ಕುಂದಾಪುರ: ಹನ್ನೆರಡು ಮಾಸಗಳಲ್ಲಿ ಒಂದೊಂದು ಮಾಸಗಳಿಗೆ ವಿಶಿಷ್ಟವಾದ ಮಹತ್ವವಿದೆ. ಅದರಲ್ಲಿ ಧನುರ್ಮಾಸ ಮಹಾವಿಷ್ಣುವಿಗೆ ಬಹಳ ವಿಶೇಷವಾಗಿದೆ. ಡಿ. 16ರಿಂದ ಧನುರ್ಮಾಸ ಆರಂಭಗೊಂಡಿದ್ದು ಜ. 13ರ ವರೆಗೆ ಇರುತ್ತದೆ. ಜ. 14 ಮಕರ ಸಂಕ್ರಾಂತಿ. ಶುಭ ಕಾರ್ಯಕ್ರಮ ಆರಂಭ. ಈ ಧನುರ್ಮಾಸದ ವಿಶೇಷತೆ ತಿಳಿಯೋಣ.
ಪುರಾಣ ಕಥೆ
ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವರು ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವರು ಹಂಸರೂಪಿ ಬ್ರಹ್ಮದೇವರ ಮೇಲೆ ಒಮ್ಮಿಂದೊಮ್ಮೆಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾರೆ. ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪ ನೀಡುತ್ತಾರೆ. ಸೂರ್ಯದೇವರು ಕಾಂತಿಹೀನರಾಗಿ ತನ್ನ ಪ್ರಕಾಶ ಕಳೆದುಕೊಂಡರು. ಇದರಿಂದ ಇಡೀ ಭೂಮಂಡಲ ಅಲ್ಲೋಲ ಕಲ್ಲೋಲವಾಯಿತು. ಸೂರ್ಯದೇವರಿಲ್ಲದೆ ಋಷಿ-ಮುನಿಗಳಿಗೆ ನಿತ್ಯ-ಪೂಜೆ ಹಾಗೂ ಹೋಮ-ಹವನಗಳಿಗೆ ಬಹಳ ತೊಂದರೆಯಾಗಿ ನಿಲ್ಲಿಸುವಂತಾಯಿತು.
ಆಗ ದೇವಾನುದೇವತೆಗಳು ಹಾಗೂ ಮುನಿವೃಂದದೊಂದಿಗೆ ಬ್ರಹ್ಮದೇವರ ಕುರಿತು ತಪಸ್ಸು ಆಚರಿಸಿದರು. ಇವರ ತಪಸ್ಸಿಗೆ ಬ್ರಹ್ಮದೇವರು ಒಲಿದು ಪ್ರತ್ಯಕ್ಷರಾದರು. ಆಗ ತಪಸ್ಸಿನ ಉದ್ದೇಶ ಏನು ಎಂಬ ಬ್ರಹ್ಮದೇವರ ಪ್ರಶ್ನೆಗೆ ಈಗ ನಡೆಯುತ್ತಿರುವ ಸ್ಥಿತಿ ವಿವರಿಸಿದರು. ಆಗ ಬ್ರಹ್ಮ ದೇವರು ಒಂದು ಪರಿಹಾರ ಸೂಚಿಸುತ್ತಾರೆ. ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ ಎಂಬ ಅಭಯ ಬ್ರಹ್ಮ ದೇವರಿಂದ ಬಂತು.
ಅಂತೆಯೇ ಶ್ರೀ ಸೂರ್ಯದೇವರು ಧನುರ್ಮಾಸದ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ ಶ್ರೀ ಮಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆಯೇ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದರು ಎಂದು ಪುರಾಣದಿಂದ ತಿಳಿದು ಬರುತ್ತದೆ. ಸಾûಾತ್ ಸೂರ್ಯದೇವರೇ ಈ ಧನುರ್ಮಾಸ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದರು.
ಈ ಧನುರ್ಮಾಸ ಆರಂಭ ಸೂರ್ಯದೇವರು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಿ ಒಂದು ತಿಂಗಳ ಕಾಲ ಅಲ್ಲಿರುವಾಗ ಈ ಪರ್ವಕಾಲವನ್ನು ಧನುರ್ಮಾಸವಾಗಿ ಆಚರಿಸುವಂತದ್ದಾಗಿದೆ. ಅಂದರೆ ಜನವರಿ 13ರಂದು ಧನುರ್ಮಾಸ ಮುಗಿದು ಜ. 14ರಿಂದ ಮಕರ ಮಾಸ ಆರಂಭ.
ಶೂನ್ಯಮಾಸ
ಧನುರ್ಮಾಸವನ್ನು ‘ಶೂನ್ಯಮಾಸ’ ಎಂಬು ದಾಗಿ ಶಾಸ್ತ್ರಕಾರರು ಹೇಳಿದ್ದು ಈ ಮಾಸದಲ್ಲಿ ವಿವಾಹ-ಉಪನಯನ-ಗƒಹಪ್ರವೇಶದಂತಹ ಕಾರ್ಯಕ್ರಮಗಳಿಗೆ ನಿಷಿದ್ಧಗೊಳಿಸಿದ್ದಾರೆ. ಇದೊಂದು ಪದ್ಧತಿಯಾಗಿ ಬಂದಿದೆ. ಆದರೆ ಮಾನವನಿಗೆ ಶ್ರೀ ಮಹಾವಿಷ್ಣು ಧನುರ್ಮಾಸ ಪೂಜೆ ಮಾಡುವ ಅವಕಾಶ ನೀಡಿದ್ದು ಈ ಪೂಜೆಯಿಂದ ಮಾನವನ ಜನ್ಮ ಜನ್ಮಾಂತರದ ಪಾಪಗಳು ನಾಶವಾಗಿ,ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಕರುಣಿಸಿ ಪೂರ್ಣಾನುಗ್ರಹ ಮಾಡುತ್ತಾನೆ.
ಪೂಜಾ ವಿಧಾನ
ಧನುರ್ಮಾಸದಲ್ಲಿ ಪ್ರತಿ ನಿತ್ಯ ಒಂದು ತಿಂಗಳು ಸೂರ್ಯೋದಯದ ಮುಂಚೆ ಪೂಜೆ ಮಾಡಬೇಕು. ಮೊದಲ ಹದಿನೈದು ದಿನ ಮಹಾವಿಷ್ಣುವಿಗೆ ನೈವೇದ್ಯಕ್ಕೆ ಸಕ್ಕರೆ ಅಥವಾ ಬೆಲ್ಲ-ಅಕ್ಕಿ-ಹೆಸರು ಬೆಳೆ ಬೆರೆಸಿ ನಂತರ ಬೇಯಿಸಿ(ಪೊಂಗಲ್) ಹುಗ್ಗಿ ತಯಾರಿಸಿ ಶ್ರೀ ಹರಿ(ಶ್ರೀ ಮಹಾವಿಷ್ಣು)ಗೆ ಅರ್ಪಿಸಬೇಕು. ಉಳಿದ ಹದಿನೈದು ದಿನ ಖಾರದ ಪೊಂಗಲ್ ತಯಾರಿಸಿ ನೈವೇದ್ಯ ಮಾಡಬೇಕು ಎಂಬ ಪದ್ಧತಿ ಇದೆ. ಈ ಧನುರ್ಮಾಸ ವ್ರತದ ಪೂಜೆಯನ್ನು ಋಷಿ ಶ್ರೇಷ್ಠರಾದ ವಿಶ್ವಾಮಿತ್ರರು-ಗೌತಮರು-ಅಗಸ್ತ$Âರು ಹಾಗೂ ಭೃಗುಮುನಿಗಳ ಸಹಿತ ದೇವಾನುದೇವತೆಗಳು ಆಚರಿಸಿ ಶ್ರೀ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಪಾರ್ವತಿದೇವಿ ಈ ಧನುರ್ಮಾಸ ಆಚರಿಸಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ.
-ವೈ. ಎನ್. ವೆಂಕಟೇಶಮೂರ್ತಿ ಭಟ್ಟ
ಪ್ರಧಾನ ಅರ್ಚಕರು, ಶ್ರೀ ಮುಖ್ಯಪ್ರಾಣ ದೇವಸ್ಥಾನ ದೊಡ್ಮನೆಬೆಟ್ಟು ಕೋಟೇಶ್ವರ