮಕ್ಕಳು ಏನೇ ತಪ್ಪು ಮಾಡಿದರೂ ತಾಯಿಗೆ ತಿಳಿಯುತ್ತದೆ. ಮತ್ತು ಪ್ರತಿಕ್ಷಣವೂ ಮಗುವನ್ನು ಗಮನಿಸುತ್ತಿರುವವಳು ಅವಳು. ಇಲ್ಲಿ ನಾವು ಅರಿಯಬೇಕಾಗಿದ್ದು ಇಷ್ಟು- ನಾವು ಎಲ್ಲಿಯೇ ಹೋದರೂ ಸಹ ನಮ್ಮ ತಾಯಿಯ ಕಣ್ಣೆದುರಿಗೇ ಇದ್ದೇವೆ. ಅವಳು ನೋಡುವುತ್ತಿರುವಾಗ ತಪ್ಪುಗಳನ್ನು ಮಾಡುವುದಾಗಲೀ ಅನಾಚಾರಕ್ಕೆ ಮುಂದಾಗುವುದಾಗಲೀ ಸರಿಯೇನು? ಅವಳು ಕೋಪಸಿಕೊಳ್ಳುವದಿಲ್ಲವೇ? ಹಾಗಾಗಿ ಯಾವುದೇ ದುಷ್ಕ್ರತ್ಯಗಳಿಗೆ ಅವಕಾಶಕೊಡದೆ ನಿಜಮಾರ್ಗದಲ್ಲಿ ಬದುಕುವುದು ಉತ್ತಮ. ಇವನ್ನು ನಾವು ಮೊದಲು ಅನುಸರಿಸಬೇಕು. ನಮ್ಮ ಜ್ಞಾನ ನಮ್ಮನ್ನು ಉತ್ತಮರನ್ನಾಗಿಸಬೇಕೇ ಹೊರತು ದುರ್ಜನರನ್ನಾಗಿ ಅಲ್ಲ.
ಸ್ಕಂದನಿರುವ ಜಾಗದಲ್ಲಿ ಕಂದಂದಿರಾಗಿ ನಾವೆಲ್ಲ ಇದ್ದೇವೆ. ಈ ಐದನೆಯ ದಿನದ ಶುಭದಿನದಿಂದ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಹಾಗೂ ಅವಳ ಕಣ್ಣೆದುರು ಜೀವಿಸುವ ಹುಲುಮಾನವರು ಎಂಬುದನ್ನು ಅರಿತುಕೊಂಡು ನೀತಿಯುತವಾಗಿ ಬದುಕುವ ಪ್ರತಿಜ್ಞೆಯನ್ನು ಕೈಗೊಳ್ಳೋಣ. ಕಷ್ಟವೆಂಬ ಸಿಂಹದ ಬಾಯಿಯೊಳಗೆ ಸಿಲುಕದಂತೆ ಪಾಲಿಸೆಂದು ಸ್ಕಂದಮಾತೆಯಲ್ಲಿ ಬೇಡೋಣ.
ಮುಂದುವರಿಯುವುದು……
|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||
ವಿಷ್ಣು ಭಟ್ಟ, ಹೊಸ್ಮನೆ.