ಸಂಘಟಿತ ಹಿಂದುತ್ವದಿಂದ ದೇಶ ಸುಭದ್ರ: ಕುಂಟಾರು ರವೀಶ್ ತಂತ್ರಿ
ಪುಂಜಾಲಕಟ್ಟೆ ಸೆ. 16: ಜಗತ್ತಿನ ಏಕತೆ ಮತ್ತು ಶಾಂತಿಗಾಗಿ ಸನಾತನ ಹಿಂದೂ ಸಂಸ್ಕೃತಿ ಉಳಿಸುವುದರ ಜತೆಗೆ ಯಾವುದೇ ಜಾತಿ, ಪಂಗಡಗಳ ತಾರತಮ್ಯವಿಲ್ಲದೆ ಸಂಘಟಿತರಾಗುವ ಮೂಲಕ ದೇಶವನ್ನು ಸುಭದ್ರ ಮತ್ತು ಬಲಿಷ್ಠಗೊಳಿಸಲು ಸಾಧ್ಯವಿದೆ. ಇದಕ್ಕಾಗಿ ಯುವಜನತೆಗೆ ಬಾಲ್ಯದಿಂದಲೇ ಸಂಸ್ಕಾರ ಮತ್ತು ಧಾರ್ಮಿಕತೆ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕುಂಟಾರು ರವೀಶ್ ತಂತ್ರಿ ಅವರು ಹೇಳಿದರು.
ಸಿದ್ದಕಟ್ಟೆ ಹಿಂದೂ ಹಿತರಕ್ಷಣ ವಿಶ್ವಸ್ಥ ಮಂಡಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಸೆ. 14ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಮಂಗಳೂರು ಮಾತೃಭೂಮಿ ಸಹಕಾರಿ ಸಂಘದ ನಿರ್ದೇಶಕ ಕೃಷ್ಣ ಕೊಂಪದವು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಆರಂಬೋಡಿ ಬೂಬ ಮಾಸ್ತರ್, ಮುಖ್ಯಶಿಕ್ಷಕ ರಾಜೇಶ ನೆಲ್ಯಾಡಿ ಮತ್ತಿತರರು ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಹೇಮಚಂದ್ರ ಗೌಡ, ಪ್ರಮುಖರಾದ ವಸಂತ ಓಣಿದಡಿ, ದೇವಪ್ಪ ಕಣಿಯೂರು, ಕೇಶವ ಶಬರೀಶ, ಗಂಗಾಧರ ಗೌಡ ಕುಕ್ಕೇಡಿ, ಮಹಿಳಾ ಸಮಿತಿ ಅಧ್ಯಕ್ಷೆ ಉಷಾ ಕಿರಣ್ ಮತ್ತಿತರರಿದ್ದರು.
ಸಮ್ಮಾನ
ನಾಟಿವೈದ್ಯ ರಾಜಾರಾಮ ಶೆಣೈ ನಡಿಬೈಲು ಮತ್ತು ರಾಷ್ಟ್ರೀಯ ಕರಾಟೆಪಟು ನಿತೇಶ್ ಸಂಗಬೆಟ್ಟು ಅವರನ್ನು ಸಮ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಸಂದೇಶ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ಉಮೇಶ ಗೌಡ ಮಂಚಕಲ್ಲು ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.